ಬೆಂಗಳೂರು: ಐಪಿಎಸ್ ಅಧಿಕಾರಿ ರೂಪಾ (D Roopa Moudgil) ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ಅವರ ನಡುವೆ ನಡೆಯುತ್ತಿದ್ದ ಬಿಗ್ ಟ್ವಿಸ್ಟ್ ಸಿಕ್ಕಿದೆ. ಡಿ ರೂಪಾ ಅವರು ರೋಹಿಣಿ ಸಿಂಧೂರಿಯವರನ್ನು ಹಿಗ್ಗಾಮುಗ್ಗ ಬೈಯುತ್ತಿರುವ ಮತ್ತು ತಮ್ಮ ಸಂಸಾರದ ವಿಷಯಗಳ ಕುರಿತು ಚರ್ಚಿಸಿದ್ದಾರೆ ಎನ್ನಲಾದ ಆಡಿಯೊವೊಂದು ಮಾಧ್ಯಮಗಳಲ್ಲಿ ಬಿತ್ತರಗೊಂಡಿದೆ.
ಡಿ.ರೂಪಾ ಹಾಗೂ ಸಾಮಾಜಿಕ ಕಾರ್ಯಕರ್ತ ಗಂಗರಾಜು ನಡುವೆ ನಡೆದ ಸಂಭಾಷಣೆಯ ಆಡಿಯೋ ಇದು ಎನ್ನಲಾಗಿದ್ದು ಇದರಲ್ಲಿ ತನ್ನ ಪತಿಯ ಕುರಿತಾಗಿಯೂ ಅವರು ಮಾತನಾಡಿದ್ದಾರೆ. ರೋಹಿಣಿ ಸಿಂಧೂರಿ ದೆಸೆಯಿಂದ ನನ್ನ ಪತಿ ಮನೆ ಕಡೆ ಗಮನ ಕೊಡೋದಿಲ್ಲ, ಅವ್ರನ್ನ ಬೇರೆಡೆ ವರ್ಗಾಯಿಸಿ ಎಂದು ನಾನೇ ಕೇಳ್ಕೊಂಡಿದ್ದೀನಿ, ಆಯಮ್ಮ ಕ್ಯಾನ್ಸರ್ ಇದ್ದ ಹಾಗೆ, ಬುಟ್ಟಿಗೆ ಹಾಕೊಳ್ತಾಳೆ’ ಎಂಬ ಗುರುತರ ಆರೋಪವನ್ನು ಐಪಿಎಸ್ ಅಧಿಕಾರಿ ಮಾಡಿದ್ದಾರೆ. ಇನ್ನು ಈ ಆಡಿಯೋದಲ್ಲಿರುವ ಮತ್ತೊರ್ವ ವ್ಯಕ್ತಿ ಗಂಗರಾಜ್ ಡಿ ರೂಪಾ ತನ್ನ ಜತೆ ಮಾತನಾಡಿರುವುದನ್ನು ಒಪ್ಪಿಕೊಂಡಿದ್ದಾರೆ.
