ಪುತ್ತೂರು:ಮುಂದಿನ ವಿಧಾನಸಭಾ ಚುನಾವಣೆಗೆ ಬಿಜೆಪಿಯು ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಪ್ರತ್ಯೇಕ ಪ್ರಣಾಳಿಕೆಯನ್ನು ರಚಿಸಲಿದ್ದು, ಅದರಲ್ಲಿ ಇಲ್ಲಿನ ಅಗತ್ಯಗಳು ಹಾಗೂ ಜನರ ಬೇಡಿಕೆಗಳನ್ನು ಸೇರ್ಪಡೆಗೊಳಿಸಿ, ಕಾಲಮಿತಿಯಲ್ಲಿ ಪೂರ್ಣಗೊಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವದು ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ.
ಪುತ್ತೂರು ಬಿಜೆಪಿ ವತಿಯಿಂದ ಪ್ರಣಾಳಿಕೆ ಸಲಹಾ ಸಂಗ್ರಹ ಅಭಿಯಾನದದ ನಿಟ್ಟಿನಲ್ಲಿ ಟೌನ್‌ಬ್ಯಾಂಕ್ ಸಭಾಂಗಣದಲ್ಲಿ ಆಯೋಜಿಸಲಾದ ಸಭೆಯಲ್ಲಿ ಅವರು ಮಾತನಾಡಿದರು.
ಪುತ್ತೂರಿನಲ್ಲಿ ಐಟಿ ಪಾರ್ಕ್ ನಿರ್ಮಿಸಬೇಕು, ಆ ಮೂಲಕ ಇಲ್ಲಿನ ಯುವ ಜನರಿಗೆ ಉದ್ಯೋಗ ಒದಗಿಸಬೇಕು ಎನ್ನುವುದು ಇಲ್ಲಿನ ಬಹ ಜನರ ಕನಸು . ಇದನ್ನು ನನಸು ಮಾಡುವ ನಿಟ್ಟಿನಲ್ಲಿ ಪಕ್ಷವು ಕಟಿ ಬದ್ದವಾಗಿದ್ದು, ಈಗಾಗಲೇ ಜಾಗ ಗುರುತಿಸುವ ಕೆಲಸಕ್ಕೆ ಮುಂದಾಗಿದೆ. ಕೊಯಿಲದಲ್ಲಿ ಪಶು ಸಂಗೋಪನಾ ಇಲಾಖೆಯಲ್ಲಿರುವ ಒಂದು ಸಾವಿರ ಎಕರೆಯಲ್ಲಿ, 500 ಎಕ್ರೆಯನ್ನು ಈ ಉದ್ದೇಶಕ್ಕೆ ನೀಡುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಭೂಮಿಯ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಹಾಗು ಸಂಪರ್ಕ ಸೇತುವೆ ರಸ್ತೆಗಳ ನಿರ್ಮಾನದ ಉದ್ದೇಸದಿಂದ ಕ್ಷೇತ್ರ ವ್ಯಾಪ್ತಿಯಲ್ಲಿ 70 ಕ್ಕೂ ಹೆಚ್ಚು ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಿದ್ದೇವೆ. ಬೆಳ್ಳಿಪ್ಪಾಡಿ ಗ್ರಾಮದ ಕಟಾರದಲ್ಲಿ 140 ಕೋ ರೂ ವೆಚ್ಚದಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸುವ ಉದ್ದೇಶದಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಸಲಹೆ ಸೂಚನೆ
