ಕಾರವಾರ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ ರವಿಯವರಿಗೆ ಸಂಬಂಧಿಸಿದ ಎರಡು ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅದರಲ್ಲಿ ಮಾಂಸ ತಿಂದು ಬಿಜೆಪಿ ಮುಖಂಡ ನಾಗಬನ ಮತ್ತು ಹನುಮ ದೇಗುಲಕ್ಕೆ ಭೇಟಿ ನೀಡಿದ್ದಾರೆಂದು ಆರೋಪಿಸಲಾಗುತ್ತಿದೆ. ಈ ಕುರಿತು ಮಂಡ್ಯದಲ್ಲಿ ಸಿಡಿ ರವಿಯವರು ಸ್ಪಷ್ಟನೆ ಕೂಡ ನೀಡಿದ್ದಾರೆ.
ಈ ಹಿಂದೆ ಮಾಂಸ ಸೇವನೆ ಮಾಡಿ ದೇವಾಲಯದೊಳಗೆ ಪ್ರವೇಶ ಮಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಭಾರಿ ವಿರೋಧವನ್ನು ಎದುರಿಸಿದ್ದರು. ಈಗ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಶಾಸಕರೊಬ್ಬರ ಮನೆಯಲ್ಲಿ ಭರ್ಜರಿ ಬಾಡೂಟವನ್ನು ಸವಿದು ದೇವಾಲಯ ಪ್ರವೇಶ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಏನಿದು ಪ್ರಕರಣ ?
ಫೆಬ್ರವರಿ 19 ರಂದು ಭಾನುವಾರ ಉತ್ತರ ಕನ್ನಡ ಜಿಲ್ಲೆಗೆ ಸಿ.ಟಿ.ರವಿ ಆಗಮಿಸಿದ್ದರು. ಕಾರವಾರದ ಶಿವಾಜಿ ಜಯಂತಿಯಲ್ಲಿ ಭಾಗವಹಿಸಿ ಭಟ್ಕಳಕ್ಕೆ ಸಿ.ಟಿ.ರವಿ ಆಗಮಿಸಿದ್ದರು. ಭಟ್ಕಳದ ಶಿರಾಲಿಯಲ್ಲಿರುವ ಶಾಸಕ ಸುನಿಲ್ ನಾಯ್ಕ್ ಮನೆಯಲ್ಲಿ ಸಿ.ಟಿ.ರವಿ ಬಾಡೂಟ ಸವಿದಿದ್ದಾರೆ. ಇದೇ ಫೋಟೊ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವುದು.

ಅದಾದ ಬಳಿಕ ಭಟ್ಕಳ ನಗರದ ಹಳೇ ಬಸ್ ನಿಲ್ದಾಣ ಸಮೀಪ ಇರುವ ನಾಗಬನ ಹಾಗೂ ಕರಿಬಂಟ ಹನುಮ ದೇವಸ್ಥಾನಕ್ಕೆ ಸಿ.ಟಿ.ರವಿ ಭೇಟಿ ನೀಡಿದ್ದರು. ಭಟ್ಕಳ ಶಾಸಕ ಸುನಿಲ್ ನಾಯ್ಕ್ ಹಾಗೂ ದೇವಸ್ಥಾನದ ಕಮಿಟಿ ಸದಸ್ಯರು ಅವರಿಗೆ ಸಾಥ್ ನೀಡಿದ್ದರು. ಆ ವೇಳೆ ನಾಗ ಬನದ ಬಾಗಿಲು ಮುಚ್ಚಲ್ಪಟ್ಟಿದ್ದರಿಂದ ಗೇಟ್ ಮುಂಭಾಗದಲ್ಲಿ ಸಿ.ಟಿ.ರವಿ ದೇವರಿಗೆ ನಮಸ್ಕಾರ ಸಲ್ಲಿಸಿದ್ದರು. ನಂತರ ಗೇಟ್ ಮುಂಭಾಗದಲ್ಲಿಯೇ ಶಾಸಕ ಸುನಿಲ್ ನಾಯ್ಕ ಹಾಗೂ ಕಮಿಟಿ ಸದಸ್ಯರು ಸಿ.ಟಿ.ರವಿ ಅವರನ್ನು ಸನ್ಮಾನಿಸಿದ್ದರು.

