ಪೆರ್ನೆ, ಫೆ 20 : ಬಂಟ್ವಾಳ ತಾಲೂಕಿನ ಪೆರ್ನೆ ಗ್ರಾಮದ ಮಾಡತ್ತಾರುವಿನ ಕೊರತಿಕಟ್ಟೆ ಎಂಬಲ್ಲಿ ಸ ಪರಿವಾರ ಶ್ರೀ ವ್ಯಾಘ್ರ ಚಾಮುಂಡಿ ದೈವಸ್ಥಾನ ಇದೀಗ ಪ್ರತಿಷ್ಠಾ ಬ್ರಹಕಲಶೋತ್ಸವಕ್ಕೆ ಸಿದ್ಧಗೊಂಡಿದೆ. ಇದರ ಕಾರ್ಯಕ್ರಮವು ಫೆ 21 ರಿಂದ ಫೆ 23 ರವರೆಗೆ ನಡೆಯಲಿದೆ.
ದಿನಾಂಕ ಫೆ 21 ರಂದು ಬೆ 7:30 ರಿಂದ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಸಪರಿವಾರ ವ್ಯಾಘ್ರ ಚಾಮುಂಡಿ, ಉಳ್ಳಾಕ್ಲು, ಕೊರತಿ ದೈವ ಮತ್ತು ಗುಳಿಗ ದೈವಗಳ ನೇಮೋತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮದೊಂದಿಗೆ ನಡೆಯಲಿದೆ.
ಸಂಜೆ 4 ರಿಂದ ಮನೋರಂಜನಾ ಕಾರ್ಯಕ್ರಮವು ನಡೆಯಲಿದೆ. 6 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮ ದಲ್ಲಿ ಮಾಣಿಲ ಮೋಹನದಾಸ ಶ್ರೀಗಳ ಸಾನಿಧ್ಯದೊಂದಿಗೆ ಮಾಜಿ ಮಂತ್ರಿಗಳಾದ ರಮಾನಾಥ ರೈ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಶ್ರೀಕಾಂತ ಶೆಟ್ಟಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಚೆನ್ನಪ್ಪ ಗೌಡ (ಯೋಜನಾಧಿಕಾರಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ) ರವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ದಿನಾಂಕ 22 ರಂದು ಬೆಳಗ್ಗೆ 6 ರಿಂದ ಭಂಡಾರದ ಮನೆಯಲ್ಲಿ ಮಹಾಗಣಪತಿ ಹವನ, ಬ್ರಹ್ಮ ಕಲಶ ಪೂಜೆಯೊಂದಿಗೆ ಧಾರ್ಮಿಕ ಕಾರ್ಯಕ್ರಮವು ಪ್ರಾರಂಭವಾಗಲಿದೆ.
ಸಂಜೆ 6:30 ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ವು ನಡೆಯಲಿದೆ. ಕನ್ಯಾಡಿಯ ಬ್ರಹ್ಮಾನಂದ ಸರಸ್ವತಿ ಶ್ರೀಗಳ ಸಾನಿಧ್ಯದೊಂದಿಗೆ, ಅಧ್ಯಕ್ಷತೆಯನ್ನು ಪುತ್ತೂರಿನ ಶಾಸಕ ಸಂಜೀವ ಮಠಂದೂರು, ಮುಖ್ಯ ಅತಿಥಿಯಾಗಿ ಇಂಧನ ಸಚಿವರಾದ ಸುನಿಲ್ ಕುಮಾರ್ ರವರು ಭಾಗವಹಿಸಲಿದ್ದಾರೆ.
ದಿನಾಂಕ 23 ರ ಬೆಳಗ್ಗೆ 6 ರಿಂದ ಧಾರ್ಮಿಕ ಕಾರ್ಯಕ್ರಮ ಗಳು ಪ್ರಾರಂಭವಾಗಿ, ಬೆ 8.24 ರ ಮೀನಲಗ್ನದ ಶುಭಮುಹೂರ್ತದಲ್ಲಿ ವ್ಯಾಘ್ರ ಚಾಮುಂಡಿ ಉಳ್ಳಾಕ್ಲು, ಗುಳಿಗ ಮಂಚ ದೈವಗಳ ಪ್ರತಿಷ್ಠೆ ಬ್ರಹ್ಮಕಲಶಾಭಿಷೇಕವು ನಡೆಯಲಿದೆ.
