ಪುತ್ತೂರು:ಫೆ 20 : ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ನಾಗನಕಟ್ಟೆ ನಿರ್ಮಾಣ ವಿಚಾರದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಎರಡನೇ ಬಾರಿ ತಂತ್ರಿಗಳ ಆದೇಶವನ್ನು ಉಲ್ಲಂಘಿಸಿ ಕಟ್ಟೆ ನಿರ್ಮಿಸುತ್ತಿದ್ದು ಇದನ್ನು ಅಲ್ಲಿನ ಭಕ್ತರಾದ ನಾವು ವಿರೋಧಿಸುತ್ತೇವೆ ಎಂದು ಹಿಂದೂ ಮುಖಂಡ ಅರುಣ್‌ಕುಮಾರ್ ಪುತ್ತಿಲ ಹೇಳಿದರು.
ಅವರು ಸೋಮವಾರ ನಾಗನ ಕಟ್ಟೆಯ ಸ್ಥಳದಲ್ಲಿ ದೇವಸ್ಥಾನ ಭಕ್ತ ವೃಂದದ ಹೆಸರಿನಲ್ಲಿ ಮುಂಡೂರು ಮೃತ್ಯುಂಜಯೇಶ್ವರ ದೇವಸ್ಥಾನದ ನಾಗನ ಕಟ್ಟೆಯ ಪ್ರಶ್ನಾಚಿಂತನೆಯಂತೆ ಕಟ್ಟದೆ ಅವೈಜ್ಞಾನಿಕವಾಗಿ ಕಟ್ಟುವ ಮೂಲಕ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಸರ್ವಾಧಿಕಾರಿ ಆಡಳಿತ ನಡೆಸುತ್ತಿದ್ದಾರೆಂದು ಆರೋಪಿಸಿ ನಡೆದ ಸಾರ್ವಜನಿಕ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.
ನಾಗನಕಟ್ಟೆ ನಿರ್ಮಾಣ ಮಾಡುವಾಗ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಯಾರನ್ನೂ ಪರಿಗಣಿಸಿಲ್ಲ. ತಂತ್ರಿಗಳ, ದೈವಜ್ಞರ ಆದೇಶ ಪಾಲನೆ ಮಾಡಿಲ್ಲ ಇದು ಗ್ರಾಮಸ್ಥರಿಗೆ ಹಾಗೂ ದೇವರಿಗೆ ಮಾಡಿದ ಅಪಮಾನವಾಗಿದೆ. ನಾಗನಕಟ್ಟೆ ನಿರ್ಮಾಣದಲ್ಲಿ ಲೋಪವಾದರೆ ಸೀಮೆಗೊಳಪಡುವ ಎಂಟು ಗ್ರಾಮಸ್ಥರಿಗೆ ತೊಂದರೆ ಉಂಟಾಗಲಿದೆ. ಅವೈಜ್ಞಾನಿಕವಾಗಿ ನಾಗನಕಟ್ಟೆಯನ್ನು ಮತ್ತೆ ನಿರ್ಮಿಸಲು ಮುಂದಾದ ಅಧ್ಯಕ್ಷರ ಜಿಹಾದಿ ಧೋರಣೆಯನ್ನು ನಾವು ಸಹಿಸುವುದಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ನಾಗನ ಕಟ್ಟೆ ನಿರ್ಮಿಸುವ ಸಲುವಾಗಿ ಅಷ್ಟಮಂಗಲ ಪ್ರಶ್ನೆ ಚಿಂತನೆ ನಡೆಸಲಾಗಿದ್ದು ಅದರಂತೆ ನಾಗನಕಟ್ಟೆ ನಿರ್ಮಿಸಲು ಭಕ್ತರ ಸಮ್ಮುಖದಲ್ಲಿ ನಿರ್ಧರಿಸಲಾಗಿತ್ತು. ಆದರೆ ಆ ಬಳಿಕ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಅವರ ಮನಸ್ಸಿಗೆ ತೋಚಿದಂತೆ ಕಟ್ಟೆ ನಿರ್ಮಿಸಿದ್ದು ಅದಕ್ಕೆ ಭಕ್ತಾದಿಗಳು ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಮತ್ತೆ ತನ್ನಿಷ್ಟದಂತೆ ಕಟ್ಟೆ ನಿರ್ಮಿಸಿದ್ದಾರೆ. ಈಗಿರುವ ಕಟ್ಟೆಯ ಒಳಗಡೆ ಮರದ ಕುತ್ತಿಯನ್ನು ಹಾಗೆಯೇ ಬಿಟ್ಟಿದ್ದಾರೆ. ಸ್ಥಳವನ್ನು ಶುದ್ದ ಮಾಡಿಲ್ಲ. ಈಗ ನಡೆಸಲಾಗುತ್ತಿರುವ ಕಾಮಗಾರಿ ಅಷ್ಟಮಂಗಳದಲ್ಲಿ ಕಂಡು ಬಂದಂತೆ ನಡೆಯುತ್ತಿದೆ ಎಂದು ತಂತ್ರಿಗಳು, ಅಧಿಕಾರಿಗಳು ಲಿಖಿತವಾಗಿ ನೀಡಿದ್ದಲ್ಲಿ ಕಟ್ಟೆ ನಿರ್ಮಾಣಕ್ಕೆ ಅವಕಾಶ ಮಾಡುತ್ತೇವೆ. ಇಲ್ಲದಿದ್ದಲ್ಲಿ ಹೋರಾಟ ಮುಂದುವರಿಸುತ್ತೇವೆ ಎಂದು ಹಿಂದೂ ಮುಖಂಡ ಅರುಣ್‌ಕುಮಾರ್ ಪುತ್ತಿಲ ಹೇಳಿದರು.
