ವಿಟ್ಲ : ಫೆ 19 : ವಿಟ್ಲದ ಆಟೋ ಚಾಲಕರೊಬ್ಬರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲ ಸಮೀಪದ ಬಂಟ್ವಾಳ ತಾಲೂಕು ಅಳಿಕೆ ಗ್ರಾಮದ ಮಡಿಯಾಳ ಎಂಬಲ್ಲಿ ಫೆ 18 ರಂದು ನಡೆದಿದೆ. ಅಳಿಕೆ ಗ್ರಾಮದ ಬೈರಿಕಟ್ಟೆ ಮಡಿಯಾಲ ನಿವಾಸಿ ವೆಂಕಪ್ಪ ಮೂಲ್ಯ ದಿನೇಶ ಕುಮಾರ್ ಎಂ(32) ಆತ್ಮಹತ್ಯೆ ಮಾಡಿಕೊಂಡವರು.
ದಿನೇಶ ಅವರು ಫೆ 18 ರಂದು ಬೆಳ್ಳಂಬೆಳ್ಳಿಗೆ 1.30 ರ ಸುಮಾರಿಗೆ ಮನೆಯ ಕೋಣೆಯ ಸೀಲಿಂಗ್ʼಗೆ ಅಳವಡಿಸಲಾಗಿದ್ದ ಕಬ್ಬಿಣದ ಹುಕ್ ಗೆ ನೈಲಾನ್ ಹಗ್ಗವನ್ನು ಕಟ್ಟಿ ಅದರ ಇನ್ನೊಂದು ತುದಿಯನ್ನು ನೇಣು ಕುಣಿಕೆಯನ್ನಾಗಿಸಿ ಕುತ್ತಿಗೆಗೆ ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಇದನ್ನು ಗಮನಿಸಿದ ಅವರ ತಂದೆ ಕೂಡಲೇ ಹಗ್ಗವನ್ನು ಕತ್ತರಿಸಿ ಕಾರಿನಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಅಲ್ಲಿ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ದಿನೇಶ್ ಅವರ ತಮ್ಮನಿಗೆ ಮನೆಯವರು ವಿವಾಹಕ್ಕೆ ಹೆಣ್ಣು ಗೊತ್ತು ಮಾಡಿದ್ದು, ಇವರಿಗೆ ವಿವಾಹ ನಿಗದಿಯಾಗಿರಲಿಲ್ಲ. ತನಗಿಂತ ಮೊದಲು ತಮ್ಮನಿಗೆ ಮದುವೆ ಅಗುವುದೆಂಬ ಯೋಚನೆಯಲ್ಲಿದ್ದ ದಿನೇಶ ಕುಮಾರ್ ನೊಂದುಕೊಂಡಿದ್ದು, ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಮೃತರ ತಂದೆ ವಿಟ್ಲ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.