ಪ್ರಣಾಳಿಕೆ ರಚನೆಗೆ ಸಭೆಯಲ್ಲಿದ್ದವರು ಸಲಹೆ ಸೂಚನೆಗಳನ್ನು ನೀಡಿದರು. ಪುತ್ತೂರಿನ ಸಮಗ್ರ ಅಭಿವೃದ್ದಿಗೆ ಬೇಕಾದ ಯೋಜನೆಗಳ ಕುರಿತು ಹಾಗೂ ಈಗಿನ ವ್ಯವಸ್ಥೆಯಲ್ಲಿರುವ ಕುಂದು ಕೊರತೆಗಳ ಬಗ್ಗೆ ಪ್ರಣಾಳಿಕೆ ಸಮಿತಿಗೆ ಮಾಹಿತಿ ನೀಡಿದರು
ವರ್ತಕ ಸಂಘದ ಕಾರ್ಯದರ್ಶಿ ಉಲ್ಲಾಸ್ ಪೈ ಮಾತನಾಡಿ, ಉಚಿತ ನೀಡುವುದಿದ್ದರೆ ಎಲ್ಲರಿಗೂ ವೈದ್ಯಕೀಯ ಶಿಬಿರಗಳನ್ನು ಸರಕಾರದ ಕಡೆಯಿಂದ ನಡೆಸಿ. ಅಕ್ಕಿಯ ಮೇಲಿನ ಜಿಎಸ್‌ಟಿ ರದ್ದುಗೊಳಿಸಬೇಕು. ಶೈಕ್ಷಣಿಕ ಸಾಲ ಕೇಳಿದಾಗ ಉಂಟುಮಾಡುತ್ತಿರುವ ಅಡ್ಡಿಗಳನ್ನು ಸರಿಪಡಿಸಿ ಸರಕಾರ ಘೋಷಿಸಿದಂತೆ ನೀಡಬೇಕು. ಸಣ್ಣ ವ್ಯಾಪಾರಿಗಳು, ಅಂಗಡಿಗಳ ನೌಕರರಿಗೆ ೬೦ ವರ್ಷಗಳ ಬಳಿಕ ಅನುಕೂಲವಾಗುವಂತೆ ಜೀವನ ಭದ್ರತೆಯ ಕ್ರಮಗಳನ್ನು ಪ್ರಣಾಳಿಕೆಯಲ್ಲಿ ಘೋಷಿಸಬೇಕು ಎಂದು ಸಲಹೆ ನೀಡಿದರು.
ಪುತ್ತೂರಿನ ವೈದ್ಯ ಡಾ. ಸುರೇಶ್ ಪುತ್ತೂರಾಯ ಮಾತನಾಡಿ, ಸರಕಾರಿ ಇಲಾಖೆಗಳ ಹುದ್ದೆಎಗಳನ್ನು ಗರಿಷ್ಠ ಪ್ರಮಾಣದಲ್ಲಿ ಭರ್ತಿ ಮಾಡಬೇಕು. ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಸಿಗಬೇಕು. ನಮ್ಮ ಮಾತೃಭಾಷೆ ತುಳುವಿಗೆ ವಿಶೇಷ ಸ್ಥಾನಮಾನ ಸಿಗಬೇಕು ಎಂದರು.
ವಾಮನ ಪೈ ಮಾತನಾಡಿ, ನಗರಸಭಾ ವ್ಯಾಪ್ತಿಯಲ್ಲಿ ಮನೆ ಕಟ್ಟುವವರಿಗೆ ವಿವಿಧ ರೀತಿಯ ತೊಂದರೆಗಳಾಗುತ್ತಿದ್ದು, ಅದನ್ನು ಬಗೆಹರಿಸಬೇಕು. ಸರಕಾರಿ ಆಸ್ಪತ್ರೆ ಅಗತ್ಯವಾಗಿ ಮೇಲ್ದರ್ಜೆಗೇರಿಸಬೇಕು. ಉದ್ಯೋಗ ಮತ್ತು ಸ್ವೋದ್ಯೋಗಕ್ಕೆ ವ್ಯವಸ್ಥೆ ಕಲ್ಪಿಸಬೇಕು ಎಂದು ಸಲಹೆ ನೀಡಿದರು.
ರವೀಂದ್ರ ಮಾತನಾಡಿ, ಸಹಕಾರಿ ಸಂಸ್ಥೆಗಳು ಹಾಗೂ ಬ್ಯಾಂಕ್ಗಳಲ್ಲಿ ಡೆಪಾಸಿಟ್‌ಗೆ ಇನ್ಶೂರೆನ್ಸ್ ಹಣವನ್ನು ಕನಿಷ್ಠ ೧೦ ಲಕ್ಷಕ್ಕೆ ಹೆಚ್ಚಿಸಬೇಕು. ಸಕಾಲ ಯೋಜನೆಗೆ ಇನ್ನಷ್ಟು ಶಕ್ತಿ ತುಂಬಬೇಕು. ಕಳೆದ ಸಲದ ಪ್ರಣಾಳಿಕೆಯ ಕುರಿತು ವಿಮರ್ಶೆ ನಡೆಸಬೇಕು ಎಂದು ಹೇಳಿದರು.