ವಿಷಯಾಂತರ ಮಾಡುವ ಉದ್ಧೇಶದಿಂದ ಕಟ್ಟೆ ಕಟ್ಟುವ ಜಾಗ ಖಾಸಗಿ ವ್ಯಕ್ತಿಗೆ ಸೇರಿದ್ದಾಗಿದೆ ಎಂದು ಸುದ್ದಿಗೋಷ್ಟಿಯಲ್ಲಿ ಹೇಳುತ್ತಿದ್ದಾರೆ. ಖಾಸಗಿ ವ್ಯಕ್ತಿಗೆ ಸೇರಿದ ಜಾಗದಲ್ಲಿ ದೇವಳದ ಅಧ್ಯಕ್ಷರು ಕಟ್ಟೆ ನಿರ್ಮಾಣ ಮಾಡುವುದು ಯಾಕೆ ? ಇಲ್ಲಿನ ವಿಚಾರವನ್ನು ನಾವು ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ ಆದರೆ ಅಧಿಕಾರಿಗಳೂ ಮೌನಕ್ಕೆ ಶರಣಾಗಿದ್ದಾರೆ. ದೇವಸ್ಥಾನದಲ್ಲಿ ಹಗರಣಗಳು ನಡೆದಿದೆ, ಹಣಕಾಸಿನ ವಿಚಾರದಲ್ಲಿ ಗೋಲ್ಮಾಲ್‌ಗಳು ನಡೆದಿದೆ. ಇಲಾಖೆಯ ಅಧಿಕಾರಿಗಳು ತನಿಖೆ ನಡೆಸಬೇಕು. ದೇವಳದ ದುಡ್ಡು ಭಕ್ತಾದಿಗಳ ದುಡ್ಡು ಪೋಲು ಮಾಡುತ್ತಿದ್ದಾರೆ. ನಿರ್ಣಯ ಪುಸ್ತಕ ಅಧ್ಯಕ್ಷರ ಮನೆಯಲ್ಲೇ ಇಟ್ಟುಕೊಂಡಿದ್ದಾರೆ. ಇವರು ಮಾಡಿದ ಎಲ್ಲಾ ಕೃತ್ಯಗಳಿಗೂ ನಮ್ಮಲ್ಲಿ ದಾಖಲೆ ಇದೆ. ಇಲಾಖೆಯು ಅಧ್ಯಕ್ಷರನ್ನು ಅಮಾನತು ಮಾಡಿ ಆಡಳಿತಾಧಿಕಾರಿಯನ್ನು ನೇಮಿಸಬೇಕು ಎಂದು ಪುತ್ತಿಲ ಆಗ್ರಹಿಸಿದರು.
ಸಮಿತಿಯನ್ನು ರಚನೆ ಮಾಡದೆ, ಇಲಾಖೆಯಿಂದ ಅನುಮತಿಯನ್ನು ಪಡೆಯದೆ ಕಟ್ಟೆ ನಿರ್ಮಾಣ ಮಾಡಲು ಮುಂದಾಗಿರುವುದು ಭಕ್ತಾದಿಗಳಿಗೆ ಮಾಡಿದ ಅಪಮಾನ. ಭಕ್ತರ ಭಾವನೆಗೆ ಗೌರವ ಕೊಡುವ ಕೆಲಸವನ್ನು ಅಧ್ಯಕ್ಷರು ಮಾಡಬೇಕಿತ್ತು. ತಂತ್ರಿಗಳು, ದೈವಜ್ಞರ ಆದೇಶಕ್ಕೆ ಬೆಲೆ ಕೊಡಬೇಕಿತ್ತು ತನ್ನಿಷ್ಟದಂತೆ ಮಾಡುವುದಾದರೆ ಅಷ್ಟು ಹಣ ಖರ್ಚು ಮಾಡಿ ಪ್ರಶ್ನೆ ಇಟ್ಟದ್ದಾದರೂ ಯಾಕೆ ? ಎಂದು ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಯಂತ್ ನಡುಬೈಲು ಪ್ರಶ್ನಿಸಿದರು.
