Puttur Congress Ticket ಪುತ್ತೂರು : ಮಾ 21 : ಮುಂಬರುವ ಚುನಾವಣೆಯಲ್ಲಿ ಪುತ್ತೂರು ವಿದಾನ ಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿಯಾಗಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರಿಗೆ ಟಿಕೆಟ್ ನೀಡುವಂತೆ ಪುತ್ತೂರು ಮಹಿಳಾ ಕಾಂಗ್ರೆಸ್ ಒತ್ತಾಯಿಸಿದೆ.
ವಾರ್ತಾಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ಸಿನ ಮಹಿಳಾ ವಿಭಾಗದ ಮುಖಂಡರು ಮಾತನಾಡಿ “ ದೂರದರ್ಶಿತ್ವ ಹೊಂದಿದ ನಾಯಕಿ ಶಕುಂತಳಾ ಟಿ ಶೆಟ್ಟಿಯವರು ಪುತ್ತೂರಿನ ಶಾಸಕಿಯಾಗಿ ಹಲವು ಅಭಿವೃದ್ದಿ ಕೆಲಸಗಳನ್ನು ಮಾಡಿದ್ದು, ಒಂದಷ್ಟು ಕೆಲಸಗಳು ಅರ್ಧದಲ್ಲಿ ಬಾಕಿಯಾಗಿವೆ. ಕಳೆದ ಬಾರಿ ಅವರು ಚುನಾವಣೆಯಲ್ಲಿ ಸೋತ ಕಾರಣ ಆ ಅಭಿವೃದ್ದಿ ಕೆಲಸಗಳನ್ನು ಪೂರ್ಣ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಈ ಬಾರಿ ಮತ್ತೆ ಅವಕಾಶ ಕೊಟ್ಟರೆ ನೆನೆಗುದಿಗೆ ಬಿದ್ದಿರುವ ಪುತ್ತೂರು ಮೆಡಿಕಲ್ ಕಾಲೇಜ್ ಸ್ಥಾಪನೆ ಸಹಿತ ಹಲವು ಕಾರ್ಯಗಳನ್ನು ಪೂರ್ಣಗೊಳಿಸಲಿದ್ದಾರೆ ಎಂದರು.
ಶೆಟ್ಟಿಯವರು ಅನುಭವಿ ರಾಜಕಾರಣಿ, ಎರಡು ಬಾರಿ ಶಾಸಕರಾಗಿದ್ದ ಅವರು ಜನರ ಸಮಸ್ಯೆಗಳನ್ನು ಅತೀ ಹತ್ತಿರದಿಂದ ಬಲ್ಲವರಾಗಿದ್ದಾರೆ. ಕ್ಷೇತ್ರಕ್ಕೆ ಸಾವಿರಾರು ಕೋಟಿ ಅನುದಾನ ತಂದವರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪುರುಷ ಮತದಾರರಿಗಿಂತ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿದೆ. ಮಹಿಳಾ ಅಭ್ಯರ್ಥಿಗಳಿಗೆ ಈ ಬಾರಿ ಪಕ್ಷ ಹೆಚ್ಚಿನ ಅವಕಾಶ ಕೊಡಲು ನಿರ್ಧರಿಸಿದ್ದು, ಈ ಹಿನ್ನಲೆಯಲ್ಲಿ ಪುತ್ತೂರು ಕ್ಷೇತ್ರದಲ್ಲಿ ಮಹಿಳಾ ಅಭ್ಯರ್ಥಿಗೆ ಟಿಕೆಟ್ ನೀಡಲು ಹೆಚ್ಚಿನ ಅವಕಾಶಗಳಿವೆ. ಈ ಅವಕಾಶವನ್ನು ಶಕುಂತಳಾ ಶೆಟ್ಟಿಯವರಿಗೆ ನೀಡಬೇಕು ಎನ್ನುವುದು ನಮ್ಮ ಆಗ್ರಹ . ಇದರ ಅರ್ಥ ಬೇರೆ ಮಹಿಳಾ ಅಭ್ಯರ್ಥಿಗೆ ನೀಡಬಾರದು ಎನ್ನುವುದಲ್ಲ . ಉಳಿದವರಿಗಿಂತ ಇವರಿಗೆ ಹೆಚ್ಚು ಅನುಭವವಿದೆ ಎನ್ನುವುದು ಉಲ್ಲೇಖನೀಯ ಎಂದರು.

ಈ ಬಾರಿಯ ಚುನಾವಣೆ ಬಹುಶ: ಶಕುಂತಳಾ ಶೆಟ್ಟಿಯವರು ಸ್ಪರ್ಧಿಸುವ ಕೊನೆಯ ಚುನಾವಣೆ . ಹಾಗಾಗಿ ಈ ಬಾರಿ ಅವರಿಗೆ ಅವಕಾಶ ನೀಡಬೇಕು. ಈ ಕುರಿತು ಪಕ್ಷದ ವರಿಷ್ಠರಿಗೆ ಮಾಹಿತಿ ನೀಡಲಾಗಿದೆ. ಹಾಗಾಂತ ಟಿಕೆಟ್ ನೀಡುವುದು ಹೈಕಮಾಂಡಿಗೆ ಬಿಟ್ಟ ವಿಚಾರ. ಯಾರಿಗೆ ಟಿಕೆಟ್ ಸಿಕ್ಕರೂ ನಾವು ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡಲಿದ್ದೇವೆ ಎಂದರು.
ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾರದಾ ಅರಸ್ಸು, ಕೆಪಿಸಿಸಿಕಾರ್ಯದರ್ಶಿ ಸಾಯಿರ ಜುಬೇರ್, ಬ್ಲಾಕ್ ಉಪಾಧ್ಯಕ್ಷೆ ವಿಶಾಲಾಕ್ಷಿ ಬನ್ನೂರು ಬ್ಲಾಕ್ ಕೋಶಾಧಿಕಾರಿ, ಮಹಿಳಾ ಕಾಂಗ್ರೆಸ್ ಸದಸ್ಯೆ ವಿಲ್ಮಾ ಗೊನ್ಸಾಲಿಸ್, ಕೋಶಾಧ್ಯಕ್ಷೆ ಶುಭಮಾಲಿನಿ ಮಲ್ಲಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.