ಪುತ್ತೂರು: ಪುತ್ತೂರು ಸರಕಾರಿ ಆಸ್ಪತ್ರೆಯನ್ನು 300 ಹಾಸಿಗೆ ಆಸ್ಫತ್ರೆಯಾಗಿ ಮೇಲ್ದರ್ಜೆಗೇರಿಸುವ ಹಾಗೂ ಮೆಡಿಕಲ್ ಕಾಲೇಜು ಸ್ಥಾಪನೆಯ ಕುರಿತಾಗಿ ಬಜೆಟ್ ನಲ್ಲಿ ಪ್ರಸ್ತಾಪವಾಗಿಲ್ಲ. ನಮ್ಮ ನಿರೀಕ್ಷೆ ಸುಳ್ಳಾಗಿದೆ. ಬೇಸರದ ಸಂಗತಿ. ಸರ್ಕಾರ ಗ್ರಾಮೀಣ ಭಾಗದ ಆರೋಗ್ಯದ ವಿಚಾರವನ್ನು ನಿರ್ಲಕ್ಷ್ಯ ಮಾಡುತ್ತಿರುವುದು ಬೇಸರದ ಸಂಗತಿ ಎಂದು ಪುತ್ತೂರು ಸರಕಾರಿ ಮೆಡಿಕಲ್ ಕಾಲೇಜು ಹೋರಾಟ ಸಮಿತಿ ಎಂ.ಬಿ. ವಿಶ್ವನಾಥ ರೈ ತಿಳಿಸಿದ್ದಾರೆ.
ಪುತ್ತೂರಿನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, “ ಹತ್ತಿರದಲ್ಲೆ ಚುನಾವಣೆಯಿದ್ದು ಪುತ್ತೂರು ಕ್ಷೇತ್ರದಿಂದ ಚುನಾವಣೆಗೆ ಸ್ಫರ್ಧಿಸ ಬಯಸುವ ಅಭ್ಯರ್ಥಿಗಳು ಆಸ್ಫತ್ರೆ ಹಾಗೂ ಮೆಡಿಕಲ್ ಕಾಲೇಜ್ ವಿಚಾರವನ್ನು ತಮ್ಮ ಪ್ರಣಾಳಿಕೆಯಲ್ಲಿ ಸೇರಿಸುವಂತೆ ಸಮಿತಿಯೂ ಒತ್ತಾಯಿಸಲಿದೆ. ಇದನ್ನು ನಾವು ಪಕ್ಷಾತೀತವಾಗಿ ಮಾಡಲಿದ್ದೇವೆ. ಸೇಡಿಯಾಪಿನಲ್ಲಿ 40 ಎಕ್ರೆ ಜಮೀನು ಕಾದಿರಿಸಿರುವುದು ನಮ್ಮ ಮೆಡಿಕಲ್ ಕಾಲೇಜ್ ಬೇಡಿಕೆಗೆ ಹೆಚ್ಚಿನ ಬಲ ತುಂಬಿದೆ. ಈ ಭಾಗದ ಶಾಸಕರು ಮನಸ್ಸು ಮಾಡಿದರೆ ಆಸ್ಫತ್ರೆ ಮೇಲ್ದರ್ಜೆಗೇರಿಸುವುದು ಹಾಗೂ ಮೆಡಿಕಲ್ ಕಾಲೇಜ್ ಸ್ಥಾಪಿಸುವುದು ದೊಡ್ಡ ಸಂಗತಿಯಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಪುತ್ತೂರಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಯಾಗಬೇಕು ಎಂಬ ನೆಲೆಯಲ್ಲಿ ಸಮಿತಿಯೂ ಕಡೆಯಿಂದ ಆಂದೋಲನವನ್ನು ಮಾಡುತ್ತಿದ್ದು, ಪುತ್ತೂರು, ಕಡಬ, ಸುಳ್ಯ, ವಿಟ್ಲ, ಬೆಳ್ತಂಗಡಿ ಭಾಗದಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಸಲಾಗುತ್ತಿದೆ. ಸಮಿತಿಯ ಅಭಿಯಾನಕ್ಕೆ ಎಲ್ಲಾ ಭಾಗದಲ್ಲಿ ಕೈಗಾರಿಕಾ ಮತ್ತು ವಾಣಿಜ್ಯ ಸಂಘದ ಬೆಂಬಲವನ್ನು ನೀಡುತ್ತಿದ್ದು, ಫೆ.28ರಂದು ವಿಟ್ಲದಲ್ಲಿ ಆಂದೋಲನ ಹಾಗೂ ಸಹಿಸಂಗ್ರಹ ಕಾರ್ಯ ನಡೆಯಲಿದೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಝೇವಿಯರ್ ಡಿಸೋಜ ತಿಳಿಸಿದರು.