ಮಾಹಿತಿ ಹಕ್ಕುಗಳ ಹೋರಾಟಗಾರ ಡಿ.ಕೆ. ಭಟ್ ಮಾತನಾಡಿ, ಪುತ್ತೂರಿನ ಕಾರ್ಮಿಕ ಇಲಾಖೆಗೆ ಸ್ವಂತ ಕಟ್ಟಡ ಬೇಕು. ಸಾರ್ವಜನಿಕ ವ್ಯವಸ್ಥೆಗಳು ಆನ್ ಲೈನ್‌ನಲ್ಲಿ ಸಮರ್ಪಕವಾಗಿ ಲಭ್ಯವಾಗಬೇಕು. ಕಟ್ಟಡ ಖಾತೆಗಳು ಶೀಘ್ರ ಲಭ್ಯವಾಗುವ ವ್ಯವಸ್ಥೆ ಆಗಬೇಕು ಎಂದರು.
ಕುಂಬ್ರ ಸಿಎ ಬ್ಯಾಂಕ್ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ ಮಾತನಾಡಿ, ಅಸಡಿಕೆ, ತೆಂಗು, ಕಾಳುಮೆಣಸುಗಳಿಗೆ ನಿಗದಿತ ಬೆಂಬಲ ಬೆಲೆ ಕೊಡಬೇಕು. ಹೈನುಗಾರರಿಗೆ ಪ್ರಯೋಜನವಾಗುವಂತೆ ಹಾಲಿನ ದರ ಏರಿಸಬೇಕು. ಕೆರೆಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಸಲಹೆ ನೀಡಿದರು.
ವಿಹಿಂಪ ಜಿಲ್ಲಾಧ್ಯಕ್ಷ ಡಾ. ಕೃಷ್ಣ ಪ್ರಸನ್ನ ಮಾತನಾಡಿ, ನೈಜ ಫಲಾನುಭವಿಗಳಿಗೆ ಯೋಜನೆಗಳು ತಲುಪುವಂತೆ ಮಾಡಬೇಕು. ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲಿರುವ ಸುಳ್ಳು ಕೇಸುಗಳನ್ನು ತೆಗೆಯಬೇಕು ಎಂದು ಹೇಳಿದರು.
ಜೆಸಿಐನ ಕೃಷ್ಣಮೋಹನ್ ಮಾಥನಾಡಿ, ಅಲ್ಲಲ್ಲಿ ಚೆಕ್ ಡ್ಯಾಂ, ವೆಂಟೆಡ್ ಡ್ಯಾಂ ಗಳನ್ನು ನಿರ್ಮಿಸಬೇಕು. ಐಟಿ ಪಾರ್ಕ್ ಪುತ್ತೂರಿನಲ್ಲಿ ಆಗಬೇಕು ಎಂದರು. ಕೇಶವ ಪೈ ಮಾತನಾಡಿ, ಬಿಜೆಪಿ ಸರಕಾರ ಬಂದ ಬಳಿಕ ಜಿಲ್ಲೆಯಲ್ಲಿ ಕೋಮುವಾದ ಇಲ್ಲ. ಈ ವಿಚಾಋಗಳನ್ನು ಪ್ರಣಾಳಿಕೆಗಳಲ್ಲಿ ತಿಳಿಸಬೇಕು ಎಂದರು.
ವೇದಿಕೆಯಲ್ಲಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲ ಅಧ್ಯಕ್ಷ ಪಿ.ಜಿ. ಜಗನ್ನಿವಾಸ್ ರಾವ್, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ವಿಭಾಗ ಸಹ ಪ್ರಭಾರಿ ಗೋಪಾಲಕೃಷ್ಣ ಹೇರಳೆ, ಜಿಲ್ಲಾ ಉಪಾಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ, ನಗರಸಭಾ ಅಧ್ಯಕ್ಷ ಕೆ. ಜೀವಂಧರ್ ಜೈನ್, ಜಿಲ್ಲಾ ಪ್ರಣಾಳಿಕೆ ಸಮಿತಿ ಸಹ ಸಂಚಾಲಕ ಅಕ್ಷಯ ಆಳ್ವ ಉಪಸ್ಥಿತರಿದ್ದರು.
ತಾಲೂಕು ಪ್ರಣಾಲಿಕೆ ಸಮಿತಿ ಸಂಚಾಲಕ ಡಿ. ಶಂಭು ಭಟ್ ಸ್ವಾಗತಿಸಿ, ಸಮಿತಿಯ ವಿದ್ಯಾ ಆರ್. ಗೌರಿ ವಂದಿಸಿದರು. ಪ್ರಣಾಳಿಕೆ ಸಮಿತಿ ಸಂಚಾಲಕರಾದ ಚಂದ್ರಶೇಖರ್ ರಾವ್ ಬಪ್ಪಳಿಗೆ ಹಾಗೂ ರಾಜೇಶ್ ಬನ್ನೂರು ಕಾರ್ಯಕ್ರಮ ನಿರ್ವಹಿಸಿದರು.