ಬೆಳಗ್ಗೆ 11:30 ಕ್ಕೆ ಧರ್ಮಸಭೆಯು ರಾಮಚಂದ್ರಪುರಮಠದ ರಾಘವೇಶ್ವರ ಶ್ರೀ ಗಳ ಸಾನಿಧ್ಯದೊಂದಿಗೆ, ಸಂಸದ ನಳಿನ್ ಕುಮಾರ್ ಕಟೀಲ್ ರ ಅಧ್ಯಕ್ಷ ತೆಯಲ್ಲಿ, ಮುಖ್ಯ ಅತಿಥಿಯಾಗಿ ಬಂದರು ಸಚಿವ ಎಸ್ ಅಂಗಾರ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ರವರು ಭಾಗವಹಿಸಲಿದ್ದಾರೆ.
ಸಂಜೆ 5:30 ರಿಂದ ರಾಮಕೃಷ್ಣ ಕಾಟುಕುಕ್ಕೆ ಬಳಗದಿಂದ ಭಕ್ತಿ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.
ಸುಮಾರು 500 ವರ್ಷಗಳ ಹಿಂದಿನಿಂದಲೂ ಈ ಪ್ರದೇಶದಲ್ಲಿ ದೈವಸನ್ನಿಧಿಯಿತ್ತು. ಭಾರೀ ವಿಜೃಂಭಣೆಯಿಂದ ದೈವಾರಾಧನೆ ನಡೆಯುತ್ತಿತ್ತು. ಕಾರಣಾಂತರಗಳಿಂದ 175- 180 ವರ್ಷಗಳಿಂದ ಅಲ್ಲಿ ಆ ಆಚರಣೆ, ವಿಜೃಂಭಣೆ ಎಲ್ಲವೂ ನಿಂತಿತ್ತು. ಇದೀಗ ಹಲವಾರು ವರ್ಷಗಳ ಕಾಲ ದೈವಕ್ಕೆ ನಡೆಯುತ್ತಿದ್ದ ಆಚರಣೆಗಳ ನಿಂತ ಕಾರಣ ಈ ಪ್ರದೇಶದ ಸುತ್ತಮುತ್ತ ಅವಘಗಡಗಳು ಸಂಭವಿಸುತ್ತಿತ್ತು. ದೈವಕ್ಕೆ ಸಂಬಂಧಪಟ್ಟ ಕುಟುಂಬಸ್ಥರು ಊರು ಬಿಟ್ಟು ತೆರಳಿಹೋಗಿದ್ದು, ಅನೇಕ ಕಷ್ಟ ನಷ್ಟಗಳಿಂದ ಸರ್ವನಾಶವಾಗಿತ್ತು. ಅದಕ್ಕೆ ಅರ್ಥಿಕ ಅಥವಾ ಭೌತಿಕ ಅಥವಾ ಮಾನಸಿಕ, ಆರೋಗ್ಯ ಹೀಗೆ ಹತ್ತು ಹಲವು ಕಾರಣಗಳು.
ಈ ಗ್ರಾಮದಲ್ಲಿ ಅನೇಕ ಕಷ್ಟ ನಷ್ಟಗಳು, ಅವಘಡಗಳು ನಡೆಯುತ್ತಿತ್ತು. ಅಲ್ಲಲ್ಲಿ ಅಸಹಜ ಸಾವುಗಳು, 13 ನಾಗರಹಾವುಗಳ ಸಾವು ಸಂಭವಿಸುತ್ತಿತ್ತು. ಸುಮಾರು 17 ಆತ್ಮಹತ್ಯೆ ಪ್ರಕರಣಗಳು ನಡೆದಿದೆ. 13 ನಾಗರ ಹಾವುಗಳ ಸರಣಿ ಸಾವುಗಳಾಗಿತ್ತು. ಅದಲ್ಲದೆ ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ ಈ ಭಾಗದಲ್ಲಿ ಹಾದು ಹೋಗಿರುವುದು, ಆ ಹೆದ್ದಾರಿಯಲ್ಲಿ ನಿರಂತರವಾಗಿ ಅಪಘಾತಗಳು ಸಂಭವಿಸುತ್ತಿತ್ತು.
ಅದೊಮ್ಮೆ ಗ್ಯಾಸ್ ಟ್ಯಾಂಕರ್ ಅಪಘಾತದಿಂದ ಸುಮಾರು 11 ಜನ ಮೃತಪಟ್ಟಿದ್ದರು.
