ಉಡುಪಿ, ಮೆಹೆಂದಿ ಕಾರ್ಯಕ್ರಮವೊಂದರಲ್ಲಿ ತಡ ರಾತ್ರಿಯವರೆಗೆ ಅತೀ ಕರ್ಕಶವಾಗಿ ಡಿ.ಜೆ.ಸೌಂಡ್ಸ್ ಹಾಕಿ ಕಾನೂನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಪೊಲೀಸರು ಮನೆಗೆ ದಾಳಿ ನಡೆಸಿ ಸ್ವತ್ತುಗಳನ್ನು ವಶಕ್ಕೆ ಪಡೆದ ಘಟನೆ ಉಡುಪಿ ಜಿಲ್ಲೆಯ ಬಡಗುಬೆಟ್ಟು ಗ್ರಾಮದ ಪಣಿಯಾಡಿ ಎಂಬಲ್ಲಿ ಫೆ.27ರ ಬೆಳಗಿವ ಜಾವ ನಡೆದಿದೆ.
ಪಣಿಯಾಡಿ ನಿವಾಸಿ ಶರತ್ ಎಂವರಿಗೆ ಸೇರಿದ ಮನೆಯಲ್ಲಿ ಮೆಹಂದಿ ಕಾರ್ಯಕ್ರಮ ನಡೆಯುತ್ತಿತ್ತು ಎನ್ನಲಾಗಿದೆ. ಮನೆಯ ಅಂಗಳದಲ್ಲಿ ಶಾಮಿಯಾನ ಹಾಕಿ, ಯಾವುದೇ ಪರವಾನಿಗೆ ಅಥವಾ ಪೂರ್ವಾನುಮತಿ ಇಲ್ಲದೆ ಅತೀ ಕರ್ಕಶವಾದ ಡಿ.ಜೆ.ಸೌಂಡ್ಸ್ ಹಾಕಿಕೊಂಡು ರಾತ್ರಿ 2ಗಂಟೆ ತನಕ ನೃತ್ಯ ಮಾಡುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆಯೆಂದು ಸ್ಥಳೀಯರೊಬ್ಬರು ಠಾಣೆಗೆ ದೂರು ನೀಡಿದ್ದರು.
ಈ ಹಿನ್ನಲೆಯಲ್ಲಿ ಬಡಗುಬೆಟ್ಟು ಗ್ರಾಮದ ಪಣಿಯಾಡಿ ಅನಂತ ಪದ್ಮನಾಭ ದೇವಸ್ಥಾನದ ಬಳಿ ಶರತ್ ಎಂಬವರ ಮನೆಗೆ ತಡ ರಾತ್ರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮನೆಯ ಆಂಗಳದಲ್ಲಿ ಶಾಮಿಯಾನ ಹಾಕಿ ಪೂರ್ವಾನುಮತಿ ಇಲ್ಲದೆ ಅತೀ ಕರ್ಕಶವಾದ ಡಿ.ಜೆ.ಸೌಂಡ್ಸ್ ಹಾಕಿರುವುದು ಕಂಡು ಬಂದ ಹಿನ್ನಲೆಯಲ್ಲಿ ಪೊಲೀಸರು, ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
4 ಸೌಂಡ್ ಬಾಕ್ಸ್, ಡಿಜೆ ಪರಿಕರಗಳು, ಲೈಟಿಂಗ್ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.