ಉಳ್ಳಾಲ, (Ullala) ಮಾ 04: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆಪುರ ಎಂಬಲ್ಲಿ ಇಬ್ಬರು ದುಷ್ಕರ್ಮಿಗಳು ಯುವಕನೊಬ್ಬನಿಗೆ ಚೂರಿಯಿಂದ ಇರಿದು ಹತ್ಯೆಗೆ ಯತ್ನಿಸಿದ ಘಟನೆ ಮಾ 3 ರಂದು ತಡ ರಾತ್ರಿ ನಡೆದಿದೆ. ಕೋಟೆಪುರ ನಿವಾಸಿ ಸದಕತ್ತುಲ್ಲಾ (34) ಇರಿತಕ್ಕೆ ಒಳಗಾಗಿದ್ದು ಈತನ ಮನೆಯೆದುರೆ ಕೃತ್ಯ ನಡೆದಿದೆ.
ಸ್ಥಳೀಯ ನಿವಾಸಿಗಳಾದ ಛಬ್ಬಿ ಅಲಿಯಾಸ್ ಕಬೀರ್ ಮತ್ತು ರಾಝಿಕ್ ಕೃತ್ಯ ಎಸಗಿದವರು ಎಂದು ಶಂಕಿಸಲಾಗಿದೆ . ಪೂರ್ವ ದ್ವೇಷದಿಂದ ಕೃತ್ಯ ಎಸಗಿರುವುದಾಗಿ ಮೂಲಗಳಿಂದ ತಿಳಿದು ಬಂದಿದೆ. ಇಬ್ಬರಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಗಾಯಾಳುವನ್ನು ತಕ್ಷಣ ಆತನ ಮನೆಯವರು ಆಸ್ಫತ್ರೆಗೆ ದಾಖಲಿಸಿರುವುದಾಗಿ ವರದಿಯಾಗಿದೆ.
ಫಿಶ್ ಆಯಿಲ್ ಮಿಲ್ ಮಾಲೀಕರಿಂದ ಬೆದರಿಸಿ ಹಣ ಪಡೆದಿರುವ ವಿಚಾರದಲ್ಲಿ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು. ಕೆಲ ತಿಂಗಳುಗಳ ಹಿಂದೆ ಈ ಕುರಿತು ಜಗಳ ನಡೆದು ಆರೋಪಿಗಳ ಪೈಕಿ ಓರ್ವನಿಗೆ ಸದಕತ್ತುಲ್ಲಾ ತಂಡ ಹಲ್ಲೆ ನಡೆಸಿದ್ದು, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಇದಕ್ಕೆ ಪ್ರತೀಕಾರವಾಗಿ ದಾಳಿ ನಡೆದಿದೆ ಎನ್ನಲಾಗುತ್ತಿದೆ.
ನಿನ್ನೆ ತಡ ರಾತ್ರಿ ಸದಕತ್ತುಲ್ಲಾ ಮನೆ ಸಮೀಪ ಬಂದ ದುಷ್ಕರ್ಮಿಗಳು,ಆತನನ್ನು ಮನೆಯಿಂದ ಹೊರಗೆ ಕರೆದು ಚೂರಿ ಇರಿದಿದ್ದಾರೆ ಎನ್ನಲಾಗುತ್ತಿದೆ. ಹೊಟ್ಟೆಯ ಭಾಗಕ್ಕೆ ಚೂರಿಯಿಂದ ಇರಿಯಲಾಗಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.
