ಪುತ್ತೂರು: ಬಿಜೆಪಿ ನಗರ ಮಂಡಲ ಬೂತ್ ಸಂಖ್ಯೆ 55ರ ಬಿ ಎಲ್ ಎ 2 ರ ಜವಾಬ್ದಾರಿಯಿಂದ ಬನ್ನೂರು ನಿವಾಸಿ ಹಿಂದೂ ಸಂಘಟನೆಯ ಸಕ್ರಿಯ ಕಾರ್ಯಕರ್ತ ಮನೀಶ್ ಕುಲಾಲ್ ರನ್ನು ವಜಾಗೊಳಿಸಿರುವುದಾಗಿ ನಗರ ಮಂಡಲ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಮನೀಶ್ ಕುಲಾಲ್ ಅವರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗವಹಿಸಿರುವುದನ್ನು ಗಮನಿಸಿ ಪಕ್ಷದ ತೀರ್ಮಾನದಂತೆ ಶಿಸ್ತು ಕ್ರಮದ ಅನುಸಾರವಾಗಿ ತಕ್ಷಣಕ್ಕೆ ಜ್ಯಾರಿಗೆ ಬರುವಂತೆ ಬೂತ್ 55 ರ ಬಿ ಎಲ್ ಎ 2 ರ ಜವಾಬ್ದಾರಿಯಿಂದ ವಜಾಗೊಳಿಸಲಾಗಿದೆ ಎಂದು ಪಿ.ಜಿ.ಜಗನ್ನಿವಾಸ ರಾವ್ ತಿಳಿಸಿದ್ದಾರೆ.
ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲರಿಗೆ ನೀಡಬೇಕೆಂದು ಆಗ್ರಹಿಸಿ ನಡೆಯುತ್ತಿರುವ ಪುತ್ತಿಲ ಫಾರ್ ಪುತ್ತೂರು (Putthila For Puttur) ಅಭಿಯಾನದ ಮುಂಚೂಣಿಯಲ್ಲಿ ಮನೀಶ್ ಕುಲಾಲ್ ಗುರುತಿಸಿಕೊಂಡಿದ್ದರು. ವಾಟ್ಸಾಪ್ ಗ್ರೂಪುಗಳಲ್ಲಿ, ಟ್ವಿಟರ್ ಹಾಗೂ ಫೇಸ್ ಬುಕ್ ನಲ್ಲಿ ಪುತ್ತಿಲ ಪರವಾಗಿ ಕಳೆದೊಂದು ತಿಂಗಳಿನಿಂದ ನಿರಂತರವಾಗಿ ಅಭಿಯಾನ ನಡೆಸಲಾಗುತ್ತಿದೆ.
ತಿಂಗಳ ಹಿಂದೆ ಟ್ವಿಟರ್ ನಲ್ಲಿ ಪುತ್ತಿಲ ಫಾರ್ ಪುತ್ತೂರು ಅಭಿಯಾನ ನಡೆಸಿ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರ ಗಮನ ಸೆಳೆಯುವ ಪ್ರಯತ್ನ ನಡೆಸಲಾಗಿತ್ತು. ಇದಕ್ಕೆ ಪುತ್ತೂರಿನ ಯುವಕರಿಂದ ಬೆಂಬಲ ಕೂಡ ವ್ಯಕ್ತವಾಗಿತ್ತು. ಈ ಅಭಿಯಾನ ಮಾಧ್ಯಮಗಳ ಗಮನ ಸೆಳೆಯುವಲ್ಲಿಯೂ ಸಫಲವಾಗಿತ್ತು. ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿಯ ಅಗ್ರಗಣ್ಯ ನಾಯಕ ಅಮಿತ್ ಶಾ ಅವರನ್ನು ಪುತ್ತೂರಿಗೆ ಸ್ವಾಗತಿಸಿ ನಗರದಲ್ಲಿ ಅರುಣ್ ಕುಮಾರ್ ಪುತ್ತಿಲರ ಹೆಸರಿನಲ್ಲಿ ಹಲವು ಪ್ಲೆಕ್ಷ್ ಹಾಗೂ ಬ್ಯಾನರ್ ಗಳನ್ನು ಹಾಕಲಾಗಿತ್ತು. ಇದು ಕೂಡ ಅಭಿಯಾನದ ಭಾಗ ಎಂದೇ ರಾಜಕೀಯ ಪಂಡಿತರು ವಿಶ್ಲೇಷಿಸಿದ್ದರು.
