ವೇಣೂರು: ಅಜಿಲ ಸೀಮೆಯ ಪಟ್ಟದ ದೇವರಾದ ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ರೋಹಿತ್ ಚಕ್ರತೀರ್ಥರನ್ನು (Rohith Chakrathirtha) ಆಹ್ವಾನಿಸಿರುವುದು ಬಿಲ್ಲವ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿತ್ತು. , ಇದೀಗ ರೋಹಿತ್ ಚಕ್ರತೀರ್ಥ ಅವರ ಉಪನ್ಯಾಸ ರದ್ದುಗೊಂಡಿದೆ. ದೇವಸ್ಥಾನಕ್ಕೆ ಕರೆಸಿಯೇ ತೀರುತ್ತೇನೆಂದು ಹಠ ಹಿಡಿದಿದ್ದ ಶಾಸಕ ಹರೀಶ್ ಪೂಂಜರಿಗೆ ಇದರಿಂದ ಮುಖಭಂಗವಾಗಿದೆ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ.
ಪುಸ್ತಕ ಪರಿಷ್ಕರಣ ಸಮಿತಿಯ ಮುಖ್ಯಸ್ಥರಾದ ರೋಹಿತ್ ಚಕ್ರತೀರ್ಥರು ಬ್ರಹ್ಮಶ್ರೀ ನಾರಾಯಣ ಗುರುಗಳ ಪಠ್ಯವನ್ನು ಹತ್ತನೇ ತರಗತಿ ಪಠ್ಯದಿಂದ ತೆಗೆದು ಹಾಕಿದ್ದಾರೆ. ಅವರನ್ನು ‘ಶಿಕ್ಷಣ ಮತ್ತು ಧರ್ಮ’ ಎನ್ನುವ ವಿಚಾರದಲ್ಲಿ ಉಪನ್ಯಾಸ ನೀಡಲು ವೇಣೂರು ದೇವಸ್ಥಾನದ ಸಮಿತಿಯವರು ಕರೆದಿದ್ದಾರೆ. ಅವರ ಉಪನ್ಯಾಸಕ್ಕೆ ಅವಕಾಶ ಕೊಡಬಾರದೆಂದು ಬಿಲ್ಲವ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದವು.
ರೋಹೀತ್ ಉಪನ್ಯಾಸದ ಕುರಿತಂತೆ ಎದ್ದಿರುವ ವಿವಾದದ ಕುರಿತಂತೆ ಚರ್ಚಿಸಲು ಅಜಿಲ ಸೀಮೆಯ ತಿಮ್ಮಣ್ಣರಸರಾದ ಡಾ| ಪದ್ಮ ಪ್ರಸಾದ್ ಅಜಿಲರವರು ಬಿಲ್ಲವ ಸಂಘಟನೆಗಳ ಪ್ರಮುಖರನ್ನು ಅಹ್ವಾನಿಸಿದ್ದರು. ಕರೆಗೆ ಓಗೊಟ್ಟು ಬೆಳ್ತಂಗಡಿ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷರಾದ ಚಿದಾನಂದ ಪೂಜಾರಿ ಎಲ್ಲಡ್ಕ ರವರ ನೇತ್ರತ್ವದಲ್ಲಿ ಬಿಲ್ಲವ ಸಮಾಜದ ಪ್ರಮುಖರ ನಿಯೋಗ ವೇಣೂರು ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರೂ ಆಗಿರುವ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪಪ್ರಸಾದ್ ಅಜಿಲರವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ರೋಹಿತ್ ಚಕ್ರತೀರ್ಥ ಉಪನ್ಯಾಸಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.
ವಿಶ್ವಗುರು ಬ್ರಹ್ಮಶ್ರೀ ನಾರಾಯಣ ಗುರುಗಳು ಸೇರಿದಂತೆ ಭಗವಾನ್ ಮಹಾವೀರ, ಸಂವಿಧಾನ ಶಿಲ್ಪಿ ಡಾ| ಬಿ.ಆರ್ ಅಂಬೇಡ್ಕರ್, ಕುವೆಂಪು, ರಾಣಿ ಅಬ್ಬಕ್ಕ ಮತ್ತು ಕಯ್ಯಾರ ಕಿಂಇಣ್ಣ ರೈ ಮುಂತಾದ ದಾರ್ಶನಿಕರ ವ್ಯಕ್ತಿತ್ವಕ್ಕೆ ಕುಂದು ಬರುವ ರೀತಿಯಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ನಡೆಸಿ ಕೊನೆಗೆ ಸರಕಾರದ ಆದೇಶದಂತೆ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯಿಂದ ಪದಚ್ಯುತಗೊಂಡ ವಿಕೃತ ವಿಚಾರಧಾರೆಗಳನ್ನು ಹೊಂದಿರುವ ರೋಹಿತ್ ಚಕ್ರತೀರ್ಥರನ್ನು ಬ್ರಹ್ಮಕಲಶೋತ್ಸವದ ಸಭಾ ಕಾರ್ಯಕ್ರಮಕ್ಕೆ ಆಹ್ವಾನಿಸಬಾರದು ಎಂದು ಒಕ್ಕೊರಲಿನಿಂದ ಸಂಘಟನೆಗಳ ಮುಖಂಡರು ಮನವಿ ಮಾಡಿದ್ದರು.
ಈ ಸಂದರ್ಭದಲ್ಲಿ ಡಾ| ಪದ್ಮಪ್ರಸಾದ್ ಅಜಿಲರವರು ಬ್ರಹ್ಮಶ್ರೀ ನಾರಾಯಣ ಗುರುಗಳ ಅನುಯಾಯಿಗಳ ವಿರೋಧವನ್ನು ದಿಕ್ಕರಿಸಿ ವಿವಾದಿತ ವ್ಯಕ್ತಿಗಳನ್ನು ಆಹ್ವಾನಿಸುವ ಯಾವುದೇ ಉದ್ದೇಶ ನಮಗಿಲ್ಲ. ನಿಮ್ಮ ಭಾವನೆಯನ್ನು ಗೌರವಿಸಿ ವಿವಿಧ ಸಮಿತಿಯವರೊಂದಿಗೆ ಚರ್ಚಿಸಿ ನಿರ್ಧಾರ ತಿಳಿಸುವುದಾಗಿ ಭರವಸೆಯಿತ್ತರು.
ಇದೀಗ ಅರಸರಾದ ಅಜಿಲರು ಸಮಿತಿಯಲ್ಲಿ ಮಾತನಾಡಿ ರೋಹಿತ್ ಚಕ್ರತೀರ್ಥ ಕಾರ್ಯಕ್ರಮ ರದ್ದುಗೊಳಿಸಿದ್ದಾರೆ. ಕರೆಸಿಯೇ ತೀರುತ್ತೇನೆಂದು ಹಠ ಹಿಡಿದಿದ್ದ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ , ಶಾಸಕ ಹರೀಶ್ ಪೂಂಜಾ ರಿಗೆ ತೀವ್ರ ಮುಖಭಂಗವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