ಪುತ್ತೂರು: ಕರ್ನಾಟಕ ರಾಜ್ಯ ಎಸ್.ಡಿ.ಎಂ.ಸಿ. ಸಮನ್ವಯ ವೇದಿಕೆ ದ.ಕ. ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಹಯೋಗದಲ್ಲಿ ಎಸ್.ಡಿ.ಎಂ.ಸಿ.ಯ 21ನೇ ವರ್ಷಾಚರಣೆ ಪ್ರಯುಕ್ತ ಜಿಲ್ಲಾ ಮಟ್ಟದ ಕ್ರೀಯಾಶೀಲ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಗಳಿಗೆ ಅಭಿನಂದನಾ ಕಾರ್ಯಕ್ರಮ ಹಾಗೂ ದ.ಕ. ಜಿಲ್ಲಾ ಮಟ್ಟದ ದ್ವಿತೀಯ ಸಮಾವೇಶ ಫೆ.28 ರಂದು ಮಾಣಿ ನೇರಳಕಟ್ಟೆ ಜನಪ್ರಿಯ ಗಾರ್ಡನ್ ನಲ್ಲಿ ನಡೆಯಲಿದೆ ಎಂದು ಎಸ್.ಡಿ.ಎಂ.ಸಿ. ಸಮನ್ವಯ ವೇದಿಕೆ ರಾಜ್ಯಧ್ಯಕ್ಷ ಮೊಯಿದಿನ್ ಕುಟ್ಟಿ ಹೇಳಿದರು.
ದ. ಕ.ಜಿಲ್ಲೆ ವ್ಯಾಪ್ತಿಯಲ್ಲಿ ಪಟ್ಟು 7 ಶೈಕ್ಷಣಿಕ ತಾಲೂಕುಗಳಿದ್ದು ಪ್ರತಿ ತಾಲೊಕಿನಿಂದ 6 ಶಾಲೆಯಂತೆ ಒಟ್ಟು 42 ಎಸ್.ಡಿ.ಎಂ.ಸಿ. ಗಳನ್ನು ಗುರುತಿಸಿ ಅಭಿನಂದಿಸುವ ಕಾರ್ಯಕ್ರಮವನ್ನು ಹಾಕಿಕೊಳ್ಳಲಾಗಿದೆ. ಶಾಲಾಭಿವೃದ್ಧಿ ಸಮಿತಿಗಳ ಹಕ್ಕೊತ್ತಾಯ ಮಂಡಿಸುವ ಜತೆಗೆ ಸರ್ಕಾರಿ ಶಾಲೆಗಳ ಸಬಲೀಕರಣ, ಅಭಿವೃದ್ಧಿ, ಶಿಕ್ಷಣ ಹಕ್ಕಿನ ಸಮರ್ಪಕ ಜಾರಿಗೆ ಒತ್ತಾಯ, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಮುದಾಯದ ಭಾವಹಿಸುವಿಕೆ ಮತ್ತು ಅಭಿವೃದ್ಧಿ ಸಮಿತಿಗಳ ಬಲವರ್ಧನೆಯ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಹಾಕಿಕೊಳ್ಳಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೆಳಗ್ಗೆ 10.30 ರಿಂದ ನಡೆಯುವ ಸಭಾ ಕಾರ್ಯಕ್ರಮವನ್ನು ದ. ಕ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶೋಭಾ ಬಿ.ಜಿ. ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ. ಜಿಲ್ಲಾ ಸಮಾವೇಶ ಸಂಚಾಲಕ ಚಂದ್ರಶೇಖರ್ ಕೊಂಕಣಾಜೆ ವಹಿಸಲಿದ್ದಾರೆ. ಶಿಕ್ಷಣ ತಜ್ಞ ಡಾ. ನಿರಂಜನಾರಾಧ್ಯ ವಿ.ಪಿ. ದಿಕ್ಸೂಚಿ ಭಾಷಣ ನಡೆಸಲಿದ್ದಾರೆ.
11.30 ರಿಂದ ಆರ್.ಟಿ.ಈ. ಕಾಯ್ದೆ ಮತ್ತು ಎಸ್. ಡಿ. ಎಂ. ಸಿ. ಸವಾಂದ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 2.30 ರಿಂದ ಉತ್ತಮ ಎಸ್.ಡಿ.ಎಂ.ಸಿ. ಗಳಿಗೆ ಅಭಿನಂದನೆ ಹಾಗೂ ಸಮಾರೋಪ ಕಾರ್ಯಕ್ರಮ ನಡೆಯಲಿದೆ. ಅಭಿನಂದನೆಯನ್ನು ಮಾಜಿ ಸಚಿವ ರಮಾನಾಥ ರೈ ನಡೆಸಲಿದ್ದು, ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ. ಸಮನ್ವಯ ವೇದಿಕೆ ಜಿಲ್ಲಾಧ್ಯಕ್ಷ ಎಸ್.ಎಂ. ಇಸ್ಮಾಯಿಲ್ ವಹಿಸಲಿದ್ದಾರೆಂದು ತಿಳಿಸಿದರು.
ಜಿಲ್ಲಾಧ್ಯಕ್ಷೆ ಪ್ರಮೀಳಾ ಆಚಾರ್ಯ, ಪುತ್ತೂರು ತಾಲೂಕು ಸಂಘಟನಾ ಕಾರ್ಯದರ್ಶಿ ಪ್ರವೀಣ್ ಆಚಾರ್ಯ, ಜಿಲ್ಲಾ ಸದಸ್ಯ ಉಸ್ಮಾನ್ ನೆಕ್ಕಿಲು, ತಾಲೂಕು ಸಮಾವೇಶ ಸಂಚಾಲಕ ಕೃಷ್ಣ ನಾಯ್ಕ ಉಪಸ್ಥಿತರಿದ್ದರು.