ಮಂಗಳೂರು: ನಗರದ ಕೊಡಿಯಾಲ್ ಗುತ್ತಿನಲ್ಲಿ ಮಹಿಳೆಯೊರ್ವರು ತನ್ನ ಮಗಳೊಂದಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬುಧವಾರ ಮಧ್ಯಾಹ್ನ ಘಟನೆ ಬೆಳಕಿಗೆ ಬಂದಿದೆ.ಕೊಡಿಯಾಲ್ ಬೈಲ್ ಗುತ್ತು ಬಳಿ ಘಟನೆ ಸಂಭವಿಸಿದ್ದು ವಿಜಯ(33) ಮತ್ತು ಶೋಭಿತಾ (4) ಮೃತಪಟ್ಟವರು.
ಮನೆಯಲ್ಲಿ ತಾಯಿ ವಿಜಯ ಜತೆ ಇಬ್ಬರು ಹೆಣ್ಣು ಮಕ್ಕಳು ವಾಸಿಸುತ್ತಿದ್ದು, ಮೂವರು ಸಾಮೂಹಿಕವಾಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಈ ಪೈಕಿ ಇಬ್ಬರು ಮೃತಪಟ್ಟರೆ, ಇನ್ನೊರ್ವ ಮಗಳು ಅದೃಷ್ಟವಶಾತ್ ಪಾರಾಗಿದ್ದಾಳೆ ಎಂದು ತಿಳಿದು ಬಂದಿದೆ.
ಮೂಲಗಳ ಪ್ರಕಾರ , ಮೃತ ವಿಜಯಳ ಮೊದಲ ಪತಿ 6 ವರ್ಷಗಳ ಹಿಂದೆ ಮೃತಪಟ್ಟಿದ್ದರು. ಒಂದಷ್ಟು ಸಮಯದ ಬಳಿಕ ಅವರು ಎರಡನೇ ವಿವಾಹವಾಗಿದ್ದರು. ಎರಡನೇ ಪತಿ ಮೂರು ವಾರದ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು ಎನ್ನಲಾಗಿದೆ. ಇದು ವಿಜಯ ಅವರಿಗೆ ತೀವ್ರ ಅಘಾತ ಉಂಟು ಮಾಡಿತ್ತು.
ಇಂದು ಮಧ್ಯಾಹ್ನ ಊಟದ ಬಳಿಕ, ಇಬ್ಬರು ಮಕ್ಕಳ ಬಳಿಯೂ ನಮಗಿನ್ನರು ದಿಕ್ಕಿಲ್ಲ , ಆತ್ಮಹತ್ಯೆ ಮಾಡಿಕೊಂಡು ಸಾಯೋಣ ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಅವರು ಇಬ್ಬರು ಮಕ್ಕಳ ಕುತ್ತಿಗೆಗೂ ನೇಣು ಬಿಗಿದು, ಬಳಿಕ ತಾನೂ ಕೂಡ ನೇಣು ಹಾಕಿಕೊಂಡು ಆತ್ಮಹತ್ಯೆಗೈದಿದ್ದಾರೆ ಎಂದು ಹೇಳಲಾಗುತ್ತಿದೆ.ಈ ವೇಳೆ 13ವರ್ಷದ ಮಗಳ ಕಾಲು ಪಕ್ಕದಲ್ಲಿದ್ದ ಟೀಪಾಯಿಗೆ ತಾಗಿ ಬದುಕಿ ಉಳಿದಿದ್ದಾಳೆ. ಆಕೆ ಜೋರಾಗಿ ಕೂಗಿದ್ದು, ಮನೆಯ ಮೇಲಿನ ಮಹಡಿಯಲ್ಲಿ ಬಾಡಿಗೆಗಿದ್ದ ಹೊಟೇಲ್ ಸಿಬ್ಬಂದಿ ಆಕೆಯನ್ನು ರಕ್ಷಿಸಿದ್ದಾರೆ. ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ
ಇಬ್ಬರು ಮಕ್ಕಳ ಜತೆಗೆ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದು ಇನ್ನೋರ್ವ ಮಗಳು ಸಾವಿನ ಕುಣಿಕೆಯಿಂದ ತಪ್ಪಿಸಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.