ಪುತ್ತೂರು: ಫೆ 20 : ಖಾಸಗಿ ವ್ಯಕ್ತಿಗೆ ಸೇರಿದ ಜಾಗದಲ್ಲಿ ಅವರ ಒಪ್ಪಿಗೆಯ ಮೇರೆಗೆ, ಯಾವುದೇ ದೇಣಿಗೆ ಸಂಗ್ರಹಿಸದೆ ಸ್ವಂತ ಹಣದಲ್ಲಿ ನಾಗನ ಕಟ್ಟೆಯನ್ನು ದೈವಜ್ಞರ, ವಾಸ್ತು ಶಿಲ್ಪಿಗಳ ಮತ್ತು ಕ್ಷೇತ್ರದ ತಂತ್ರಿಯವರ ಮಾರ್ಗದರ್ಶನದಲ್ಲಿ ನಿರ್ಮಿಸುತ್ತಿದ್ದು ಪ್ರತಿಷ್ಟಾ ಕಾರ್ಯ ನಡೆಸಿದ ಬಳಿಕ ನಾವು ಮತ್ತು ಜಾಗದ ಮಾಲಕರು ಕಟ್ಟೆಯನ್ನು ಮುಂಡೂರು ಮೃತ್ಯುಂಜಯೇಶ್ವರ ದೇವಳಕ್ಕೆ ಅರ್ಪಿಸಲಿದ್ದೇವೆ. ಅದರೇ ಕೆಲವು ಪಟ್ಟ ಭದ್ರ ಹಿತಾಸಕ್ತಿಗಳು ಈ ಕುರಿತು ಅಪಪ್ರಚಾರ ನಡೆಸಿ ಪ್ರತಿಷ್ಟಾ ಕಾರ್ಯಕ್ಕೆ ಅಡ್ಡಿ ಮಾಡಲು ಪ್ರಯತ್ನಿಸುತ್ತಿದ್ದು, ಇದನ್ನು ನಿರ್ಲಕ್ಷಿಸಿ ಎಲ್ಲಾ ಭಕ್ತರು ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಳ್ಳಬೇಕು ಎಂದು ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಲೋಕಪ್ಪ ಗೌಡ ಕೆರೆಮನೆ ಹೇಳಿದರು.
ಮೃತ್ಯುಂಜಯೇಶ್ವರ ದೇವಳದಲ್ಲಿ ನಡೆಸಿದ ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲಿ ದೇಗುಲದ ಪಕ್ಕದಲ್ಲಿರುವ ವಾರಿಜಾ ಆಚಾರ್ಯ ಮತ್ತು ಮಕ್ಕಳ ಹೆಸರಿನಲ್ಲಿರುವ ಪಟ್ಟಾ ಜಾಗದಲ್ಲಿ ದೇವಳಕ್ಕೆ ಸಂಬಂಧಪಟ್ಟ ನಾಗನಕಟ್ಟೆ ಇರುವುದು ಗೋಚರವಾಗಿತ್ತು. ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ ವಾಸ್ತು ಪ್ರಕಾರವೇ ಕಟ್ಟೆಯನ್ನು ನಿರ್ಮಿಸಿ ಕಳೆದ ವರ್ಷ ಮೇ 3೦ರಂದು ಪ್ರತಿಷ್ಠೆ ಮಾಡಲು ದಿನ ನಿಗದಿ ಮಾಡಲಾಗಿತ್ತು . ಆ ವೇಳೆ ನಾಗನಕಟ್ಟೆ ನಿಯಮ ಪ್ರಕಾರ ನಿರ್ಮಿಸಿಲ್ಲ ಎಂದು ಕೆಲವರು ಆರೋಪಿಸಿದ್ದರು. ಈ ಹಿನ್ನಲೆಯಲ್ಲಿ ಮತ್ತೆ ದೈವಜ್ಞರು, ವಾಸ್ತು ಶಿಲ್ಪಿ, ತಂತ್ರಿ ಗಳನ್ನು ಕರೆಸಿ ಭಕ್ತರ ಉಪಸ್ಥಿತಿಯಲ್ಲಿ ಪ್ರಶ್ನಾ ಚಿಂತನೆ ನಡೆಸಿ ತೀರ್ಮಾನ ಕೈಗೊಳ್ಳಲು ಮುಂದಾದ ವೇಳೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಅದಕ್ಕೂ ಅಡ್ಡಿ ಉಂಟು ಮಾಡಿದ್ದಾರೆಂದು ಲೋಕಪ್ಪ ಗೌಡ ಆರೋಪಿಸಿದ್ದಾರೆ.
