ಉಡುಪಿ, ಮಾ.3: ಕಾರ್ಕಳ ವಿಧಾನಸಭಾ ಕ್ಷೇತ್ರದ ಹೆಬ್ರಿ ತಾಲೂಕಿನ ಶಿವಪುರ ಗ್ರಾಮದಲ್ಲಿ ಬೇನಾಮಿ ಹೆಸರಲ್ಲಿ ಬಿಜೆಪಿಯ ಮುಖಂಡ ದಂಪತಿಗಳು ಭಾರಿ ಪ್ರಮಾಣದ ಆಸ್ತಿ ಖರೀದಿಗೆ ಸಂಬಂಧಿಸಿ ತನಿಖೆ ನಡೆಸುವಂತೆ ಒತ್ತಾಯಿಸಿ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ಉಡುಪಿ ಲೋಕಾಯುಕ್ತ ಉಡುಪಿ ವಿಭಾಗ ಡಿವೈಎಸ್ಪಿ ಪ್ರಕಾಶ್ ಕೆ.ಸಿ. ಅವರಿಗೆ ದೂರು ಸಲ್ಲಿಸಿದರು.
ಶಿವಪುರ ಗ್ರಾಮದಲ್ಲಿ ಗಜಾನನ ಮತ್ತು ವಿದ್ಯಾ ಸುವರ್ಣ ಎಂಬವರ ಹೆಸರಿನಲ್ಲಿ 67.94 ಎಕರೆ ಜಾಗವನ್ನು 4.15ಕೋಟಿ ರೂ.ಗೆ ಖರೀದಿ ಮಾಡಿದ್ದು, ಇವರಿಗೆ ಯಾವುದೇ ಆದಾಯದ ಮೂಲ ಇಲ್ಲ. ಆಸ್ತಿ ಇಲ್ಲ ಇವರು ಬಿಜೆಪಿಯ ತಾಲೂಕು ಪದಾಧಿಕಾರಿಯಾಗಿರುವ ಇವರ ಆಸ್ತಿ ಖರೀದಿ ಹಿಂದೆ ಪ್ರಭಾವಿ ಸಚಿವರ ಕೈವಾಡದ ಶಂಕೆ ಇದೆ ಎಂದು ಪ್ರಮೋದ್ ಮುತಾಲಿಕ್ ಆರೋಪಿಸಿದರು.
ರೈತರಿಗೆ ಮೋಸ ಮಾಡಿ ಆಸ್ತಿ ಖರೀದಿಸಲಾಗಿದೆ . ಇಂಡಸ್ಟ್ರಿಯಲ್ ಎಸ್ಟೇಟ್ ಮಾಡಿದರೆ ರೈತರಿಗೆ ಲಾಭ ನೇರವಾಗಿ ಸಿಗಲಿ ಎಂದು ಮುತಾಲಿಕ್ ಹೇಳಿದರು.
ಮಂತ್ರಿಗಳ ಪಿಎ ಈ ಬೇನಾಮಿ ಆಸ್ತಿ ವಿಷಯದಲ್ಲಿ ಇದ್ದು , ಇದನ್ನು ಬಹಿರಂಗಪಡಿಸಿ ತಾನು ಈ ಪ್ರಕರಣದಲ್ಲಿ ಇಲ್ಲ ಎಂದು ಹೇಳಬೇಕು ಎಂದು ಮುತಾಲಿಕ್ ಹೇಳಿದರು.
ವ್ಯವಸ್ಥಿತವಾಗಿ 53 ರೈತರಿಗೆ ಮೋಸ ಮಾಡಿ ಬಲತ್ಕಾರವಾಗಿ ಕಡಿಮೆ ಬೆಲೆಯಲ್ಲಿ ಭೂಮಿ ಖರೀದಿ ಮಾಡಲಾಗಿದೆ. ಈಗ ಅದೇ ಜಾಗವನ್ನು ಕೈಗಾರಿಕ ವಲಯ ಎಂಬುದಾಗಿ ಘೋಷಣೆ ಮಾಡಿ ನಾಲೈದು ಪಟ್ಟು ಹೆಚ್ಚು ಹಣಕ್ಕೆ ಸರಕಾರಕ್ಕೆ ಮಾರಾಟ ಮಾಡಿ ಹಣ ಪಡೆಯುವ ವ್ಯವಸ್ಥಿತ ಹುನ್ನಾರ ನಡೆಯುತ್ತಿದೆ. ಈ ಬಗ್ಗೆ ಎರಡು ದಿನಗಳ ಹಿಂದೆ ಜಿಲ್ಲಾಧಿಕಾರಿಗೆ ಮತ್ತು ಇವತ್ತು ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದೇವೆ. ಈ ಕುರಿತು ವಾರದೊಳಗೆ ಸಂಪೂರ್ಣ ತನಿಖೆಯಾಗ ಬೇಕು ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿಗಳು ದಾಖಲೆ ಇದ್ದರೆ ಲೋಕಾಯುಕ್ತಕ್ಕೆ ದೂರು ದಾಖಲಿಸಿ ಎನ್ನುತ್ತಿದ್ದಾರೆ ಈಗ ಸಂಪೂರ್ಣ ದಾಖಲೆ ಇಟ್ಟು ಕೇಸ್ ದಾಖಲಿಸಿದ್ದೇವೆ ತನಿಖೆ ಮಾಡಿ ತೋರಿಸಿ ಎಂದು ಸವಾಲು ಎಸೆದರು.
ಇನ್ನೂ ಸಾಕಷ್ಟು ಬೇನಾಮಿ ಆಸ್ತಿ ಕಾರ್ಕಳ ಕ್ಷೇತ್ರದಲ್ಲಿ ಇದೆ , ಈ ಪ್ರಕರಣ ಬದಲಾಯಿತು ಅಂದರೆ ತನ್ನಿಂದ ತಾನೇ ಎಲ್ಲವೂ ಹರ ಬರ್ತದೆ ಎಂದರು.