ರವಿಯವರು ಬಾಡೂಟ ಸವಿದ ಹಾಗೂ ದೇವಸ್ಥಾನಕ್ಕೆ ಭೇಟಿ ನೀಡಿದ ಈ ಎರಡು ಪೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು. ಒಂದು ವರ್ಗದಿಂದ ವಿರೋಧ ಕೇಳಿ ಬಂದಿದೆ. ಹಿಂದೂ ಧರ್ಮದ ಬಗ್ಗೆ ಮಾತನಾಡುವ ರವಿ ಅವರು ಧರ್ಮದ ಆಚಾರ, ವಿಚಾರಗಳು ಹಾಗೂ ಸಂಪ್ರದಾಯವನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉತ್ತರಕನ್ನಡ ಜಿಲ್ಲೆಯಾದ್ಯಂತ ಸಿ.ಟಿ. ರವಿ ಅವರ ಬಾಡೂಟ ಹಾಗೂ ದೇವಾಲಯ ಪ್ರವೇಶದ ಬಗ್ಗೆಯೇ ಚರ್ಚೆಯಾಗುತ್ತಿದೆ.
ಸ್ಪಷ್ಟನೆ :
ಈ ಬಗ್ಗೆ ಮಂಡ್ಯದಲ್ಲಿ ಸ್ಪಷ್ಟನೆ ನೀಡಿರುವ ಸಿ.ಟಿ.ರವಿಯವರು , ಭಟ್ಕಳಕ್ಕೆ ಹೋಗಿದ್ದ ಸಂದರ್ಭ ನಾಗಬನ ನೋಡಲು ಕರೆದಿದ್ದರು. ಹೊಸದಾಗಿ ದೇವಾಲಯ ಕಟ್ಟಲಾಗಿದ್ದರಿಂದ 45 ದಿನಗಳ ಕಾಲ ತೆರೆದಿರಲಿಲ್ಲ. ನಾಗಬನದ ಹೊರ ಆವರಣದಲ್ಲಿ ನಿಂತು ದರ್ಶನ ಪಡೆದಿದ್ದೇವೆ ಅಷ್ಟೆ . ಸುಮ್ಮನೆ ವಿವಾದ ಹುಟ್ಟಹಾಕಲು ಕೆಲವರು ಹೀಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದಿದ್ದಾರೆ .
ಮುಂದುವರಿದು ಅವರು ನಾನು “ ವ್ರತ, ಪೂಜೆಗಳನ್ನು ಆಚರಿಸುತ್ತಾ ಬಂದಿರುವ ನನಗೆ ದೇವರ ಬಗ್ಗೆ ಶ್ರದ್ಧೆ ಇದೆ. ನಾನು ಹುಟ್ಟಿರೋದೇ ಮಾಂಸ ತಿನ್ನೋ ಜಾತಿಯಲ್ಲ. ಆದರೆ ಮಾಂಸ ತಿಂದು ದೇವಾಲಯಕ್ಕೆ ಹೋಗಿಲ್ಲ. ಹಾಗಂತ ತಿಂದು ಅಹಂಕಾರ ಪ್ರದರ್ಶಿಸುವುದಿಲ್ಲ. ಮಾಂಸ ತಿಂದು ದೇವಾಲಯಕ್ಕೆ ಹೋಗ್ತೀನಿ ಏನಿವಾಗ? ಯಾರು ಏನ್ ಮಾಡ್ತಾರೆ ಅಂತ ಸಿದ್ದರಾಮಯ್ಯ ರೀತಿ ಹೇಳಲ್ಲ ಎಂದು ಹೇಳಿದರು.