ಹಾಗಾಗಿಯೂ ಕೆಲವೊಂದಷ್ಟು ಮಾರ್ಪಾಡುಗಳನ್ನು ಮಾಡಿ ಈಗ ಮತ್ತೆ ಕಟ್ಟೆ ನಿರ್ಮಿಸಲಾಗಿದ್ದು, ಮಾರ್ಚ್ 5,7 ಮತ್ತು 8 ರಂದು ಪ್ರತಿಷ್ಠಾ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ. ಆದರೆ ಈಗ ಮತ್ತೆ ಅಪಪ್ರಚಾರ ಮಾಡುವ, ಪ್ರತಿಭಟನೆಗಳಿಯುವ ಕೆಲಸ ಆರಂಭಗೊಂಡಿದೆ. ಉದ್ದೇಶಪೂರ್ವಕವಾಗಿ ಈ ಕಾರ್ಯವನ್ನು ತಡೆಯುವ ಕೆಲಸಕ್ಕೆ ಯಾರೂ ಸಹಕಾರ ನೀಡಬಾರದು ಎಂದು ಲೋಕಪ್ಪ ಗೌಡರವರು ವಿನಂತಿಸಿದ್ದಾರೆ.
ಜಾಗದ ಮಾಲೀಕ ಪ್ರವೀಣ್ ಆಚಾರ್ಯ ಮಾತನಾಡಿ ” ನಾಗನಕಟ್ಟೆ ನಿರ್ಮಾಣವಾಗುತ್ತಿರುವ ಸ್ಥಳ ನಮ್ಮ ವರ್ಗಾಸ್ಥಳ. ಪ್ರತಿಷ್ಠೆಯಾಗುವ ತನಕ ನಾಗನಕಟ್ಟೆಯ ಜಾಗ ನಮ್ಮಲ್ಲೇ ಇರುತ್ತದೆ. ನಾಗನಕಟ್ಟೆಯಲ್ಲಿರುವ ಮರದ ಕುತ್ತಿಯನ್ನು ತೆಗೆಯದೆ ನಾಗನಕಟ್ಟೆ ನಿರ್ಮಾಣ ಮಾಡಬೇಕು ಎಂದು ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಿದ್ದರೂ, ಕುತ್ತಿಯನ್ನು ತೆರವು ಮಾಡಲೇಬೇಕು ಎಂಬ ಹಠಕ್ಕೆ ಬಿದ್ದು ನಮ್ಮನ್ನು ಬಲಿಪಶು ಮಾಡಲಾಗುತ್ತಿದೆ. ಹಿಂದೂ ಸಂಘಟನೆಯಲ್ಲಿರುವವರೇ ಈ ರೀತಿ ಮಾಡುತ್ತಿದ್ದಾರೆ ಎಂದರೆ ಏನರ್ಥ ಎಂದು ಪ್ರಶ್ನಿಸಿದರು.
ದೇವಳದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷೆ ನಳಿನಿ ಲೋಕಪ್ಪ ಗೌಡ, ವ್ಯವಸ್ಥಾಪನಾ ಸಮಿತಿಯ ಸದಸ್ಯ ಜನಾರ್ದನ ಜೋಯಿಷ ಕುತ್ತಿಗದ್ದೆ, ಭಕ್ತ ಸುಭಾಶ್ಚಂದ್ರ ಶೆಣೈ ಉಪಸ್ಥಿತರಿದ್ದರು