ಕಡಬ : ಫೆ 21 : ಕಾಡಾನೆ ಎರಡು ಅಮಾಯಕ ಜೀವಗಳನ್ನು ಬಲಿ ಪಡೆದ ಬಳಿಕ ನಿದ್ದೆಯಿಂದ ಎಚ್ಚೆತ್ತಿರುವ ಸರಕಾರ ಹಾಗೂ ಅದರ ಅರಣ್ಯ ಇಲಾಖೆ ಕಡಬ ಪರಿಸರದಲ್ಲಿ ‘ಆಫರೇಷನ್ ಎಲಿಫೆಂಟ್’ಆರಂಭಿಸಿದೆ. ಸೋಮವಾರ ಬೆಳಿಗ್ಗೆ ಕಾಡಾನೆ ತುಳಿದು ಇಬ್ಬರು ಮೃತಪಟ್ಟಿದ್ದು, ಇದನ್ನು ನೋಡಿ ಆಕ್ರೋಶಿತರಾದ ಸಾವಿರಾರು ಗ್ರಾಮಸ್ಥರು ಕಾಡಾನೆಗಳನ್ನು ತೆರವುಗೊಳಿಸುವಂತೆ ಶವವಿಟ್ಟು ಪ್ರತಿಭಟನೆ ನಡೆಸಿದರು.ಆಕ್ರೋಶಿತರನ್ನು ಸಮಾಧನಿಸಲು ಸ್ಥಳಕ್ಕೆ ಆಗಮಿಸಿದ ಡಿಎಫ್ಒ, ಜಿಲ್ಲಾಧಿಕಾರಿಯನ್ನು ಸಾರ್ವಜನಿಕರು ತರಾಟೆಗೆತ್ತಿಕೊಂಡರು.
ಅಲ್ಲದೆ ಮೃತ ಯುವತಿಯ ಮನೆಗೆ ಸಂಜೆ ಸಚಿವ ಅಂಗಾರರು ಭೇಟಿ ನೀಡಿದ ವೇಳೆ ಮೃತರ ಕುಟುಂಬಸ್ಥರು ಸಚಿವರ ತೀವ್ರ ಆಕ್ರೋಶ ಹೊರ ಹಾಕಿದ್ದರು. ರಾಜಕಾರಣಿಗಳ ದೊಡ್ಡವರ ಮನೆಯವರು ಹೀಗೆ ಆನೆ ತುಳಿತಕ್ಕೆ ಒಳಗಾದರೇ ಮಾತ್ರ ಸರಕಾರ ಎಚ್ಚೆತ್ತುಕೊಳ್ಳುವುದು . ಈಗ ಯಾಕೇ ಬಂದಿದ್ದೀರಿ ? ನಮ್ಮ ಮನೆ ಮಗಳನ್ನು ಬದುಕಿಸಿ ತನ್ನಿ ಎಂದು ಮೃತರ ಕುಟುಂಬಸ್ಥರು ಸಚಿವ ಅಂಗಾರರವರನ್ನು ಹಿಗ್ಗಾಮುಗ್ಗಾ ತರಾಟೆಗೆತ್ತಿಕೊಂಡಿದ್ದರು. ಇವೆಲ್ಲಾದರ ಪರಿಣಾಮ ಎಂಬಂತೆ ಕಳೆದ ಹಲವು ತಿಂಗಳುಗಳಿಂದ ಕಾಡಾನೆಗಳನ್ನು ಅರಣ್ಯಕ್ಕೆ ಸ್ಥಳಾಂತರಿಸುವಂತೆ ಸ್ಥಳೀಯ 7 ಗ್ರಾಮದ ಗ್ರಾಮಸ್ಥರು ಮಾಡುತ್ತಿದ್ದ ಆಗ್ರಹ ಕಾರ್ಯರೂಪಕ್ಕೆ ಬಂದಿದೆ.
ಕಾಡಾನೆಗಳನ್ನು ಸ್ಥಳಾಂತರಿಸಲು ಅರಣ್ಯ ಇಲಾಖೆ ಸಿಬ್ಬಂದಿಗಳು ಸಕಲ ಸಿದ್ಧತೆಗಳೊಂದಿಗೆ ಮಂಗಳವಾರ ಬೆಳಗ್ಗೆಯಿಂದಲೇ ಕಾರ್ಯಾಚರಣೆ ಆರಂಭಿಸಿದ್ದಾರೆ. ನಾಗರಹೊಳೆ ಮತ್ತು ದುಬಾರೆ ಸಾಕಾನೆ ಶಿಬಿರದಿಂದ 5 ಆನೆಗಳನ್ನು ಕರೆತರಲಾಗಿದೆ. ಪುಂಡಾನೆಗಳನ್ನು ಸೆರೆ ಹಿಡಿಯುವುದರಲ್ಲಿ ಪರಿಣತಿಯನ್ನು ಹೊಂದಿರುವ ಅಭಿಮನ್ಯು, ಪ್ರಶಾಂತ್, ಹರ್ಷ, ಕಂಜನ್ ಹಾಗೂ ಮಹೇಂದ್ರ ಸೋಮವಾರ ತಡ ರಾತ್ರಿ ಕಡಬಕ್ಕೆ ಬಂದಿರುವ ದುಬಾರೆಯ ಸಾಕಾನೆಗಳು.

.ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ದಿನೇಶ್ ಕುಮಾರ್, ಎಸಿಎಫ್ ಪ್ರವೀಣ್ ಕುಮಾರ್, ವಲಯ ಅರಣ್ಯಾಧಿಕಾರಿಗಳಾದ ಎನ್.ಮಂಜುನಾಥ್, ಆರ್.ಗಿರೀಶ್, ರಾಘವೇಂದ್ರ ಅವರ ನೇತೃತ್ವದಲ್ಲಿ ಅರಣ್ಯ ಇಲಾಖೆಯ ಅಧಿಕಾರಿ ಹಾಗು ಸಿಬ್ಬಂದಿ ತಂಡ ಕಾರ್ಯಾಚರಣೆ ಆರಂಭಿಸಿದೆ. ಅರಣ್ಯ ಇಲಾಖೆಯ ಸಿಬ್ಬಂದಿಗಳ ತಂಡ ಅಯಕಟ್ಟಿನ ಸ್ಥಳಗಳಲ್ಲಿ ಕಾಡಾನೆಗಳ ಚಲನವಲನದ ಮೇಲೆ ನಿಗಾ ಇಟ್ಟಿದ್ದಾರೆ. ಇನ್ನೊಂದೆಡೆ ಡ್ರೋನ್ ಮೂಲಕವು ಕಾಡಾನೆಗಳನ್ನು ಗಮನಿಸಲಾಗುತ್ತಿದೆ. ನಾಗರಹೊಳೆ ಹಾಗು ಮಂಗಳೂರಿನಿಂದ ತಜ್ಞ ವೈದ್ಯಾಧಿಕಾರಿಗಳ ತಂಡವೂ ಆಗಮಿಸಿದೆ.
ರೆಂಜಿಲಾಡಿ ಗ್ರಾಮದ ನೈಲ ಸಮೀಪ ಕಾಡಾನೆ ಹಾವಳಿ ಮಿತಿ ಮೀರಿದೆ. ಎರಡು ತಿಂಗಳಿಂದ ಆನೆಗಳ ಉಪಟಳ ಹೇಳತೀರದಂತಾಗಿದೆ. ಆನೆಗಳ ಉಪಟಳವನ್ನ ತಡೆಯಬೇಕು, ಕೂಡಲೇ ಕ್ರಮ ಕೈಗೊಳ್ಳಬೇಕು ಅಂತಾ ಸ್ಥಳೀಯರು ಕಳೆದ ಕೆಲ ತಿಂಗಳುಗಳಿಂದ ಪಟ್ಟು ಹಿಡಿದಿದ್ದರು. ಆದರೇ ಸರಕಾರ ಕುಂಬಕರ್ಣ ನಿದ್ದೆಯಿಂದ ಎದ್ದಿರಲಿಲ್ಲ.

ಒಂದೆರೆಡು ಜೀವ ಹೋಗದ ಹೊರತು ಸರಕಾರ ಅಥಾವ ಅರಣ್ಯ ಇಲಾಖೆ ಆನೆಗಳನ್ನು ನಿಯಂತ್ರಿಸುವುದಿಲ್ಲ ಎಂದು ಜನರಾಡಿಕೊಳ್ಳುತ್ತಿದ್ದಂತೆ ಸೋಮವಾರ ಬೆಳಿಗ್ಗೆ ಆ ದುರಂತ ಸಂಭವಿಸಿದೆ. ಒಂದು ವೇಳೆ ಈ ಕಾರ್ಯಾಚರಣೆಯನ್ನು ಎರಡು ದಿನ ಮೊದಲೇ ಕೈಗೆತ್ತಿಕೊಂಡಿದ್ದರೇ ಎರಡು ಅಮಾಯಕ ಜೀವವಾದರೂ ಉಳಿಯುತಿತ್ತು ಎನ್ನುತ್ತಾರೆ ಸ್ಥಳೀಯರು.