ಸುಳ್ಯ: ಅಕ್ರಮ-ಸಕ್ರಮ ಸಂಬಂಧಿಸಿ ಲಂಚ (Bribe) ಪಡೆದ ಆರೋಪ ಎದುರಿಸುತ್ತಿದ್ದ ಗ್ರಾಮಕರಣಿಕರೊಬ್ಬರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯವು ಆರೋಪಿ ಮಂಡೆಕೋಲು ಗ್ರಾಮದ ಗ್ರಾಮ ಕರಣಿಕರಾಗಿದ್ದ ಎಸ್. ಮಹೇಶ್ ಗೆ 4 ವರ್ಷಗಳ ಸಾದಾ ಸಜೆ ಹಾಗೂ 70 ಸಾವಿರ ರೂ. ದಂಡ ವಿಧಿಸಿದೆ.
ಗೋಪಾಲಕೃಷ್ಣ ಮಂಡೆಕೋಲು ಎಂಬವರು ಅಕ್ರಮ- ಸಕ್ರಮದ ಆರ್ಜಿ ಸಲ್ಲಿಸಿದ್ದರು. ಅದರ ವಿಲೇವಾರಿಗೆ ಆರೋಪಿ ಗ್ರಾಮಕರಣಿಕ ಎಸ್.ಮಹೇಶ್ 60 ಸಾವಿರ ರೂ. ಲಂಚ ನೀಡಬೇಕು ಎಂದು ಒತ್ತಾಯಿಸಿದ್ದರು. 2016 ರಲ್ಲಿ 45 ಸಾವಿರ ರೂ. ಲಂಚದ ರೂಪದಲ್ಲಿ ಸ್ವೀಕರಿಸುವಾಗ ಭ್ರಷ್ಟಾಚಾರ ನಿಗ್ರಹದಳ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರು.
ಈ ಪ್ರಕರಣ ವಿಚಾರಣೆ ನಡೆಸಿದ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಿ.ಬಿ. ಜಕಾತಿ ಗುರುವಾರ ತೀರ್ಪು ನೀಡಿದ್ದಾರೆ. ಆರೋಪಿ ದಂಡ ಕಟ್ಟಲು ವಿಫಲನಾದಲ್ಲಿ ಮತ್ತೆ 8 ತಿಂಗಳ ಕಾಲ ಸಾದಾ ಸಜೆಗೆ ಆದೇಶಿಸಿದ್ದಾರೆ.
ಪೊಲೀಸ್ ನಿರೀಕ್ಷಕ ದಿನಕರ ಶೆಟ್ಟಿ ಆರಂಭಿಸಿದ್ದ ತನಿಖೆಯನ್ನು ಬಳಕ ಯೋಗೀಶ್ ಕುಮಾರ್ ಮುಂದುವರಿಸಿ, ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಕರ್ನಾಟಕ ಲೋಕಾಯುಕ್ತ ವಿಶೇಷ ಸಾರ್ವಜನಿಕ ಅಭಿಯೋಜಕ ರವೀಂದ್ರ ಮುನಿಪಾಡಿ ಸರಕಾರದ ಪರವಾಗಿ ವಾದ ಮಂಡಿಸಿದ್ದರು.