ಮೆಡಿಕಲ್ ಕಾಲೇಜು ಬೇಡಿಕೆಯ ಮನವಿಯನ್ನು ತಾಲೂಕಿನಾಧ್ಯಂತ ಹಂಚಲಾಗುತ್ತಿದ್ದು, ಸಹಿ ಸಂಗ್ರಹವೂ ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ಇದನ್ನು ಸರ್ಕಾರಕ್ಕೆ ಸಲ್ಲಿಸುವ ಕೆಲಸವನ್ನು ಮುಂದಿನದ ದಿನದಲ್ಲಿ ಮಾಡಲಾಗುವುದು. ಬಜೆಟ್ ಲೇಖಾನುಧಾನದಲ್ಲಿ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆ ಮೇಲ್ದರ್ಜೆಗೇರಿಸುವ ಬೇಡಿಕೆಯನ್ನು ಸೇರಿಸುವ ಕಾರ್ಯ ಮಾಡಬೇಕು. ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಇದನ್ನು ಸೇರಿಸಿ ಮುಂದಿನ ದಿನದಲ್ಲಿ ಆಡಳಿತಕ್ಕೆ ಬರುವ ಸರ್ಕಾರ ಜನರ ಬೇಡಿಕೆ ಈಡೇರಿಸುವ ಕಾರ್ಯ ಮಾಡಬೇಕೆಂದು ಸಮಿತಿಯ ಉಪಾಧ್ಯಕ್ಷ ವಿಶ್ವಪ್ರಸಾದ್ ಸೇಡಿಯಾಪು ಒತ್ತಾಯಿಸಿದರು.
ಮಹಿಳಾ ಸಮಿತಿಯ ಮೂಲಕ ಮಹಿಳಾ ಮಂಡಲ, ಯುವತಿ ಮಂಡಲಗಳನ್ನು ಸಂಪರ್ಕಿಸಿ ಬೆಂಬಲ ಕೇಳುವ ಕಾರ್ಯ ನಡೆಯುತ್ತಿದೆ. ಹಿಂದುಳಿದ ಹಾಗೂ ಗ್ರಾಮೀಣ ಮಹಿಳೆಯರ ಆರೋಗ್ಯದ ರಕ್ಷಣೆಯ ನಿಟ್ಟಿನಲ್ಲಿ ಮೆಡಿಕಲ್ ಕಾಲೇಜು ಸಹಕಾರಿಯಾಗಲಿದೆ ಈ ಮೂಲಕ ಸರ್ಕಾರಕ್ಕೆ ಹಕ್ಕೊತ್ತಾಯದ ನಿರ್ಣಯವನ್ನು ನೀಡುವ ಕಾರ್ಯ ಮಾಡಲಾಗುವುದು ಮಹಿಳಾ ವಿಭಾಗದ ಅಧ್ಯಕ್ಷೆ ಶಶ್ಮಿ ಭಟ್ ಅಜ್ಜಾವರ ತಿಳಿಸಿದರು.
ಕೇವಲ ಪುತ್ತೂರು ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಗಳಲ್ಲಿ ಮಾತ್ರವಲ್ಲದೇ ಪುತ್ತೂರು ಉಪ ವಿಭಾಗ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಿಧಾನ ಸಭಾ ಕ್ಷೇತ್ರಗಳ ಅಭ್ಯರ್ಥಿಗಳಲ್ಲಿ ಹಾಗೂ ರಾಷ್ಟ್ರೀಯ ಪಕ್ಷಗಳ ಜಿಲ್ಲಾ ಪ್ರಣಾಳಿಕೆಯಲ್ಲೂ ಈ ವಿಚಾರವನ್ನು ಉಲ್ಲೇಖಿಸುವ ಬಗ್ಗೆ ಒತ್ತಾಯಿಸಲಾಗುವುದು. ನಮ್ಮ ಸಮಿತಿಯ ಹೋರಾಟದಿಂದ ನಿಧಾನವಾಗಿ ಆಸ್ಫತ್ರೆ ಹಾಗೂ ಮೆಡಿಕಲ್ ಕಾಲೇಜ್ ನ ಅಗತ್ಯತೆಯ ಬಗ್ಗೆ ಜನರಲ್ಲಿ ನಿಧಾನವಾಗಿ ಜಾಗೃತಿ ಮೂಡುತ್ತಿದೆ. ಜನರಿಗೆ ಚುನಾವಣೆಯಲ್ಲಿ ಭಾವನಾತ್ಮಕ ವಿಷಯ ಪ್ರಾಮುಖ್ಯತೆಯನ್ನು ಪಡೆಯದೇ ಇಂತಹ ಮೂಲಭೂತ ಸೌಲಭ್ಯಗಳ ಬೇಡಿಕೆ ಪ್ರಾಧನ್ಯತೆ ಪಡೆದರೆ ಆಗ ಅಡಳಿತಶಾಹಿಯ ಮೇಲೆ ಒತ್ತಡ ಬಿದ್ದು ಕೆಲಸ ಕಾರ್ಯಗಳು ಆಗುತ್ತವೆ ಎಂದು ಸಂಚಾಲಕ ಲಕ್ಷ್ಮೀಶ ಗಬ್ಬಲಡ್ಕ ಹೇಳಿದರು.