ವಿಟ್ಲ ಸಮೀಪದ ಇಡ್ಕಿದು ನಿವಾಸಿ ಮೃತಪಟ್ಟಿದ್ದು, ಇವರ ಸಾವಿನ ಬಗ್ಗೆ ವೈದ್ಯರು ಹಾಗೂ ಸಾರ್ವಜನಿಕರು ಶಂಕೆ ವ್ಯಕ್ತ ಪಡಿಸಿದ ಹಿನ್ನಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ತನಿಖೆಯ ವೇಳೆ ಪೊಲೀಸರಿಗೆ ಮಹತ್ವದ ಸುಳಿವು ಲಭಿಸಿದೆ ಎಂದು ತಿಳಿದು ಬಂದಿದೆ.
ಇಡ್ಕಿದು ಕುಮೇರು ನಿವಾಸಿ ಅರವಿಂದ ಭಾಸ್ಕರ (೩೯) ಅನುಮಾನಸ್ಪದವಾಗಿ ಮೃತ ಪಟ್ಟವರು. ಫೆ.25ರಂದು ರಾತ್ರಿ 10 ಗಂಟೆ ಸುಮಾರಿಗೆ ಬಾಸ್ಕರ್ ಅವರು ತನ್ನ ಮನೆಯ ಬೆಡ್ ರೂಂ ನಲ್ಲಿ ಮಲಗಿದ್ದಾರೆ. ಫೆ.26ರ ಬೆಳಿಗ್ಗೆ 7.30 ಆದರೂ, ಅವರು ಏಳದೇ ಇದ್ದಾಗ ಪತ್ನಿ, ಪತ್ನಿಯ ತಂದೆ ಹಾಗೂ ಕೆಲವು ವ್ಯಕ್ತಿಗಳು ಸೇರಿಕೊಂಡು ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ತೆಗೆದುಕೊಂಡು ಬಂದ್ದಿದ್ದಾರೆ. ಈ ವೇಳೆ ವೈದ್ಯರು ಭಾಸ್ಕರ್ ಮೃತಪಟ್ಟಿರುವುದನ್ನು ಧೃಡಪಡಿಸಿದ್ದಾರೆ.
ಭಾಸ್ಕರ್ ಪತ್ನಿ ಆಶಾ ಅವರು ಅರವಿಂದ್ ಗೆಳೆಯ ಮನೋಜ್ ಗೆ ಪತಿಯ ಸಾವಿನ ವಿಷಯ ತಿಳಿಸಿದ್ದು, ಅವರು ಬಂದು ಮೃತ ದೇಹವನ್ನು ಗಮನಿಸಿದ್ದಾರೆ. ಬಳಿಕ ಸ್ನೇಹಿತನ ಮರಣದಲ್ಲಿ ಸಂಶಯ ವ್ಯಕ್ತ ಪಡಿಸಿ ವಿಟ್ಲ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ಆರೋಗ್ಯವಾಗಿದ್ದ ವ್ಯಕ್ತಿ ಏಕಾಏಕಿ ಮಲಗಿದಲ್ಲಿಗೇ ಮೃತಪಟ್ಟಿದ್ದು, ಮೃತ ದೇಹದಲ್ಲಿ ಗಾಯದ ಗುರುತುಗಳು ಮೇಲ್ನೋಟಕ್ಕೆ ಕಾಣಿಸದಿದ್ದರೂ, ಮೃತ ಶರೀರ ಸಹಜ ಸಾವಿನಂತೆ ಗೋಚರಿಸದಿರುವುದು ಸಾರ್ವಜನಿಕರ ಅನುಮಾನಕ್ಕೆ ಕಾರಣವಾಗಿತ್ತು. ಮೃತ ದೇಹ ಪರೀಕ್ಷಿಸಿದ ವೈದರಿಗೂ ಅನುಮಾನಗಳು ಕಾಡಿದ ಹಿನ್ನಲೆಯಲ್ಲಿ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲು ಮುಂದಾಗಿದ್ದಾರೆ.
ಈ ವೇಳೆ ಪೊಲೀಸರಿಗೆ ಮಹತ್ವದ ಸುಳಿವು ಲಭಿಸಿದ್ದು, ಕೊಲೆಯಾಗಿರುವ ಸಾಧ್ಯತೆಯೂ ಗೋಚರಿಸಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಪೊಲೀಸರು ಒಂದಿಬ್ಬರನ್ನು ತೀವ್ರವಾಗಿ ತನಿಖೆಗೆ ಒಳಪಡಿಸಿದ್ದು, ಓರ್ವನನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗುತ್ತಿದೆ.