ಮಲ್ಪೆ : ಗೂಡ್ಸ್ ರಿಕ್ಷಾವೊಂದರಲ್ಲಿ ಆಗಮಿಸಿದ ಇಬ್ಬರು ಮೃತದೇಹವೊಂದನ್ನು ತ೦ದು ರಸ್ತೆ ಪಕ್ಕ ಎಸೆದು ಹೋದ ಘಟನೆ ಇಲ್ಲಿನ ಉಡುಪಿ ಜಿಲ್ಲೆಯ ಮಲ್ಪೆ ಸಮೀಪದ ಕೆಮ್ಮಣ್ಣು ಗ್ರಾಮದಲ್ಲಿ ಗುರುವಾರ ಹಾಡುಹಗಲೇ ನಡೆದಿದೆ. ಈ ಘಟನೆ ಪಕ್ಕದ ಅಂಗಡಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಮಲ್ಪೆ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಫೆ 16 ರಂದು ಮಧ್ಯಾಹ್ನ 1 ಗಂಟೆಯ ಸುಮಾರಿಗೆ ರಸ್ತೆ ಪಕ್ಕ ಬಂದು ನಿಂತ ಗೂಡ್ಸ್ ರಿಕ್ಷಾದಿಂದ ಚಾಲಕ ಇಳಿದು ಸ್ವಲ್ಪ ದೂರ ಹೋಗಿ ನಿಲ್ಲುತ್ತಾನೆ, ಇನ್ನೊಬ್ಬ ಗೂಡ್ಸ್ ರಿಕ್ಷಾದ ಹಿಂಭಾಗದಿಂದ ವ್ಯಕ್ತಿಯ ಶವವನ್ನು ಎಳೆದು ರಸ್ತೆಯ ಪಕ್ಕ ಮಲಗಿಸುತ್ತಾನೆ. ನಂತರ ಇಬ್ಬರೂ ಗೂಡ್ಸ್ ಆಟೋ ಹತ್ತಿ ತಿರುಗಿಸಿ ಹಿಂದಕ್ಕೆ ಹೋಗುತ್ತಾರೆ.
ರಸ್ತೆಯಲ್ಲಿ ಜನ ಸಂಚಾರ ವಿರಳವಾಗಿರುವುದನ್ನು ಗಮನಿಸಿ ಈ ಕೃತ್ಯವನ್ನು ಎಸಗಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ. ತನಿಖೆಯ ಸಂದರ್ಭದಲ್ಲಿ ಆರೋಪಿಗಳಿಬ್ಬರು ಹೊರಜಿಲ್ಲೆಯಿಂದ ಬಂದ ಕಲ್ಲಂಗಡಿ ಹಣ್ಣು ವ್ಯಾಪಾರಿಗಳು ಎಂದು ತಿಳಿದು ಬಂದಿದೆ. ಮೃತಪಟ್ಟ ವ್ಯಕ್ತಿ ಯಾರು ಆತನನ್ನು ಯಾಕೆ ಈ ರೀತಿ ರಸ್ತೆ ಪಕ್ಕ ಎಸೆದು ಹೋದರು ಎಂಬ ಬಗ್ಗೆ ತನಿಖೆ ನಡೆಯುತ್ತಿದ್ದು, ಶವವನ್ನು ಸಾಮಾಜಿಕ ಕಾರ್ಯಕರ್ತ ಈಶ್ವರ ಮಲ್ಪೆ ಅವರು ಅಲ್ಲಿಂದಸಾಗಿಸಿ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿದ್ದಾರೆ.

ಸಾರ್ವಜನಿಕ ವಲಯದಲ್ಲಿ ಆಕ್ರೋಶ
ಮೃತದೇಹವನ್ನು ರಸ್ತೆ ಬದಿ ಎಸೆದ ಕಲ್ಲಂಗಡಿ ವ್ಯಾಪಾರಿಗಳು, ಮಾನವೀಯತೆಯನ್ನೇ ಮರೆತು ವರ್ತಿಸಿದ್ದಾರೆ . ಇದೊಂದು ಅಮಾನವೀಯ ಘಟನೆಯೆಂದು ವಿಡಿಯೋ ವೈರಲ್ ಆಗುತ್ತಲೇ ಸಾರ್ವಜನಿಕ ವಲಯದಲ್ಲಿ ಆಕ್ರೋಶ ಮಾತುಗಳು ಕೇಳಿ ಬಂದಿವೆ. ಮನುಷ್ಯತ್ವವನ್ನೇ ನಾಚಿಸುವಂತಿದೆ ಈ ದೃಶ್ಯಾವಳಿ ಎಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಕಾಮೇಂಟ್ ಗಳನ್ನು ಹಾಕುತ್ತಿದ್ದಾರೆ.

ಇನ್ನೂ ಪೊಲೀಸ್ ಮೂಲಗಳ ಪ್ರಕಾರ, ಪತ್ತೆಯಾದ ಮೃತ ದೇಹ , ಅದನ್ನು ಎಸೆದು ಹೋದ ಹಣ್ಣಿನ ವ್ಯಾಪಾರಿಗಳ ಸಂಗಡಿಗನದೇ ಎಂದು ಹೇಳಲಾಗುತ್ತಿದೆ. ಆಜುಮಾಸು 45 ರ ಹರೆಯದ ವ್ಯಕ್ತಿಯ ಮೃತದೇಹ ಇದಾಗಿದ್ದು, ಹೊರ ಊರಿನಿಂದ ಹಣ್ಣಿನ ವ್ಯಾಪಾರಕ್ಕೆಂದು ಬಂದಿದ್ದು, ಮಾರ್ಗ ಮಧ್ಯೆಯೇ ಅನಾರೋಗ್ಯದಿಂದ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಹೀಗಾಗಿ ದಾರಿ ಮಧ್ಯೆಯೇ ಮೃತದೇಹ ಎಸೆದು ಏನೂ ಆಗಿಲ್ಲದಂತೆ ವ್ಯಾಪಾರಿಗಳು ತೆರಳಿದ್ದಾರೆಂದು ತಿಳಿದು ಬಂದಿದೆ.
ಮೃತ ದೇಹ ಎಸೆದಿರುವ ವಿಡಿಯೋವನ್ನು ನಿಖರ ನ್ಯೂಸಿನ ಫೇಸ್ ಬುಕ್ ಪೇಜಿನಲ್ಲಿ ಈ ಕೆಳಗಿನ ಲಿಂಕ್ ನಲ್ಲಿ ನೋಡಬಹುದು : https://fb.watch/iKKR4M7MDd/