ಪುತ್ತೂರು: ಫೆ 18 : ಅಸುಪಾಸಿನ ನಾಲ್ಕು ತಾಲೂಕುಗಳಿಗೆ ಕೇಂದ್ರ ಸ್ಥಾನದಲ್ಲಿರುವ ಪುತ್ತೂರು ಉಪವಿಭಾಗದ ಪುತ್ತೂರು ಸರಕಾರಿ ಆಸ್ಫತ್ರೆ ಮೇಲ್ದರ್ಜೆಗೆರಬಹುದು ಎಂಬ ನಿರೀಕ್ಷೆ ಈ ಬಾರಿಯ ಬಜೆಟ್ ಬಳಿಕ ಹುಸಿಯಾಗಿದೆ. ಪ್ರಸ್ತುತ 100 ಬೆಡ್ ಸಾಮರ್ಥ್ಯವನ್ನಷ್ಟೆ ಈ ಆರೋಗ್ಯ ಕೇಂದ್ರ ಹೊಂದಿದೆ. ಪುತ್ತೂರಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜ್ ನಿರ್ಮಾಣವಾಗಬೇಕು ಎಂಬ ಕೂಗು ದಶಕಗಳಿಂದ ಕೇಳಿ ಬರುತ್ತಿದೆ. ಇದು ಸಾಧ್ಯವಾಗಬೇಕಾದರೇ ಇಲ್ಲಿ 300 ಹಾಸಿಗೆ ಸಾಮ ರ್ಥ್ಯದ ಸುಸಜ್ಜಿತ ಸರ್ಕಾರಿ ಆಸ್ಪತ್ರೆ ನಿರ್ಮಾಣವಾಗಬೇಕಿರುವುದು ಅತೀ ಅವಶ್ಯಕ. ಅಜುಮಾಸು 11 ವರ್ಷಗಳಿಂದ ಕೇಳಿ ಬರುತ್ತಿರುವ ಈ ಬೇಡಿಕೆಗೆ ಚುನಾವಣಾ ಪೂರ್ವ ಬಜೆಟ್ ನಲ್ಲಿ ಮನ್ನಣೆ ಸಿಗಬಹುದೆಂಬ ನಿರೀಕ್ಷೆ ಇಲ್ಲಿನ ಜನತೆಯಲ್ಲಿತ್ತು. ಆದರೇ ಫೆ 17 ರಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಂಡಿಸಿದ ಬಜೆಟ್ ನಲ್ಲಿ ಈ ಬಗ್ಗೆ ಚಕಾರ ಎತ್ತಲಾಗಿಲ್ಲ.
ಕರ್ನಾಟಕದ ಶಿಕ್ಷಣ ಕ್ಷೇತ್ರದ ಕಾಶಿ ಎಂದೇ ಕರೆಯಲ್ಪಡುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 8 ಖಾಸಗಿ ಮೆಡಿಕಲ್ ಕಾಲೇಜುಗಳಿದ್ದರೂ ಒಂದೇ ಒಂದು ಸರಕಾರಿ ಮೆಡಿಕಲ್ ಕಾಲೇಜ್ ಇಲ್ಲ. ಇಲ್ಲಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ವೈದ್ಯರಾಗುವ ಕನಸನ್ನು ನನಸು ಮಾಡಲು ಹಾಗೂ ಬಡ ಜನರಿಗೆ ಸೂಕ್ತ ವೈದಕೀಯ ಸೌಲಭ್ಯ ಸಿಗುವಂತಾಗಲು ಜಿಲ್ಲೆಯ ಕೇಂದ್ರ ಸ್ಥಾನ ಮಂಗಳೂರಿಗಿಂತ 50 ಕಿ.ಮೀ ದೂರದಲ್ಲಿರುವ ಪುತ್ತೂರಿನಲ್ಲಿ ವೈದಕೀಯ ಕಾಲೇಜ್ ನಿರ್ಮಿಸಬೇಕೇಂಬ ನ್ಯಾಯಯುತ ಬೇಡಿಕೆ 2010ರ ಅಸುಪಾಸಿನಲ್ಲಿ ಜನ್ಮ ತಾಳಿತ್ತು. ಮುಂಬರುವ ದಿನಗಳಲ್ಲಿ ಜಿಲ್ಲಾ ಕೇಂದ್ರವಾಗುವ ಎಲ್ಲಾ ಆಹರ್ತೆಯನ್ನು ಹೊಂದಿರುವ ಪುತ್ತೂರು ಮೆಡಿಕಲ್ ಕಾಲೇಜ್ ಸ್ಥಾಪನೆಗೆ ಸೂಕ್ತ ಸ್ಥಳವು ಆಗಿದೆ.
