ಮಂಗಳೂರು : ಹೆಲ್ಮೆಟ್ ರಹಿತ (Without Helmet ) ಪ್ರಯಾಣದಿಂದಾಗಿ ಬೈಕ್ ಸವಾರನ ಜೀವಕ್ಕೆ ಕುತ್ತು ತಂದ ಘಟನೆ ಮಂಗಳೂರು ನಗರದ ಬಿಜೈನಲ್ಲಿ ಫೆ.21ರಂದು ಬೆಳಿಗ್ಗೆ ನಡೆದಿದೆ.
ಜನ ನೋಡ ನೋಡುತ್ತಲೇ ಅಪಘಾತ ಸಂಭವಿಸಿ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಆಟೋ ಚಾಲಕನ ಧಾವಂತದ ತಿರುವು ಹಾಗೂ ಬೈಕ್ ಸವಾರನ ಹೆಲ್ಮೆಟ್ ರಹಿತ ಪ್ರಯಾಣ ಒಬ್ಬನ ಪ್ರಾಣ ತೆಗೆದಿದೆ.
ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಂಗಳೂರಿನ ಬಿಜೈ ನಿವಾಸಿ ಬಿಬಿಎಂ ತೃತೀಯ ವರ್ಷದ ವಿದ್ಯಾರ್ಥಿ ಕವನ್ ಆಳ್ವ(20) ಮೃತ ಯುವಕ.
ಆಟೋ ಚಾಲಕನ ನಿರ್ಲಕ್ಷ್ಯ ತಿರುವು ತೆಗೆದುಕೊಂಡಿದ್ದು, ನೆರವಾಗಿ ಬರುತ್ತಿದ್ದ ಬೈಕ್ ಸವಾರ ಆಟೋಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಹತ್ತಿರದಲ್ಲೇ ಇದ್ದ ಮರಕ್ಕೆ ಕವನ್ ತಲೆ ಬಡಿದು ಅಲ್ಲೇ ಕುಸಿದು ಬಿದ್ದು ಕ್ಷಣಮಾತ್ರದಲ್ಲಿ ಪ್ರಾಣ ಕಳೆದುಕೊಂಡಿದ್ದಾನೆ.
ಅಪಘಾತದ ರಭಸಕ್ಕೆ ಅಟೋ ಪಲ್ಟಿಯಾಗಿದೆ.
ಹೆಲ್ಮೆಟ್ ಇಲ್ಲದ ಕಾರಣ ತಲೆಯ ಭಾಗಕ್ಕೆ ಬಿದ್ದ ಏಟಿನಿಂದಾಗಿ ಸ್ಥಳದಲ್ಲೇ ಯುವಕನ ಸಾವು ಸಂಭವಿಸಿದೆ.
ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.
ಪುತ್ತೂರು : ಹೆಲ್ಮೆಟ್ ಇದ್ದ ಕಾರಣ ಬದುಕುಳಿದ ಯುವಕ
ಪುತ್ತೂರಿನ ಪರ್ಲಡ್ಕ ರಸ್ತೆಯಲ್ಲಿ ಫೆ.22 ರ ಬೆಳಿಗ್ಗೆ ಅಪಘಾತ ಮಂಗಳೂರಿನ ಮಾದರಿಯ ಅಪಘಾತ ಸಂಭವಿಸಿದೆ.
ಅಟೋ ಚಾಲಕ ಇಂಡಿಕೇಟರ್ ಹಾಕಿ ತಿರುವು ತೆಗೆದುಕೊಳ್ಳುವಾಗ ವೇಗವಾಗಿ ಬಂದ ಬೈಕ್ ಸವಾರ ರಿಕ್ಷಾಕ್ಕೆ ಡಿಕ್ಕಿಯಾಗಿ ಸುಮಾರು 20 ಮೀಟರ್ ದೂರಕ್ಕೆ ಹಾರಿದ್ದಾನೆ.
ಬೈಕ್ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಬೈಕ್ ಗೆ ಹಾನಿಯಾಗಿದೆ. ಹೆಲ್ಮೆಟ್ ಧರಿಸಿದ್ದರಿಂದ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.