ಪುತ್ತೂರು: ಪುತ್ತೂರು ಎಸ್.ಡಿ.ಪಿ. ಚಾರಿಟೇಬಲ್ ಟ್ರಸ್ಟ್ ಹಾಗೂ ಎಸ್.ಡಿ.ಪಿ. ರೆಮಿಡೀಸ್ ಮತ್ತು ರಿಸರ್ಚ್ ಸೆಂಟರ್ ಆಯುರ್ವೇದ ಔಷಧಿ ತಯಾರಕರ ವತಿಯಿಂದ ಎಸ್. ಡಿ. ಪಿ. ರೆಮಿಡೀಸ್ ಮತ್ತು ರಿಸರ್ಚ್ ಸೆಂಟರ್ ಆವರಣದಲ್ಲಿ ನಡೆದ 19ನೇ ವರ್ಷದ ಕಲೋಪಾಸನಾ 2023 ಸಾಂಸ್ಕೃತಿಕ ಕಲಾಸಂಭ್ರಮ ಸೋಮವಾರ ಭಾರತ ಜನನಿ ಯಕ್ಷಗಾನದ ಮೂಲಕ ಸಮಾರೋಪಗೊಂಡಿತು.
ಭಾರತ ಜನನಿ ಯಕ್ಷಗಾನ ಕಾರ್ಯಕ್ರಮವನ್ನು ಹೃದ್ರೋಗ ತಜ್ಞ ಡಾ. ಜೆ.ಸಿ. ಅಡಿಗ ಉದ್ಘಾಟಿಸಿದರು. ಎಸ್.ಡಿ.ಪಿ. ರೆಮಿಡೀಸ್ ಮತ್ತು ರಿಸರ್ಚ್ ಸೆಂಟರ್ ನಿರ್ದೇಶಕ ಡಾ. ಹರಿಕೃಷ್ಣ ಪಾಣಾಜೆ, ರೂಪಲೇಖಾ, ಮೇಘನಾ ಮತ್ತಿತರರು ಉಪಸ್ಥಿತರಿದ್ದರು. ಶ್ರೀ ಹನುಮಗಿರಿ ಮೇಳದವರಿಂದ ಭಾರತ ಜನನಿ ಯಕ್ಷಗಾನ ಪ್ರದರ್ಶನಗೊಂಡಿತು.
ಕಲೋಪಾಸನಾದ ಮೊದಲ ದಿನ ಪದ್ಮಭೂಷಣ ಪುರಸ್ಕೃತ ಕಲಾವಿದೆ ಸುಧಾ ರಘುನಾಥನ್(Sudha Ragunathan) ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ನಡೆಯಿತು. ಎರಡನೇ ದಿನ ಶ್ರೀ ಪೆರ್ಡೂರು ಮೇಳದಿಂದ “ಚಂದ್ರಹಾಸ ಶಶಿಪ್ರಭ’ ಯಕ್ಷಗಾನ ಬಯಲಾಟ ನಡೆಯಿತು. ಈ ಕಾರ್ಯಕ್ರಮವನ್ನು ಆದರ್ಶ ಆಸ್ಪತ್ರೆಯ ಡಾ. ಬಿ. ಶ್ಯಾಮ ಅವರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಶಾಸಕ ಸಂಜೀವ ಮಠಂದೂರು ಈ ಯಕ್ಷಗಾನ ಕಾರ್ಯಕ್ರಮಕ್ಕೆ ಆಗಮಿಸಿ ಶುಭಹಾರೈಸಿದರು.
ದೇಶದ ಅತ್ಯುತ್ತಮ ಕಲಾವಿದರನ್ನು ಆಯ್ದು ಪುತ್ತೂರಿನಲ್ಲಿ ಕಾರ್ಯಕ್ರಮ ಆಯೋಜನೆ ಮಾಡುವ ಡಾ. ಹರಿಕೃಷ್ಣ ಪಾಣಾಜೆ ಅವರ ಪ್ರಯತ್ನಕ್ಕೆ ಉತ್ತಮಪ್ರತಿಕ್ರಿಯೆ ಲಭಿಸಿದೆ. ಮೂರು ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ನೂರಾರು ಜನ ಭಾಗವಹಿಸಿ, ಕಾರ್ಯಕ್ರಮವನ್ನು ಆಸ್ವಾಧಿಸಿದರು. ಈ ಮೂಲಕ 19 ನೇ ವರ್ಷದ ಕಲೋಪಾಸನಾ 2023 ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ತೆರೆ ಬಿದ್ದಿದೆ.