ಈ ಪ್ಲೆಕ್ಸ್ ಅಳವಡಿಕೆಯ ಕುರಿತು ಪತ್ರಕರ್ತರು ಪುತ್ತೂರು ಶಾಸಕರನ್ನು ಪ್ರಶ್ನಿಸಿದ್ದು ಆಗ ಅವರು ನೀಡಿದ ಉತ್ತರದಲ್ಲಿ ಉಲ್ಲೇಖಿಸಲಾದ ಅಣಬೆ ಶಬ್ದ ವಿವಾದಕ್ಕೆ ಕಾರಣವಾಗಿತ್ತು. ಅದರ ಮರುದಿನ ಪುತ್ತೂರಿನ ದರ್ಭೆಯಿಂದ ಬೊಳ್ವಾರುವರೆಗೆ ಅಮಿತ್ ಶಾ ಕಾರ್ಯಕ್ರಮದ ಪ್ರಚಾರರ್ಥ ನಡೆಸಿದ ಪಾದಯಾತ್ರೆ ನಡೆದಿದ್ದು, ಜಾಥ ಬೊಳ್ವಾರು ತಲುಪಿದ ವೇಳೆ ವೇಳೆ ಅಣಬೆ ಶಬ್ದ ಪ್ರಯೋಗವನ್ನು ಪ್ರಶ್ನಿಸಿ ಮನೀಶ್ ಕುಲಾಲ್ ನೇತ್ರತ್ವದಲ್ಲಿ ಪುತ್ತಿಲ ಅಭಿಮಾನಿಗಳ ತಂಡ ಶಾಸಕ ಮಠಂದೂರು ಅವರನ್ನು ಸಾರ್ವಜನಿಕವಾಗಿ ಪ್ರಶ್ನಿಸಿತ್ತು.
ಇದಾದ ಬಳಿಕ ಪ್ರಕರಣ ಒಂದಷ್ಟು ತಣ್ಣಗಾದಂತೆ ಕಂಡು ಬಂದಿತಾದರೂ, ಇಂದು ಮತ್ತೆ ಟ್ವಿಟರ್ ನಲ್ಲಿ ಪುತ್ತಿಲ ಫಾರ್ ಪುತ್ತೂರು ಅಭಿಯಾನ ನಡೆಯುತ್ತಿದೆ. ಇದರ ಬೆನ್ನಲೆ ಮನೀಷ್ ಕುಲಾಲ್ ರನ್ನು ಪಕ್ಷದ ಜವಬ್ದಾರಿಯಿಂದ ವಜಾಗೊಳಿಸಿ ಬಿಜೆಪಿ ಅದೇಶಿಸಿದೆ.
ಮನೀಶ್ ಕುಲಾಲ್ ಹಿಂದೂ ಸಂಘಟನೆಯ ಸದಸ್ಯರಾಗಿದ್ದ ವೇಳೆ ಹಲವು ಕೇಸುಗಳನ್ನು ಮೈಮೇಲೆ ಎಳೆದುಕೊಂಡಿದ್ದು ಅವರ ವಿರುದ್ದ ಪುತ್ತೂರಿನಲ್ಲಿ ರೌಡಿ ಶೀಟರ್ ತೆರೆಯಲಾಗಿತ್ತು . ಇದನ್ನು ತೆರವುಗೊಳಿಸುವಂತೆ ಪುತ್ತೂರಿನ ಹಿಂದೂ ಸಂಘಟನೆಗಳ ನಾಯಕ ಡಾ| ಪ್ರಸಾದ್ ಭಂಡಾರಿಯವರು ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ನಿಯೋಗ ತೆಗೆದುಕೊಂಡು ಹೋಗಿ ಮನವಿ ಸಲ್ಲಿಸಿದನ್ನು ಸ್ಮರಿಸಬಹುದಾಗಿದೆ.