ಆಡಿಯೊ ಸಂಭಾಷಣೆಯಲ್ಲಿ ಏನಿದೆ?:
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಆರೋಪಗಳ ಸುರಿಮಳೆಗೈದ ರೂಪಾ ಅವರ ವಿರುದ್ಧ ದೂರು ನೀಡುವಂತೆ ಗಂಗರಾಜು ಮೇಲೆ ಒತ್ತಡ ಹೇರುತ್ತಿದ್ದಾರೆ. ರೋಹಿಣಿ ಫ್ಯಾಮಿಲಿದು ಲ್ಯಾಂಡ್ ಬ್ಯುಸಿನೆಸ್, ರಿಯಲ್ ಎಸ್ಟೇಟ್ ಬ್ಯುಸಿನೆಸ್. ಕಬಿನಿ ಹತ್ತಿರ ಒಂದು ಲ್ಯಾಂಡ್ ಇದೆ ಅಂತಾ ಪಹಣ್ ಕೊಟ್ಟಿ ನನ್ನ ಗಂಡ ಲ್ಯಾಂಡ್ ರೆಕಾರ್ಡ್ಸ್ ನಲ್ಲಿ ಇರೋದ್ರಿಂದ ಹೆಲ್ಪ್ ತಗೋಂಡಿದ್ದಾಳೆ. ಯಾರೋ ಬುಜ್ಜಮ್ಮ ಅನ್ನೋರ ಲ್ಯಾಂಡ್ ಎಷ್ಟೋ ಜನರ ಹೆಸರಲ್ಲಿದೆ ತಗೋಬಹುದಾ ಅಂತಾ ಒಪಿನಿಯನ್ ಕೇಳಿದ್ದಾಳೆ. ‘ನಮ್ಮವರನ್ನು ಬಳಸಿಕೊಂಡು ಲ್ಯಾಂಡ್ ಡೀಲ್ ಮಾಡಿದ್ದಾರೆ’ ‘ಗಂಡನ ರಿಯಲ್ ಎಸ್ಟೇಟ್ ಪ್ರಮೋಟ್ ಮಾಡಲು ಮಾಹಿತಿ ಸಂಗ್ರಹಿಸಿದ್ದಾರೆ’ ‘ನಮ್ಮವರಿಂದ ರೋಹಿಣಿ ಸಿಂಧೂರಿ ಮಾಹಿತಿ ಪಡೆಯುತ್ತಿದ್ದಾರೆ’.
ಆಯಮ್ಮನ ದೆಸೆಯಿಂದ ನಮ್ಮ ಕುಟುಂಬ ಚೆನ್ನಾಗಿಲ್ವಲ್ಲ ಈಗ. ನಾನು ಅವರನ್ನ ಅಲ್ಲಿ ಇರೋಕೆ ಬಿಡಲ್ಲ. ನಾನೇ ಟ್ರಾನ್ಸ್ ಫರ್ ಗೆ ರಿಕ್ವೆಸ್ಟ್ ಮಾಡಿದ್ದೀನಿ. ಆಯಮ್ಮ ಕ್ಯಾನ್ಸರ್ ಇದ್ದ ಹಾಗೆ ಎಲ್ಲರನ್ನೂ ಬುಟ್ಟಿಗೆ ಹಾಕ್ಕೋಳ್ತಾಳೆ. ಡಿಕೆ ರವಿ ವಿಷ್ಯದಲ್ಲೂ ಆಗಿದ್ದು ಹಾಗೆನೇ. ನಾವು ನೋಡಿದ್ದೀವಲ್ಲ ಎಂದು ಐಎಎಸ್ ಅಧಿಕಾರಿ ರೋಹಿಣಿ ವಿರುದ್ಧ ಡಿ.ರೂಪಾ ಗಂಗರಾಜು ಜತೆ ಸಂಭಾಷಣೆ ವೇಳೆ ಆರೋಪ ಮಾಡಿದ್ದಾರೆ. ಸದ್ಯ ಈ ಆಡಿಯೋ ಈಗ ವೈರಲ್ ಆಗುತ್ತಿದೆ.