ಪುತ್ತೂರು-ಉಪ್ಪಿನಂಗಡಿ ರಸ್ತೆಯ ಪಕ್ಕದಲ್ಲಿ, ಬನ್ನೂರು ಗ್ರಾಮದ ಸೇಡಿಯಾಪಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಉದ್ದೇಶದಿಂದ 7 ವರ್ಷದ ಹಿಂದೆ 40 ಎಕರೆ ಜಾಗವನ್ನು ಅಂದಿನ ಶಾಸಕಿ ಶಕುಂತಳಾ ಶೆಟ್ಟಿ ಮುತುವರ್ಜಿಯಿಂದ ಮೀಸಲಿಡಲಾಗಿತ್ತು. ಈ ಬಳಿಕ ಮೆಡಿಕಲ್ ಕಾಲೇಜ್ ಸ್ಥಾಪನೆಯ ಕನಸ್ಸಿಗೆ ರೆಕ್ಕೆ ಪುಕ್ಕ ಹುಟ್ಟಿಕೊಂಡಿತ್ತು. ಆದರೆ ಬಳಿಕದ ದಿನಗಳಲ್ಲಿ ಮೆಡಿಕಲ್ ಕಾಲೇಜು ಈ ಭಾಗಕ್ಕೆ ತರುವ ನಿಟ್ಟಿನಲ್ಲಿ ಪೂರಕ ಕೆಲಸಗಳು ಮಾತ್ರ ವೇಗದಿಂದ ನಡೆಯಲಿಲ್ಲ.
ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜ್ ಮಂಜೂರು ಆಗಬೇಕಾದರೇ, ಪುತ್ತೂರಿನ ಹಾಲಿ ಸರಕಾರಿ ಆಸ್ಫತ್ರೆ 300 ಬೆಡ್ ಆಸ್ಫತ್ರೆಯಾಗಿ ಮೇಲ್ದರ್ಜೆಗೇರುವುದು ಅನಿವಾರ್ಯ. ಈ ನಿಟ್ಟಿನಲ್ಲಿ ಸುಮಾರು 189 ಕೋಟಿ ವೆಚ್ಚದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸುವ ಕಾರ್ಯವನ್ನು ಶಾಸಕ ಸಂಜೀವ ಮಠಂದೂರು ಅವರ ನೇತೃತ್ವದಲ್ಲಿ ನಡೆದಿತ್ತು. ಆಸ್ಫತ್ರೆಯ ಪಕ್ಕದಲ್ಲಿದ್ದ ಹಲವು ಸರಕಾರಿ ಕಛೇರಿಗಳು ಪ್ರಸ್ತುತ ಪುತ್ತೂರಿನ ಮಿನಿ ವಿಧಾನ ಸೌಧಕ್ಕೆ ಸ್ಥಳಾಂತರಗೊಂಡಿರುವುದರಿಂದ ತೆರವಾದ 5 ಎಕ್ರೆಗೂ ಮಿಕ್ಕಿ ಜಮೀನನ್ನು ಸರಕಾರಿ ಆಸ್ಫತ್ರೆಯ ಪಹಣಿಗೆ ಕಂದಾಯ ಇಲಾಖೆ ಸೇರಿಸಿದ್ದು, ಆಸ್ಫತ್ರೆಯನ್ನು ಮೇಲ್ದರ್ಜೆಗೇರಿಸುವ ಕಾರ್ಯಕ್ಕೆ ಪೂರಕ ವಾತಾವರಣ ನಿರ್ಮಿಸಿ ಕೊಟ್ಟಿದೆ.

ಇಷ್ಟಾದರೂ ಆಸ್ಫತ್ರೆಯನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾವನೆಗೆ ಸರಕಾರದ ಆಡಳಿತಾತ್ಮಕ ಅನುಮೋದನೆ ದೊರಕಿಲ್ಲ. ಪ್ರಸ್ತಾವನೆಯ ಕಡತ ಸಚಿವ ಸಂಪುಟ ಶಾಖೆಗೆ ಹೋಗುವ ಮೊದಲಿನ ಹಂತವಾದ ಸ್ಕ್ರೀನಿಂಗ್ ಕಮಿಟಿಯಲ್ಲಿ ಪೆಡಿಂಗ್ ಇರುವುದಾಗಿ ಅರ್ಟಿಐ ಕಾರ್ಯಕರ್ತ ರಾಜೇಶ್ ಕೃಷ್ಣ ಪ್ರಸಾದ್ ಸಲ್ಲಿಸಿದ ಅರ್ಜಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಇದೇ ಜನವರಿ 19 ರಂದು ಉತ್ತರಿಸಿದ್ದರು.
ಏತನ್ಮಧ್ಯೆ ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ಸ್ಥಾಪಿಸಬೇಕೇಂದು ಒತ್ತಾಯಿಸಿ ಎಂ. ಬಿ ವಿಶ್ವನಾಥ ರೈಗಳ ನೇತ್ರತ್ವದಲ್ಲಿ ಸಮಾನ ಮನಸ್ಕರು ಅಭಿಯಾನ ಸಮಿತಿಯನ್ನು ರಚಿಸಿಕೊಂಡಿದ್ದಾರೆ. ಈ ಸಮಿತಿಯ ನೇತ್ರತ್ವದಲ್ಲಿ ಹಲವು ಸಭೆಗಳು , ಪಾದಯಾತ್ರೆ, ವಿವಿಧ ಭಾಗದಲ್ಲಿ ಸಹಿ ಸಂಗ್ರಹ ಅಭಿಯಾನವೂ ನಡೆಯುತ್ತಿದೆ. ಆದರೆ,ಇದ್ಯಾವುದಕ್ಕೂ ಸರಕಾರ ಜಗ್ಗುವ ಲಕ್ಷಣ ತೋರುತ್ತಿಲ್ಲ.