ಪುತ್ತೂರು: ಪ್ರವೀಣ್ ನೆಟ್ಟಾರು (Praveen Nettar) ಹತ್ಯೆಯ ಸಂದರ್ಭ ಬೆಂಬಲಿಗರು ಸಂಸದರ ಕಾರಿನ ಟಯರ್ ಪಂಕ್ಚರ್ ಮಾಡಿದ ಕಾರಣ ಮೃತರ ಕುಟುಂಬಕ್ಕೆ ತಕ್ಷಣ ಪರಿಹಾರ ಕೊಟ್ಟಿದ್ದಾರೆ. ಆದರೆ ನಾವು ಯಾವ ಶಾಸಕರ ಕಾರಿನ ಟಯರನ್ನೂ ಪಂಕ್ಚರ್ ಮಾಡಿಲ್ಲ. ಬಂಟ್ವಾಳ ಹಾಗೂ ಪುತ್ತೂರು ಶಾಸಕರು ಮೃತರ ಮನೆಗೆ ಭೇಟಿ ನೀಡಿದ ವೇಳೆ ಘೋಷಿಸಿದ ಪರಿಹಾರವನ್ನು ಈ ಕೂಡಲೇ ನೀಡಬೇಕು ಎಂದು ದ. ಕ. ಜಿಲ್ಲಾ ದಲಿತ್ ಸೇವಾ ಸಮಿತಿ ಸ್ಥಾಪಕಾಧ್ಯಕ್ಷ ಬಿ.ಕೆ. ಸೇಸಪ್ಪ ಬೆದ್ರಕಾಡು ಅಗ್ರಹಿಸಿದ್ದಾರೆ
ಅವರು ಸೋಮವಾರ ಪುತ್ತೂರು ಅಮರ್ ಜವಾನ್ ಸ್ಮಾರಕದ ಬಳಿಯಲ್ಲಿ ಚುನಾವಣೆ ಘೋಷಣೆಗೆ ಮುಂಚಿತವಾಗಿ ತಮ್ಮ ವಿವಿಧ ಬೇಡಿಕೆಗಳನ್ನು ಪರಿಹರಿಸುವಂತೆ ಅಗ್ರಹಿಸಿ ದಲಿತ ಸೇವಾಸಮಿತಿ ಆಯೋಜಿಸಿದ್ದ ಒಂದು ದಿನದ ಉಪವಾಸ ಸತ್ಯಾಗ್ರಹದಲ್ಲಿ ಮಾತನಾಡಿದರು.
ಸತ್ಯಾಗ್ರಹವನ್ನು ಆತ್ಮಿಕಾ ಅವರ ತಂದೆ ಕಣಿಯೂರು ನಿವಾಸಿ ಸಂಜೀವ ಅವರು ಅಂಬೇಡ್ಕರ್ ಭಾವ ಚಿತ್ರದ ಮುಂದೆ ದೀಪ ಉರಿಸುವ ಮೂಲಕ ಚಾಲನೆ ನೀಡಿದರು. ಬೆಳಗ್ಗೆ 11 ಗಂಟೆಯಿಂದ ಸಾಯಂಕಾಲ 4ಗಂಟೆ ತನಕ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಯಿತು.
ಕನ್ಯಾನ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ವಿದ್ಯಾರ್ಥಿನಿ ಆತ್ಮಿಕಾ ಮನೆಗೆ ಬಂದಿದ್ದ ಶಾಸಕ ಸಂಜೀವ ಮಠಂದೂರು ಮೃತಳ ಕುಟುಂಬಕ್ಕೆ ರೂ.10 ಲಕ್ಷ ಪರಿಹಾರ ಘೋಷಣೆ ಮಾಡಿದ್ದು, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಹೊಸ ಮನೆ ಕಟ್ಟಿಸಿಕೊಡುವುದಾಗಿ ಭರವಸೆ ನೀಡಿದ್ದರು. ಆದರೇ ಈ ಎರಡು ಅಶ್ವಾಸನೆಗಳು ಭರವಸೆಯಾಗಿಯೇ ಉಳಿದಿದೆ ಎಂದರು.

