Robbery at Sullia ಸುಳ್ಯ: ನಾಲ್ಕು ತಿಂಗಳ ಹಿಂದೆ ತೋಟದ ಕೆಲಸಕ್ಕೆಂದು ಬಂದ ಇಬ್ಬರು ಕೂಲಿ ಕಾರ್ಮಿಕರು ಮನೆ ಯಜಮಾನಿಯ ಕೊಲೆಗೆ ಯತ್ನಿಸಿ ಚಿನ್ನ, ನಗದು ದರೋಡೆಗೆ ಯತ್ನಿಸಿದ ಘಟನೆ ಸುಳ್ಯದ ಪಂಬೆತ್ತಾಡಿ ಎಂಬಲ್ಲಿ ಮಾ 2 ರಂದು ರಾತ್ರಿ ನಡೆದಿದೆ. ಈ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ವರದರಾಜ್ (30) ಹಾಗು ಸೈಜಾನ್ ಪಿ.ಪಿ. (38) ಪ್ರಕರಣದ ಆರೋಪಿಗಳು. ಇವರಿಬ್ಬರು ನಾಲ್ಕು ತಿಂಗಳುಗಳಿಂದ ಕೃತ್ಯ ನಡೆದ ಕರಿಕ್ಕಳ ಗುರುಕೃಪ ವಿಶ್ವನಾಥ್ ಅವರ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು, ಮನೆ ಸಮೀಪದ ಕೊಟ್ಟಿಗೆಯಲ್ಲಿ ವಾಸವಾಗಿದ್ದರು
ಕೃತ್ಯ ನಡೆದ ಗುರುವಾರ ಸಂಜೆ ಆರೋಪಿಗಳಿಬ್ಬರು ಪಂಜ ಪೇಟೆಗೆ ಹೋಗುವುದಾಗಿ ಹೇಳಿ ತಲಾ 200 ರೂ. ಪಡೆದು ಹೊರ ಹೋಗಿ ವಾಪಸ್ಸು ಬಂದಿದ್ದರು. ರಾತ್ರಿ ಗಂಟೆ 9.30ರ ಸುಮಾರಿಗೆ ಏಣಿ ಹತ್ತಿ ಮನೆಯ ಮಹಡಿಗೆ ಆರೋಪಿಗಳು ಬಂದಿದ್ದು, ಅಲ್ಲಿ ಮಲಗಿದ್ದ ಮನೆ ಮಾಲಕ ವಿಶ್ವನಾಥ್ ಅವರ ಪತ್ನಿ ಗಾಯತ್ರಿ(61) ಅವರ ಕೊಲೆಗೆ ಯತ್ನಿಸಿದ್ದಾರೆ.
ಆರೋಪಿ ವರದರಾಜ್ ಗಾಯತ್ರಿಯವರು ಕುತ್ತಿಗೆಯನ್ನು ಅದುಮಿ ಹಿಡಿದು ಚಿನ್ನ ಮತ್ತು ಹಣ ಎಲ್ಲಿದೆ ಎಂದು ಕೇಳಿದ್ದು, ಮನೆಯೊಡತಿ ಇಲ್ಲ ಎಂದಾಗ ಕೊಲೆ ಮಾಡುತ್ತೇನೆ ಎಂದಿದ್ದಾರೆ. ಇನ್ನೊರ್ವ ಆರೋಪಿ ಸೈಜಾನ್ ಗಾಯತ್ರಿ ಅವರ ಎರಡೂ ಕಾಲುಗಳನ್ನೂ ಹಿಡಿದುಕೊಂಡಿದ್ದಾನೆ. ಈ ವೇಳೆ ಗಾಯತ್ರಿ ಅವರ ಬೊಬ್ಬೆ ಕೇಳಿ ಮನೆ ಸಮೀಪ ವಾಸಿಸುತ್ತಿದ್ದ ಸುರೇಶ್ ಹಾಗೂ ಪ್ರೇಮ ಎಂಬವರು ಅಲ್ಲಿಗೆ ದೌಡಯಿಸಿದ್ದಾರೆ. ಅವರಿಬ್ಬರು ಆರೋಪಿಗಳನ್ನು ಪಕ್ಕಕ್ಕೆ ತಳ್ಳಿದ್ದು, ಸುರೇಶ್ ಆರೋಪಿಗಳನ್ನು ಹಿಡಿದಿದ್ದ ವೇಳೆ ಆರೋಪಿ ವರದರಾಜ್ ಹರಿತವಾದ ಆಯುಧದಿಂದ ಗಾಯತ್ರಿ ಅವರ ಕುತ್ತಿಗೆಗೆ ಎರಡು ಕಡೆ ಹಿರಿದ ಪರಿಣಾಮ ಗಾಯವಾಗಿದೆ. ಅವರಿಗೆ ಕಡಬ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಾಳು ಗಾಯತ್ರಿಯವರ ಪತಿ ನಡೆದಾಡುವ ಸ್ಥಿತಿಯಲ್ಲಿ ಇಲ್ಲದಿರುವುದು ಹಾಗೂ ಮನೆಯಲ್ಲಿ ಅವರಿಬ್ಬರೇ ಇರುವುದನ್ನು ಅಲ್ಲಿಗೆ ಕೆಲಸಕ್ಕೆ ಬಂದ ಆರೋಪಿಗಳು ಗಮನಿಸಿದ್ದು, ಕೊಲೆ ಮಾಡಿ ಮನೆಯಲ್ಲಿದ್ದ ಹಣ ಮತ್ತು ಚಿನ್ನಾಭರಣವನ್ನು ದೋಚುವ ಉದ್ದೇಶದಿಂದ ಕೃತ್ಯ ಎಸಗಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.