ದೇವಸ್ಥಾನದಲ್ಲಿ ೧3 ವರ್ಷದಿಂದ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಸುಳ್ಳು ಆರೋಪ ಮಾಡಿ ಕೆಲಸದಿಂದ ಬಿಟ್ಟಿದ್ದಾರೆ. ದೇವಳದ ಸಭಾಭವನದ ಆದಾಯ ದೇವಸ್ಥಾನಕ್ಕೆ ಹೋಗುತ್ತಿತ್ತು. ಸಭಾಭವನದಲ್ಲಿ ಪೂಜೆ ಮಾಡಲು ಅಧ್ಯಕ್ಷರು ಅವಕಾಶ ನೀಡಿಲ್ಲದ ಕಾರಣಕ್ಕೆ ಸ್ಥಳಕ್ಕೆ ಜಾಗ ಕೊಟ್ಟವರು ಕೇಸು ಮಾಡಿದ್ದಾರೆ, ಸಭಾಭವನದ ಜಾಗ ರಿಜಿಸ್ಟರ್ ಮಾಡಿಲ್ಲ ಎಂದು ಆರೋಪಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ, ಅನಿಲ್‌ಕುಮಾರ್ ಕನ್ನಾರ್‌ನೂಜಿ, ಜಾತ್ರೋತ್ಸವ ಸಮಿತಿ ಮಾಜಿ ಅಧ್ಯಕ್ಷರಾದ ಸುಂದರ ಗೌಡ ನಡುಬೈಲು, ವ್ಯವಸ್ಥಾಪನಾ ಸಮಿತಿ ಸದಸ್ಯ ನಾರಾಯಣ ನಾಯ್ಕ ಮಾತನಾಡಿದರು.
ಮುಂಡೂರು ಗ್ರಾಪಂ ಅಧ್ಯಕ್ಷೆ ಪುಷ್ಪಾ ಪುರಂದರ ಗೌಡ, ಗ್ರಾಪಂ ಸದಸ್ಯರಾದ ಬಾಲಕೃಷ್ಣ ಕುರೆಮಜಲು, ಅಶೋಕ್‌ಕುಮಾರ್ ಪುತ್ತಿಲ, ನೀಲಪ್ಪ ಕುರೆಮಜಲು, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಾಲಚಂದ್ರ, ದನಂಜಯ ಕಲ್ಲಮಜ, ಶ್ರೀಕಾಂತ್ ಹಿಂದಾರ್, ಸುಧೀರ್‌ಶೆಟ್ಟಿ ನೇಸರ, ಸಂದ್ರಶೇಖರ ಕುರೆಮಜಲು, ಬಾಲಕೃಷ್ಣ ಪಿರಿಯಡ್ಕ, ಪಿರೆಸ್ಕಾಡಿಸೋಜಾ, ಸಜ್ಜನ್‌ಕುಮಾರ್ ಕನ್ನಾರೂಜಿ, ಹೊನ್ನಪ್ಪಪೂಜಾರಿ ಕುರೆಮಜಲು, ಹರೀಶ್‌ನಾಯ್ಕ್ ಬರೆಕೋಡಿ, ಲಕ್ಷ್ಮೀಶ್ ರಾವ್ ಪುತ್ತಿಲ, ಸಂತೋಷ್‌ಕೌಡಿಂಜ, ಗಣೇಶ್ ಕೋಡಿಬೈಲು, ಪುರುಷೋತ್ತಮ ಪುತ್ತಿಲ, ನಾರಾಯಣ ನಾಯ್ಕ್ ಪುಳಿಂಕೆತ್ತಡಿ, ಕೊರಗಪ್ಪ ನಾಯ್ಕ ಕಲ್ಲಮ, ಗೋಪಾಲಕೃಷ್ಣ ನಡುಬೈಲು, ಅಮೃತ್‌ರಾಜ್ ಕಲ್ಲಮ, ಅಶ್ವಿತ್ ಕಲ್ಲಮ, ಶಿವಪ್ಪ ನಾಯ್ಕ್ ಬರೆಕೋಡಿ, ಆನಂದ ನಾಯ್ಕ ನರಿಮೊಗರು, ವಿವೇಕ್ ನರಿಮೊಗರು, ಚಂದ್ರ ನಡುಬೈಲು, ರಮೇಶ್ ಟೈಲರ್, ರವಿ ಮುಕ್ವೆ, ಕೇಶವ ನರಿಮೊಗರು, ದೇರಣ್ಣ ಶೆಟ್ಟಿ ನಡುಬೈಲು, ಜನಾರ್ಧನ ಪೂಜಾರಿ ಕುರೆಮಜಲು, ಸುಬ್ಬಯ್ಯ ಶೆಟ್ಟಿ ಶೆಟ್ಟಿ ಮಜಲು, ಶೀನಶೆಟ್ಟಿ ಹಿಂದಾರು, ಪ್ರಸಾದ್ ಆಚಾರ್ಯ ಕಲ್ಲಮ ಮೊದಲಾದವರು ಉಪಸ್ಥಿತರಿದ್ದರು.