ಕೂಲಿ ಮಾಡಿ ಜೀವನ ನಡೆಸುತ್ತಿದ್ದ ಸಂತ್ರಸ್ತ ಕುಟುಂಬ ತಮಗೆ ಪರಿಹಾರ ನೀಡಿ ಎಂದು ಎಲ್ಲೂ ಕೇಳಿಕೊಂಡು ಹೋಗಿಲ್ಲ. ಪುತ್ತೂರು ಹಾಗೂ ಬಂಟ್ವಾಳದ ಶಾಸಕರುಗಳೇ ಮನೆಗೆ ಹೋಗಿ ಘೋಷಣೆ ಮಾಡಿದ ಭರವಸೆಯನ್ನು ಈಡೇರಿಸದೆ ವಂಚನೆ ಮಾಡಿದ್ದಾರೆ. ದಲಿತರ ಪರ ಕೆಲಸ ಮಾಡುವ ದಲಿತ ಸಂಘ ಪಕ್ಷದ ಪರವಾಗಿ ಕೆಲಸ ಮಾಡುವ ಸಂಘಟನೆಯಲ್ಲ. ನಿರಂತರ ಹೋರಾಟ ಮಾಡುವ ಜತೆಗೆ ಚುನಾವಣೆಯ ಸಂದರ್ಭದಲ್ಲಿ ಎರಡು ಪಕ್ಷದವರಿಗೆ ತಕ್ಕ ಉತ್ತರ ನೀಡುವ ಕಾರ್ಯ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಸಂಘದ ಪ್ರಯತ್ನದಿಂದ ಪುತ್ತೂರು ಹಾಗೂ ವಿಟ್ಲದಲ್ಲಿ ಅಂಬೇಡ್ಕರ್ ಭವನಕ್ಕೆ ಜಾಗ ಮಂಜೂರಾಗಿದ್ದು, ಸೂಕ್ತ ಅನುದಾನ ನೀಡಿಲ್ಲ. ಅಂಬೇಡ್ಕರ್ ಭವನಕ್ಕೆ ವಿಟ್ಲ ಹಾಗೂ ಪುತ್ತೂರಿನಲ್ಲಿ ಜಾಗ ಮಂಜೂರಾಗಿದ್ದು, ಚುನಾವಣೆಗೆ ಮೊದಲು ಶಂಕುಸ್ಥಾಪನೆ ನಡೆಸಬೇಕೆಂದು ಅವರು ಆಗ್ರಹಿಸಿದರು.
ದ. ಕ. ಜಿಲ್ಲಾ ದಲಿತ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಯು, ಪುತ್ತೂರು ತಾಲೂಕು ಅಧ್ಯಕ್ಷ ಅಣ್ಣಪ್ಪ ಕಾರೆಕ್ಕಾಡು, ಪ್ರಧಾನ ಕಾರ್ಯದರ್ಶಿ ಸುಂದರ ನರಿಮೊಗರು, ಮಹಿಳಾ ಸಮಿತಿ ಜಿಲ್ಲಾಧ್ಯಕ್ಷೆ ಮೀನಾಕ್ಷಿ, ಉಪಾಧ್ಯಕ್ಷೆ ವಿಮಲ ಮುಳಿಯ, ತುಳುಅಪ್ಪೆ ಜೋಕುಳು ತಂಡದ ವಸಂತ ಪಟ್ಟೆ, ಬ್ರಹ್ಮಶ್ರೀ ನಾರಾಯಗುರು ಸೇವಾ ಸಂಘದ ಕೆದಿಲ ಗ್ರಾಮ ಸಮಿತಿ ಅಧ್ಯಕ್ಷ ಮಾರಪ್ಪ ಸುವರ್ಣ, ಬಂಟ್ವಾಳ ಮಾಜಿ ಅಧ್ಯಕ್ಷ ಗಣೇಶ್ ಸೀಗೆಬಲ್ಲೆ, ರಾಮಣ್ಣ ಪಿಲಿಂಜ, ಕೇಶವ ಪಡೀಲ್, ಅಂಬೇಡ್ಕರ್ ರಕ್ಷಣಾ ವೇದಿಕೆಯ ರಾಜ್ಯ ಅಧ್ಯಕ್ಷ ಸುಂದರ್ ಪಟ್ಟಾಜೆ, ಪರಮೇಶ್ವರ ಕೆಮ್ಮಿಂಜೆ, ವಸಂತ ಬಂಟ್ವಾಳ, ಆತ್ಮಿಕಾ ಅವರ ತಾಯಿ ಗೀತಾ ಮತ್ತಿತರರು ಉಪಸ್ಥಿತರಿದ್ದರು.