ಪುತ್ತೂರು: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಅಧೀನಕ್ಕೆ ಒಳಪಟ್ಟ ಜಮೀನು ಪುತ್ತೂರು ನಗರದ ಬೋಳ್ವಾರ್ ಎಂಬಲಿದ್ದು ಅದನ್ನು ಗುಜರಿ ವ್ಯಾಪಾರಿಯೊಬ್ಬರು ಅತಿಕ್ರಮಿಸಿದ್ದರು. ಅದನ್ನೀಗ ಹಿಂದೂ ಜಾಗರಣೆ ವೇದಿಕೆ ಸ್ವಚ್ಚಗೊಳಿಸಿ ಮತ್ತೆ ದೇವಳಕ್ಕೆ ಒಪ್ಪಿಸುತ್ತಿದ್ದು ಈ ಹಿನ್ನಲೆಯಲ್ಲಿ ಅದೇ ಸ್ಥಳದಲ್ಲಿ ಮಾ.24 ರಂದು ಆಶ್ಲೇಷ ಬಲಿ, ಅರ್ಧಏಕಾಹ ಭಜನೆ, ಧಾರ್ಮಿಕ ಸಭೆ ನಡೆಯಲಿದೆ ಎಂದು ಹಿಂದೂ ಜಾಗರಣ ವೇದಿಕೆ ಮಂಗಳೂರು ವಿಭಾಗ ಸಹ ಸಂಚಾಲಕ ಅಜಿತ್ ಹೊಸಮನೆ ಹೇಳಿದರು.
ಬೊಳುವಾರು ಓಂ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದ ಬಳಿ ದಕ್ಷಿಣ ಭಾರತದ ಪ್ರಸಿದ್ದ ನಾಗ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯಕ್ಕೆ ಸೇರಿದ 1.57 ಜಮೀನಿದ್ದು ಅದನ್ನು 1965ರಲ್ಲಿ ಪೆರ್ನೆ ಸಂಜೀವ ರೈ ಎಂಬವರಿಗೆ ಗೇಣಿ ನೀಡಲಾಗಿತ್ತು ಎಂದು ಅಜೀತ್ ರೈ ತಿಳಿಸಿದರು.
ನಂತರದ ದಿನಗಳಲ್ಲಿ ಈ ಜಾಗಕ್ಕೆ ಸಂಬಂಧಿಸಿದಂತೆ ಹಲವು ವಿದ್ಯಮಾನಗಳು ನಡೆದಿದ್ದು, ಬಳಿಕ ಈ ಜಾಗವನ್ನು ಮರಳಿ ಪಡೆಯಲು ದೇಗುಲದಿಂದ ಕಾನೂನು ಹೋರಾಟ ನಡೆಸಲಾಗಿತ್ತು. ಹೈಕೋರ್ಟು ಹಾಗೂ ಸುಪ್ರೀಂ ಕೋರ್ಟು ಮೆಟ್ಟಿಲೇರಿದ ಈ ಪ್ರಕರಣದಲ್ಲಿ 2014 ರಲ್ಲಿ ದೇವಸ್ಥಾನದ ಪರ ತೀರ್ಪು ಬಂದಿತ್ತು. ಅದರೆ ಬಳಿಕ ಸಂಬಂಧಪಟ್ಟವರು ಇಚ್ಚಾ ಶಕ್ತಿ ಪ್ರದರ್ಶಿಸದ ಹಿನ್ನಲೆಯಲ್ಲಿ ಜಮೀನು ಕ್ಷೇತ್ರಕ್ಕೆ ಹಸ್ತಾಂತರಗೊಂಡಿರಲಿಲ್ಲ ಎಂದರು.
ಸಂಬಂಧಿಸಿದ ಸ್ಥಳದಲ್ಲಿ ಹಲವು ದಶಕಗಳಿಂದ ಅಕ್ರಮವಾಗಿ ಗುಜುರಿ ಅಂಗಡಿ ಕಾರ್ಯಚರಿಸುತಿತ್ತು. ಜಾಗವನ್ನು ಸ್ವಾಧೀನ ಪಡೆಯುವಂತೆ ನ್ಯಾಯಾಲಯದ ಸ್ಪಷ್ಟ ಸೂಚನೆಯಿದ್ದರೂ, ಅಧಿಕಾರಿಗಳ ನಿರ್ಲಕ್ಷ್ಯತನದಿಂದ ತೆರವಾಗಿರಲಿಲ್ಲ. ಈ ಕುರಿತು ಹಿಂದು ಜಾಗರಣ ವೇದಿಕೆ ಎಲ್ಲಾ ದಾಖಲೆಗಳನ್ನು ಕಲೆ ಹಾಕಿ, ಸಮಗ್ರವಾಗಿ ಅಧ್ಯಯನ ಮಾಡಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಸಮಿತಿ ಜೊತೆ ಸೇರಿ ತೆರವು ಕಾರ್ಯ ನಡೆಸಿತ್ತು.
ಈಗಾಗಲೇ ಅತಿಕ್ರಮಣವನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗಿದೆ. ಈ ಸಂದರ್ಭ ಸುಮಾರು 300 ಟನ್ ನಷ್ಟು ತ್ಯಾಜ್ಯ ಆ ಪ್ರದೇಶದಲ್ಲಿ ಹುಗಿದಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಅದನ್ನು ಹಿಂಜಾವೇ ಸ್ವಚ್ವಗೊಳಿಸಿದೆ ಎಂದರು.
ಜನ ಜಾಗೃತಿ ಸಭೆ
ಮಾ.24ರಂದು ಪ್ರಥಮವಾಗಿ ಆಶ್ಲೇಷ ಬಲಿ, ಧಾರ್ಮಿಕ ಸಭೆ ಮತ್ತು ಅರ್ಧಏಕಾಹ ಭಜನೆ ನಡೆಯಲಿದೆ. ಅಂದು ಬೆಳಿಗ್ಗೆ ಗಣಪತಿ ಹೋಮ, ಅರ್ಧ ಏಕಾಹ ಭಜನೆ ಆರಂಭ, ಸಂಜೆ ಆಶ್ಲೇಷ ಬಲಿ ಬಳಿಕ ಜನಜಾಗೃತಿ ಸಭೆ ನಡೆದು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದರು
ಜನಜಾಗೃತಿ ಸಭೆಯು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ಎಂ.ಕೆ.ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ಧಾರ್ಮಿಕ ಮುಖಂಡ ಬ್ರಹ್ಮಶ್ರೀ ವೇ ಮೂ ಕುಂಟಾರು ರವೀಶ ತಂತ್ರಿಯವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಹಿಂದು ಜಾಗರಣ ವೇದಿಕೆ ಕರ್ನಾಟಕ ದಕ್ಷಿಣ ಪ್ರಾಂತ ಸಂಪರ್ಕ ಪ್ರಮುಖ್ ರವಿರಾಜ ಕಡಬ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್‌ರಾಮ್ ಸುಳ್ಳಿ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಹಿಂದು ಜಾಗರಣ ವೇದಿಕೆ ತಾಲೂಕು ಸಂಚಾಲಕ ದಿನೇಶ್ ಪಂಜಿಗ, ಸದಸ್ಯ ಪುಷ್ಪರಾಜ್ ದರ್ಬೆ ಉಪಸ್ಥಿತರಿದ್ದರು.