ಪುತ್ತೂರು : ಫೆ 22 : ಟ್ಯೂಟೋರಿಯಲ್ ವೊಂದರಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜತೆ ವಿವಾಹಿತನೋರ್ವ ಅನುಚಿತವಾಗಿ ವರ್ತಿಸಿ ಮೊಬೈಲ್ ಕರೆ ಮಾಡುವಂತೆ ಪೀಡಿಸಿರುವ ಘಟನೆ ಬೆಳ್ಳಾರೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಬಗ್ಗೆ ಸಂತ್ರಸ್ತೆಯ ತಂದೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ಅಶ್ರಫ್ ಯಾನೆ ಅಚ್ಚಪ್ಪ ಕೃತ್ಯ ಎಸಗಿದ ಆರೋಪಿ. ಪತ್ನಿ ಹಾಗೂ ಮಕ್ಕಳೊಂದಿಗೆ ವಾಸವಿರುವ ಈತ ಶಾಲೆ ಬಿಟ್ಟು ಮನೆಗೆ ಹೋಗುತ್ತಿದ್ದ ವಿದ್ಯಾರ್ಥಿನಿ ಜತೆ ಅನುಚಿತವಾಗಿ ವರ್ತಿಸಿ ಅಶ್ಲೀಲ ವರ್ತನೆ ತೋರಿದ್ದಾನೆ. ಅಲ್ಲದೇ, ಬಾಲಕಿ ಬಳಿ ರಾತ್ರಿ ತಾಯಿಯ ಮೊಬೈಲ್ ʼನಿಂದ ಕರೆ ಮಾಡುವಂತೆಯೂ ಒತ್ತಾಯಿಸಿದ್ದಾನೆಂದು ಆರೋಪಿಸಲಾಗಿದೆ.
ಇದರಿಂದ ಹೆದರಿದ ಬಾಲಕಿ ಬಳಿಕದ ದಿನಗಳಲ್ಲಿ ಶಾಲೆಗೆ ಹಿಂದೇಟು ಹಾಕಿದ್ದು, ಈ ವೇಳೆ ವಿಚಾರಿಸಿದ ತಂದೆಯ ಬಳಿ ಆರೋಪಿ ಕಿರುಕುಳ ನೀಡುತ್ತಿರುವ ಮಾಹಿತಿ ನೀಡಿದ್ದು ಅವರು ಠಾಣೆಗೆ ದೂರು ನೀಡಿದ್ದಾರೆ. ಈ ಕುರಿತು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಕಲಂ 354(D), 509 ಐಪಿಸಿ ಮತ್ತು ಕಲಂ: 12 ಫೊಕ್ಸೋ ಆಕ್ಟ್ 2012 ಪ್ರಕರಣ ದಾಖಲಾಗಿದೆ . ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿರುವುದಾಗಿ ಹೇಳಲಾಗುತ್ತಿದೆ.