ಪಿಎಂ ಕಿಸಾನ್ ಯೋಜನೆಯ((PM Kisan Samman Nidhi Scheme) 13ನೇ ಕಂತಿನ ಹಣವನ್ನ ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕದ ಬೆಳಗಾವಿಯಲ್ಲಿ ಬಿಡುಗಡೆ ಮಾಡಿದರು. ಕರ್ನಾಟಕದ 49 ಲಕ್ಷ ರೈತರು ಸೇರಿದಂತೆ ದೇಶದ 8 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ ಒಟ್ಟು 16,800 ಕೋಟಿ ರೂಪಾಯಿಗಳನ್ನ ಈ ವೇಳೆ ಜಮಾ ಮಾಡಲಾಗಿದೆ.
ಬೆಳಗಾವಿಯ ಹೊರವಲಯದ ಮಾಲಿನಿ ಸಿಟಿ ಮೈದಾನಲ್ಲಿ ಏರ್ಪಡಿಸಿದ್ದ ಬೃಹತ್ ಕಾರ್ಯಕ್ರಮದಲ್ಲಿ ಜಲಜೀವನ ಮಿಷನ್ ಯೋಜನೆಗೆ ಶಂಕುಸ್ಥಾಪನೆ, ನವೀಕೃತ ರೈಲ್ವೆ ನಿಲ್ದಾಣ ಮೇಲ್ದರ್ಜೆಗೇರಿಸುವಿಕೆ, ಲೊಂಡ-ಬೆಳಗಾವಿ-ಘಟಪ್ರಭಾ ಮಾರ್ಗದ ಡಬ್ಲಿಂಗ್ ಕಾಮಗಾರಿ ಸೇರಿದಂತೆ 2240 ಕೋಟಿ ರೂ. ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿದರು.
ಬೆಳಗಾವಿಯಿಂದ ಇಂದು ಇಡೀ ದೇಶದ ಕೋಟ್ಯಂತರ ರೈತರಿಗೆ 13ನೇ ಕಂತಿನ 16 ಸಾವಿರ ಕೋಟಿ ರೂಪಾಯಿ ಜಮೆಯಾಗಿರುತ್ತದೆ. ಇಷ್ಟೊಂದು ದೊಡ್ಡ ಮೊತ್ತ ಒಂದು ಕ್ಷಣದಲ್ಲಿ ನೇರವಾಗಿ ರೈತರ ಖಾತೆಗೆ ಜಮೆಯಾಗುತ್ತಿರುವುದು ಸೋಜಿಗದ ಸಂಗತಿ. ಯಾವುದೇ ಸೋರಿಕೆಯಿಲ್ಲದೇ ಇಷ್ಟೊಂದು ದೊಡ್ಡ ಮೊತ್ತ ಜಮೆಯಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಶೇಕಡಾ 100ರಷ್ಟು ಹಣಕಾಸು ಅನುದಾನವನ್ನ ಭಾರತ ಸರ್ಕಾರವೇ ಭರಿಸುತ್ತದೆ. 2018ರ ಡಿಸೆಂಬರ್ 1ರಂದು ಈ ಯೋಜನೆಯನ್ನ ಆರಂಭಿಸಲಾಗಿದ್ದು, ಈ ಯೋಜನೆಯಡಿ 2 ಹೆಕ್ಟೇರ್ ತನಕ ಒಟ್ಟಾರೆಯಾಗಿ ಭೂಮಿ ಇರುವ ಅಥವಾ ಮಾಲೀಕತ್ವ ಹೊಂದಿರುವ ಸಣ್ಣ ಹಾಗೂ ಕಿರು ರೈತರ ಕುಟುಂಬಗಳಿಗೆ ವಾರ್ಷಿಕವಾಗಿ 6000 ರೂಪಾಯಿಯನ್ನು ತಲಾ 2 ಸಾವಿರದಂತೆ ಮೂರು ಕಂತಿನಲ್ಲಿ ಪಾವತಿಸಲಾಗುತ್ತದೆ. ಹಣವನ್ನು ನೇರವಾಗಿ ಫಲಾನುಭವಿ ರೈತರ ಬ್ಯಾಂಕ್ ಖಾತೆಗೆ ಸರ್ಕಾರ ವರ್ಗಾವಣೆ ಮಾಡುತ್ತದೆ