koragajja ಉಡುಪಿ: ಕೊರಗ ತನಿಯರ ಮೂಲಸ್ಥಾನ ಕುತ್ತಾರು ಅಲ್ಲ, ಬಾರಕೂರಿನಲ್ಲಿರುವ ಕೊರ್ರೆಪಾಡಿ. ಎಂದು ಕೊರಗ ಭಾಷಾ ತಜ್ಞ ಬಾಬು ಪಾಂಗಾಳ ಹೇಳಿದ್ದಾರೆ. ರವಿವಾರ ಉಡುಪಿ, ಪುತ್ತೂರಿನಲ್ಲಿ ಜರಗಿದ ಆದಿವಾಸಿ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಕೊರಗ ತನಿಯರ ಜನ್ಮಸ್ಥಳ ಕೊರ್ರೆಪಾಡಿ ಇಂದಿನ ಕೂರಾಡಿ ಆಗಿರಬಹುದು ಎಂದು ಅಧ್ಯಯನದಿಂದ ತಿಳಿದುಬಂದಿದೆ.ಈ ಬಗ್ಗೆ ಇನ್ನಷ್ಟು ಅಧ್ಯಯನ ನಡೆಯಬೇಕಿದೆ. ಮುಂದೆ ಈ ಸ್ಥಳವನ್ನು ಗುರುತಿಸಿ ಅಭಿವೃದ್ಧಿಪಡಿಸಬೇಕು ಎಂದ ಅವರು ಕೊರಗರ ಕುಲದೈವ ಕೊರಗರ ತನಿಯವೇ ಹೊರತು ಕೊರಗ ಅಜ್ಜ ಅಲ್ಲ ಎಂದು ಕೂಡ ತಿಳಿಸಿದ್ದಾರೆ.
ಇಡೀ ಕೊರಗ ಸಮುದಾಯ ಉಳಿಯಬೇಕು ಎಂದರೆ ಕೊರಗ ಸಮುದಾಯದ ಕೆಲವು ಅಸ್ಮಿತೆಯನ್ನು ಸ್ಥಾಪನೆ ಮಾಡಬೇಕಿದೆ. ಥೀಮ್ ಪಾರ್ಕ್ ಮಾದರಿಯಲ್ಲಿ 30-40 ಎಕ್ರೆ ಜಾಗದಲ್ಲಿ ಕೊರಗ ಪಾರ್ಕ್ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದ ಅವರು ಅದರಲ್ಲಿ ಕೊರಗರ ಕಾಡು, ಕುಟುಂಬಗಳ ವಾಸ, ತರಬೇತಿ ಕೇಂದ್ರ. ಕೊರಗರ ಅಧ್ಯಯನ ಪುಸ್ತಕಗಳ ಸಂಗ್ರಹ ಇರಬೇಕು ಎಂದು ಅಭಿಪ್ರಾಯಪಟ್ಟರು.
ಶಾಸಕ ಕೆ. ರಘುಪತಿ ಭಟ್, ಜಿ. ಪಂ. ಸಿಇಒ ಪ್ರಸನ್ನ ಎಚ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಕೊರಗ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.