ಇಂತಹಾ ಹಲವು ಅವಘಡಗಳು ಸಂಭವಿಸಿದಾಗ ಊರಿನ ಪ್ರಮುಖರೆಲ್ಲಾ ಸೇರಿ ಈ ಗ್ರಾಮದಲ್ಲಿ ಏನೋ ಇದೆ. ಅದಕ್ಕೆ ಪರಿಹಾರ ಮಾಡಬೇಕಾಗಿದೆ. ಹಾಗಾಗಿ ಒಂದು ತಂಡ ರಚಿಸಿಕೊಂಡು ಪರಿಹಾರ ಕ್ರಮಗಳಿಗಾಗಿ ನಿರ್ಣಯ ತೆಗೆದುಕೊಳ್ಳುತ್ತಾರೆ. ಆ ಹಿನ್ನೆಲೆಯಲ್ಲಿ ಖ್ಯಾತ ಜ್ಯೋತಿಷಿ ಕೆ ವಿ ಗಣೇಶ್ ಭಟ್ ಮುಳಿಯ ರ ಮುಖೇನ ಅಷ್ಟಮಂಗಳ ಪ್ರಶ್ನೆ ಚಿಂತನೆಯನ್ನು ನಡೆಸಲಾಯಿತು.
ಅಲ್ಲಿ ಅಜೀರ್ಣ ಹೊಂದಿದ್ದ ದೈವಸ್ಥಾನ ಹಾಗೂ ನಿಲುಗಡೆಯಾಗ ಉತ್ಸವಾದಿಗಳ ಬಗ್ಗೆ ಪ್ರಶ್ನೆ ಚಿಂತನೆಯಲ್ಲಿ ಕಂಡು ಬಂದಿತ್ತು. ಕಾರಣಾಂತರಗಳಿಂದ ಆ ಮುಂದುವರಿದ ಕಾರ್ಯವು ಅರ್ಧದಲ್ಲಿಯೇ ನಿಂತಿತ್ತು.
ಅವಘಡಗಳು ಮತ್ತಷ್ಟು ಹೆಚ್ಚಿದವು. ಈ ಬಾರಿ ಸಾಧ್ಯವೇ ಇಲ್ಲ ಎಂದು ಮತ್ತೊಮ್ಮೆ ಊರ ಪ್ರಮುಖರು ಸೇರಿ ಪ್ರಶ್ನೆ ಚಿಂತನೆಯಲ್ಲಿ ಕಂಡಂತೆ ಪರಿಹಾರ ಮಾರ್ಗವನ್ನು ರೂಪಿಸಲು ಹೊರಟೆ ಬಿಟ್ಟರು. ಆ ಪ್ರಶ್ನೆಯಲ್ಲಿ ಕಂಡುಬಂದಂತೆ ಉತ್ಖನನ ನಡೆಸಿದಾಗ ದೈವಕ್ಕೆ ಹಾಗೂ ನಾಗಬನಕ್ಕೆ ಸಂಬಂಧಿಸಿದ ಹಲವು ಕರುಹುಗಳು ಪತ್ತೆಯಾಗಿತ್ತು. ಇದೀಗ ಕಳೆದ ಮೂರ್ನಾಲ್ಕು ವರ್ಷಗಳಿಂದ ಆ ಸ್ಥಳದಲ್ಲಿ ನೂತನವಾಗಿ ಸಪರಿವಾರ ಶ್ರೀ ವ್ಯಾಘ್ರಚಾಮುಂಡಿ ದೈವಸ್ಥಾನ ಹಾಗೂ ನಾಗಬನವನ್ನು ನಿರ್ಮಿಸಲಾಗಿದೆ. ಆ ನಿರ್ಮಾಣ ಕಾರ್ಯವು ವಾಸ್ತು ಶಿಲ್ಪಿ ಮಹೇಶ್ ಮುನಿಯಂಗಳರವರ ನೇತೃತ್ವದಲ್ಲಿ ಊರವರ ತನು ಮನ ಧನ ಸಹಾಯದಿಂದ ಸುಮಾರು ರೂ. 1.25 ಕೋಟಿ ವೆಚ್ಚದಲ್ಲಿ ಪುನರ್ನಿರ್ಮಾಣಗೊಂಡಿದೆ. ಇದರ ಹೊಣೆಯನ್ನು ಈಶ್ವರ ಪ್ರಸನ್ನ ಪೆರ್ನೆಕೋಡಿರವರನ್ನು ಒಳಗೊಂಡ ತಂಡವು ವಹಿಸಿಕೊಂಡಿದ್ದು, ಎಲ್ಲಾ ಕಾರ್ಯಗಳು ಸಾಂಗವಾಗಿ ನಡೆದು ಇದೀಗ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಸಿದ್ಧಗೊಂಡಿದೆ.