ಭೋಪಾಲ್: ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ನೃತ್ಯ ಮಾಡುತ್ತಿದ್ದಂತೆ ಸರ್ಕಾರಿ ನೌಕರರೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಅಂಚೆ ಇಲಾಖೆಯ ಸಹಾಯಕ ನಿರ್ದೇಶಕ ಸುರೇಂದ್ರ ಕುಮಾರ್ ದೀಕ್ಷಿತ್ ಅವರು ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಅವರಿಗೆ ಹೃದಯ ಸ್ತಂಭನವಾಗಿದೆ (Heart Attack) ಎಂದು ವರದಿಗಳು ಹೇಳಿವೆ.
ಅವರು ಕುಸಿದು ಬೀಳುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಹಿಂದಿ ಹಾಡಿಗೆ ತನ್ನ ಸಹೋದ್ಯೋಗಿಗಳೊಂದಿಗೆ ನೃತ್ಯ ಮಾಡುತ್ತಿದ್ದಾಗ ಅವರು ಕುಸಿದು ಬೀಳುತ್ತಿರುವುದು ವಿಡಿಯೋದಲ್ಲಿ ಕಂಡು ಬರುತ್ತದೆ.
ತಕ್ಷಣವೇ ಅಲ್ಲಿ ನೆರೆದಿದ್ದ ಜನರು ಅವರ ಸಹಾಯಕ್ಕೆ ಧಾವಿಸುತ್ತರಾದರೂ ಅವರ ಜೀವ ಉಳಿಸಲು ಸಾಧ್ಯವಾಗಿಲ್ಲ ಎಂದು ವರದಿಯಾಗಿವೆ.
ಅಂಚೆ ಇಲಾಖೆಯು 34ನೇ ಅಖಿಲ ಭಾರತ ಅಂಚೆ ಹಾಕಿ ಪಂದ್ಯಾವಳಿಯನ್ನು ಮಾರ್ಚ್ 13 ರಿಂದ ಮಾರ್ಚ್ 17 ರವರೆಗೆ ಭೋಪಾಲ್‌ನ ಮೇಜರ್ ಧ್ಯಾನಚಂದ್ ಹಾಕಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದು, ಮಾ.17ರಂದು ಫೈನಲ್ ಪಂದ್ಯ ನಿಗದಿಯಾಗಿತ್ತು. ಮಾ.16ರಂದು ಸಂಜೆ ಇಲಾಖೆಯ ಕಚೇರಿ ಆವರಣದಲ್ಲಿಯೇ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಈ ಘಟನೆ ನಡೆದಿದೆ.