ಕಲಬುರಗಿ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (CT Ravi ) ಮಾಂಸ ತಿಂದು (Non Veg) ದೇವರ ದರ್ಶನ ಮಾಡಿದ್ರಾ ಅನ್ನೋ ಪ್ರಶ್ನೆ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಕುರಿತ ಫೋಟೋಗಳು (Photo) ಸಾಮಾಜಿಕ ಜಾಲತಾಣದಲ್ಲು ವೈರಲ್ ಆಗಿದ್ದು, ಸಿ.ಟಿ ರವಿ ಅವರ ವಿರುದ್ಧ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಿ.ಟಿ ರವಿ ಅವರು, ನನಗೆ ದೇವರಲ್ಲಿ ಶ್ರದ್ಧೆ ಇದೆ. ನಾನು ಮಾಂಸಾಹಾರ ಸೇವನೆ ಮಾಡಿ ದೇಗುಲಕ್ಕೆ (Temple) ಹೋಗಿಲ್ಲ, ಬಾಗಿಲು ಹಾಕಿದ್ದರಿಂದ ರಸ್ತೆ ಮಧ್ಯೆ ನಿಂತು ನಮಸ್ಕಾರ ಹಾಕಿ ಬಂದಿದ್ದೇನೆ. ಸುಮ್ಮನೆ ವಿವಾದ ಮಾಡ್ತಿದ್ದಾರೆ ಎಂದು ಹೇಳಿದ್ದರು. ಇದೇ ವೇಳೆ ವಿವಾದ ಕುರಿತಂತೆ ಮಾಜಿ ಸಿಎಂ ಸಿದ್ದರಾಮಯ್ಯ (Ex CM Siddaramaiah) ಅವರು ಪ್ರತಿಕ್ರಿಯೆ ನೀಡಿದ್ದು, ಅವರಿಗೆ ಸ್ಪಷ್ಟವಾದ ವಿಚಾರಧಾರೆಯೇ ಇಲ್ಲ ಎಂದರು. ಭೂತದ ಬಾಯಲ್ಲಿ ಭಗವದ್ಗೀತೆ ಅನ್ನೋದು ಜನರಿಗೆ ಗೊತ್ತಾಗಿದೆ ಎಂದು ಪರೋಕ್ಷವಾಗಿ ಕಾಲೆಳೆದಿದ್ದಾರೆ.
ಫೆಬ್ರವರಿ 19ರ ಭಾನುವಾರದಂದು ಉತ್ತರ ಕನ್ನಡ ಜಿಲ್ಲೆಗೆ ಸಿ.ಟಿ ರವಿ ಭೇಟಿ ನೀಡಿದ್ದರು. ಈ ವೇಳೆ ಭಟ್ಕಳದ ಶಿರಾಲಿಯಲ್ಲಿರುವ ಶಾಸಕ ಸುನಿಲ್ ನಾಯ್ಕ ಮನೆಯಲ್ಲಿ ಸಿ.ಟಿ ರವಿ ಬಾಡೂಟ ಸೇವಿಸಿದ್ದರು. ಬಾಡೂಟ ಸವಿದು ಭಟ್ಕಳ ನಗರದ ಹಳೇ ಬಸ್ ನಿಲ್ದಾಣ ಸಮೀಪ ಇರುವ ನಾಗಬನ ಹಾಗೂ ಕರಿಬಂಟ ಹನುಮ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಅಂತ ಸಾಮಾಜಿಕ ಜಾಲತಾಣದಲ್ಲಿ ಪೋಟೋಗಳು ವೈರಲ್ ಆಗಿತ್ತು.
ಸಿದ್ದರಾಮಯ್ಯ ಹೇಳಿದ್ದೇನು .. ?
ಇತ್ತ, ಕಲಬುರಗಿಯಲ್ಲಿ ಮಾಂಸಾಹಾರ ತಿಂದು ಸಿಟಿ ರವಿ ದೇವಸ್ಥಾನಕ್ಕೆ ಹೋಗಿರೋ ವಿವಾದಕ್ಕೆ ಬಾಗಲಕೋಟೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ದೇವಸ್ಥಾನಕ್ಕೆ ಹೋಗುವುದು, ದೇವಸ್ಥಾನಕ್ಕೆ ಹೋಗದೆ ಇರುವುದು. ಮಾಂಸ ತಿನ್ನೋದು, ಮಾಂಸ ತಿನ್ನದೆ ಇರುವುದು ಅದು ಇಷ್ಯುಗಳೇ ಅಲ್ಲ.
‘ಜನರ ಸಮಸ್ಯೆಗಳು, ನಾಡಿನ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಬೇಕು. ನಾನು ಈಗಾಗಲೇ ಬಿಜೆಪಿಗರಿಗೆ ನಾವು ಚರ್ಚೆ ಮಾಡಲು ತಯಾರಿದ್ದೇವೆ. ನೀವು ತಯಾರಿದ್ದೀರಾ ಎಂದು ಕೇಳಿದ್ದೇನೆ’
‘ಈ ನಾಡಿನ ರೈತರಿಗೆ,ಬಡವರಿಗೆ ಏನು ಮಾಡಿದೀರಿ ಅಂತ ಅವರು ಹೇಳಬೇಕು ಎಂದು ಬಿಜೆಪಿಗರಿಗೆ ಪ್ರಶ್ನೆ ಮಾಡಿದರು. ಜನರ ಸಮಸ್ಯೆಗಳನ್ನು ಬಗೆ ಹರಿಸುವದನ್ನು ಬಿಟ್ಟು ನಾಮ(ತಿಲಕ) ಹಾಕಿಕೊಳ್ಳುವುದು, ದೇವಸ್ಥಾನಕ್ಕೆ ಹೋಗುವದು, ಟಿಪ್ಪು ಸುಲ್ತಾನ್, ಗಾಂಧಿ , ಗೋಡ್ಸೆ, ಸಾವರ್ಕರ್ ಬಗ್ಗೆ ಮಾತನಾಡುವುದು ಇವೆಲ್ಲ ರಿಲೆವೆಂಟ್ ವಿಷಯಗಳಲ್ಲ” ಎಂದು ಸಿದ್ದರಾಮಯ್ಯ ತಿಳಿಸಿದರು.
ಅವರಿಗೆ ಸ್ಪಷ್ಟ ವಿಚಾರದಾರೆ ಇಲ್ಲ. ಆದರ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ. ಭೂತದ ಬಾಯಲ್ಲಿ ಭಗವದ್ಗೀತೆ ಅನ್ನೋದು ಜನರಿಗೆ ಗೊತ್ತಾಗಿದೆ ಎಂದು ಬಿಜೆಪಿಯವರನ್ನು ಸಿದ್ದರಾಮಯ್ಯ ಲೇವಡಿ ಮಾಡಿದರು.