ಪುತ್ತೂರು: ಫೆ 28 : ಪರವಾನಿಗೆ ರಹಿತವಾಗಿ ಮತ್ತು ಅಸುರಕ್ಷಿತವಾಗಿ ವ್ಯಾಪಾರ ನಡೆಸುತ್ತಿದ್ದಾರೆಂದು ಪುತ್ತೂರು ಬಸ್ ನಿಲ್ದಾಣದ ಬಳಿಯ ಲಿಬರ್ಟಿ ಹೊಟೇಲ್‍ನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು ಮಂಗಳವಾರ ಬಂದ್ ಮಾಡಿಸಿದ್ದಾರೆ. ನಗರಸಭಾ ವ್ಯಾಪ್ತಿಯ ಹೊಟೇಲ್‍ಗಳಲ್ಲಿ ಸ್ವಚ್ಛತೆ ಹಾಗೂ ಆಹಾರ ಸುರಕ್ಷತೆಯನ್ನು ಖಾತ್ರಿ ಪಡಿಸುವ ಉದ್ದೇಶದಿಂದ ಆರೋಗ್ಯ ವಿಭಾಗದ ಅಧಿಕಾರಿಗಳು ಹಲವು ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಲೈಸನ್ಸ್ ಇಲ್ಲದೆ ಹೊಟೇಲ್ ನಡೆಸುತ್ತಿದ್ದಾರೆಂಬ ಲಿಖಿತ ದೂರು ಬಂದ ಹಿನ್ನಲೆಯಲ್ಲಿ ಮಂಗಳವಾರ ಲಿಬರ್ಟಿ ಹೊಟೇಲ್‍ಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಖಲೆ ಪರಿಶೀಲನೆ ವೇಳೆ ನಗರಸಭೆಯಿಂದ ಮತ್ತು ಆರೋಗ್ಯ ಇಲಾಖೆಯಿಂದ ಲೈಸನ್ಸ್ ಪಡೆಯದೆ ಹೊಟೇಲ್ ನಡೆಸುತ್ತಿರುವ ಮಾಹಿತಿ ಬೆಳಕಿಗೆ ಬಂದಿದೆ.
ಹೊಟೇಲನ್ನು ಪರಿಶೀಲಿಸಿದಾಗ ಅಲ್ಲಿ ಗಲೀಜು ವಾತಾವರಣದಲ್ಲಿ ತಿನಿಸುಗಳ ತಯಾರಿ ಹಾಗೂ ಪೂರೈಕೆ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಹೊಟೇಲ್ ಅನ್ನು ಬಂದ್ ಮಾಡಲು ಸೂಚಿಸಿದ್ದಾರೆ. ನಗರದ ಮುರದಲ್ಲೂ ಕೂಡಾ ಹೊಟೇಲ್‍ವೊಂದರಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಕಾರ್ಯಾಚರಣೆಯ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ, ಆರೋಗ್ಯ ನಿರೀಕ್ಷಣಾಧಿಕಾರಿ ರವಿಶಂಕರ್ ಎಂ, ನಗರಸಭಾ ಆರೋಗ್ಯ ನಿರೀಕ್ಷಕರಾದ ಶ್ವೇತಾ ಕಿರಣ್, ವರಲಕ್ಷ್ಮೀ ಪಾಲ್ಗೊಂಡರು.
