ಬೆಂಗಳೂರು: 150 ಕ್ಷೇತ್ರದ ಗೆಲುವಿನ ಗುರಿಯೊಂದಿಗೆ 224 ವಿಧಾನಸಭಾ ಕ್ಷೇತ್ರಗಳಲ್ಲಿ ನಾಲ್ಕು ಕೋಟಿ ಜನರನ್ನು ತಲುಪುವ ಗುರಿಯೊಂದಿಗೆ ಬಿಜೆಪಿ ಮಾರ್ಚ್ 1 ರಿಂದ ರಾಜ್ಯಾದ್ಯಂತ ನಾಲ್ಕು ವಿವಿಧ ದಿಕ್ಕುಗಳಿಂದ ವಿಜಯ ಸಂಕಲ್ಪ ಯಾತ್ರೆಗೆ (BJP Karnataka) ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಸ್ವಾಮಿಯ ಬೆಟ್ಟದಲ್ಲಿ ಚಾಲನೆ ನೀಡಲಾಯಿತು.
ರಾಜ್ಯದ ನಾಲ್ಕು ವಿವಿಧ ಭಾಗಗಳಿಂದ ಆರಂಭವಾಗಿ ರಾಜ್ಯಾದ್ಯಂತ ತೆರಳಿ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಾಧನೆಗಳನ್ನು ಜನತೆಗೆ ತಿಳಿಸುವ ನಿಟ್ಟಿನಲ್ಲಿ ಭಾರತೀಯ ಜನತಾ ಪಕ್ಷ ವಿಜಯ ಸಂಕಲ್ಪ ಯಾತ್ರೆ ಕೈಗೊಂಡಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಇಂದು ಚಾಮರಾಜನಗರ ಜಿಲ್ಲೆಯ ಪುಣ್ಯಕ್ಷೇತ್ರ ಶ್ರೀ ಮಲೆ ಮಹದೇಶ್ವರ ಸನ್ನಿಧಿಯಲ್ಲಿ, ಭಾಜಪಾ ವಿಜಯ ಸಂಕಲ್ಪ ರಥ ಯಾತ್ರೆಗೆ ನಗಾರಿ ಬಾರಿಸುವುದರ ಮೂಲಕ ಚಾಲನೆ ನೀಡಿದರು
ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ರಾಜ್ಯ ಬಿಜೆಪಿ ಅಧ್ಯಕ್ಷರಾದ ನಳೀನ್ ಕುಮಾರ್ ಕಟೀಲ್ , ಕೇಂದ್ರ ಸಚಿವೆಯರಾದ ಶೋಭಾ ಕರಂದ್ಲಾಜೆ, ಸಚಿವರಾದ ಆರಗ ಜ್ಞಾನೇಂದ್ರ, ಸುನೀಲ್ ಕುಮಾರ್ , ಕೋಟ ಶ್ರೀನಿವಾಸ ಪೂಜಾರಿ ಉಪಸ್ಥಿತರಿದ್ದರು.
ಈ ಯಾತ್ರೆಯಲ್ಲಿ ರಾಜ್ಯ ಮತ್ತು ಕೇಂದ್ರದ ಹಿರಿಯ ನಾಯಕರ ನೇತೃತ್ವದಲ್ಲಿ ತಲಾ ನಾಲ್ಕು ತಂಡಗಳು 150 ಕ್ಕೂ ಹೆಚ್ಚು ರೋಡ್ ಶೋ 8,000 ಕಿ.ಮೀ. ದೂರ ಕ್ರಮಿಸುವ ನಿರೀಕ್ಷೆಯಿದೆ.
ಮಾರ್ಚ್ 20 ರಂದು ಯಾತ್ರೆ ಮುಕ್ತಾಯವಾಗಲಿದ್ದು, ಮಾರ್ಚ್ 25 ರಂದು ದಾವಣಗೆರೆಯಲ್ಲಿ ನಡೆಯಲಿರುವ ಮೆಗಾ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆಗೆ 10 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ. ಸಿದ್ದರಾಮಯ್ಯ ಹುಟ್ಟುಹಬ್ಬ ಆಚರಿಸಿದ ಮೈದಾನದಲ್ಲೇ ಸಮಾರೋಪ ನಡೆಯಲಿದೆ.
ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ನೀರಾವರಿ ಸಚಿವ ಗೋವಿಂದ ಕಾರಜೋಳ ಮತ್ತು ಕಂದಾಯ ಸಚಿವ ಆರ್.ಅಶೋಕ ಚಾಮರಾಜನಗರ, ಬೆಳಗಾವಿ, ಬೀದರ್ ಮತ್ತು ಬೆಂಗಳೂರಿನಿಂದ ಪ್ರತಿ ತಂಡವನ್ನು ಮುನ್ನಡೆಸಲಿದ್ದಾರೆ.
ಬಸ್ ನ ವಿನ್ಯಾಸ ಹೇಗಿದೆ ಗೊತ್ತೇ..?:
30 ಅಡಿ ಎತ್ತರ ಮತ್ತು ಎಂಟು ಅಡಿ ಅಗಲದ ನಾಲ್ಕು ಬಸ್‌ಗಳನ್ನು ಯಾತ್ರೆಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಎಸಿ ಬಸ್‌ಗಳ ಮೇಲ್ಭಾಗದಲ್ಲಿ ನಾಯಕರು ನಿಂತು ಭಾಷಣ ಮಾಡುವ ಸ್ಥಳವೂ ಇರುತ್ತದೆ. ಮೊಬೈಲ್ ಚಾರ್ಜ್ ಮಾಡಲು ಸ್ಥಳ, ಹೋಮ್ ಥಿಯೇಟರ್, ಆಡಿಯೊ ಸಿಸ್ಟಮ್ಸ್, ಕ್ಯಾಮೆರಾಗಳು, ಎಲ್ಇಡಿ ಡಿಸ್ಪ್ಲೇ ಮತ್ತು ವೈಫೈ ಸೌಲಭ್ಯ ಮತ್ತು ಪವರ್ ಬ್ಯಾಕ್ ಆಪ್ ಆಗಿ ಜನರೇಟರ್ ಇರುತ್ತದೆ.