ರಾಜಕೀಯ ಪ್ರವೇಶಕ್ಕೆ ಚಿಂತನೆ:
ಇನ್ನು ಆಡಿಯೊದಲ್ಲಿ ರೂಪಾ ಅವರು ರೋಹಿಣಿ ಸಿಂಧೂರಿಯವರು ತಮ್ಮ ಪ್ರಭಾವ ಬಳಸಿಕೊಂಡು ತಮ್ಮ ಪತಿಯ ಅಣ್ಣನನ್ನು ಬಿಜೆಪಿಗೆ ಸೇರಿಸುವ ಸಿದ್ಧತೆಯನ್ನು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಮೈಸೂರು ಡಿಸಿಯಾಗಿದ್ದಾಗ ಕೇಳಿಬಂದ ಅಕ್ರಮ ಆರೋಪಗಳಿಂದ ಖುಲಾಸೆ ಪಡೆಯಲು ಶಾಸಕ ಸಾ ರಾ ಮಹೇಶ್ ಕೇಸನ್ನು ವಾಪಸ್ ಪಡೆಯಲು ಸಂಧಾನ ಮಾಡಲು ಹೆಚ್ ಡಿ ಕುಮಾರಸ್ವಾಮಿ, ಹೆಚ್ ಡಿ ದೇವೇಗೌಡ, ಐಎಎಸ್ ರಮಣರೆಡ್ಡಿ ಮತ್ತು ಮಣಿವಣ್ಣನ್ ಮೂಲಕವೂ ಒತ್ತಡ ಹಾಕುವ ಕೆಲಸ ಮಾಡಿದ್ದಾರೆ ಎಂದು ಆಡಿಯೊದಲ್ಲಿ ರೂಪಾ ಆರೋಪಿಸಿದ್ದಾರೆ.
ಅದಲ್ಲದೆ ಆಡಿಯೊದಲ್ಲಿ ಗಂಗರಾಜು ಮೇಲೆ ರೂಪಾ ಹರಿಹಾಯ್ದಿದ್ದಾರೆ. ನೀವು ರೋಹಿಣಿ ಸಿಂಧೂರಿಯನ್ನು ಸಪೋರ್ಟ್ ಮಾಡುತ್ತಿದ್ದೀರಾ, ಊಸರವಳ್ಳಿ ಆಕೆ, ತನ್ನ ವೈಯಕ್ತಿಕ ಕೆಲಸ ಮಾಡಿಸಿಕೊಳ್ಳಲು ಹಲವರನ್ನು ಬುಟ್ಟಿಗೆ ಹಾಕಿಕೊಳ್ಳುತ್ತಾಳೆ, ನೀವು ಫೈಲ್ ಹಿಡ್ಕೊಂಡು ಪದೇ ಪದೇ ಅವರ ಬಳಿ ಹೋಗುವುದೇನಿದೆ, ನನಗೆ ಬರುತ್ತಿರುವ ಕೋಪಕ್ಕೆ ಎದ್ದು ಹೋಗಿ ಅಲ್ಲಿಂದ ಆಚೆಗೆ ಎಂದು ಒಂದು ಹಂತದಲ್ಲಿ ರೋಹಿಣಿ ಸಿಂಧೂರಿ ವಿರುದ್ಧ ಅವಾಚ್ಯ ಶಬ್ದಗಳಿಂದ ಸಂಭಾಷಣೆ ವೇಳೆ ರೂಪಾ ನಿಂದಿಸಿದ್ದಾರೆ.
ರೂಪಾ ಹಾಗೂ ರೋಹಿಣಿ ಬಹಿರಂಗವಾಗಿ ಜಗಳವಾಡುತ್ತಿರುವುದರಿಂದ ಮುಜುಗರಕ್ಕೆ ಒಳಗಾಗಿರುವ ಸರ್ಕಾರ ಅವರಿಬ್ಬರಿಗೆ ಸ್ಥಳವನ್ನು ಸೂಚಿಸದೆ ವರ್ಗಾವಣೆ ಮಾಡಿತ್ತು. ಅಲ್ಲದೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಬಾರದು, ಸೋಷಿಯಲ್ ಮೀಡಿಯಾದಲ್ಲಿ ಯಾವುದೇ ಪೋಸ್ಟ್ ಹಾಕಬಾರದೆಂದು ತಾಕೀತು ಮಾಡುವ ಮೂಲಕ ಗಲಾಟೆಗೆ ವಿರಾಮ ಹಾಕಲು ಯತ್ನಿಸಿತ್ತು. ಆದರೇ ಅದರ ನಡುವೆ ಈ ಆಡಿಯೋ ವೈರಲ್ ಆಗಿದೆ.