Heart Attack : ಪುತ್ತೂರು: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಪುತ್ತೂರಿನ ಹಿರಿಯ ನ್ಯಾಯಾವಾದಿ ಹೃದಯಾಘಾತಕ್ಕೆ ತುತ್ತಾಗಿ ಕುಸಿದು, ರೈಲಿನಿಂದ ಹೊರ ಬಿದ್ದು ಮೃತಪಟ್ಟ ಘಟನೆ ಫೆ 15 ರ ತಡ ರಾತ್ರಿ ನಡೆದಿದೆ.ನಗರದ ಎಪಿಎಂಸಿ ರಸ್ತೆಯ ನೆಲ್ಲಿಕಟ್ಟೆ ನಿವಾಸಿ, ವಕೀಲ ಕೆ.ಪಿ. ಜೇಮ್ಸ್ ಹೃದಯಾಘಾತಕ್ಕೆ ತುತ್ತಾಗಿ ಮೃತಪಟ್ಟ ವಕೀಲರು. ಮಲಬಾರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ತಮಿಳುನಾಡು ಕಡೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ.
ಕೆ.ಪಿ.ಜೇಮ್ಸ್ ಅವರು ಪತ್ನಿಯೊಂದಿಗೆ ಚೆಂಗನೂರಿನ ಧಾರ್ಮಿಕ ಕ್ಷೇತ್ರಕ್ಕೆ ರೈಲಿನಲ್ಲಿ ತೆರಳುತ್ತಿದ್ದರು. ಹವಾನಿಯಂತ್ರಿತ ಕೋಚ್‌ನಲಿದ್ದ ಅವರು ರಾತ್ರಿ ವೇಳೆ ಶೌಚಾಲಯಕ್ಕೆ ಹೋದವರು ಹೃದಯಾಘಾತಕ್ಕೊಳಗಾಗಿ ರೈಲಿನಿಂದ ಕುಸಿದು ಬಿದ್ದು ಮೃತಪಟ್ಟಿದ್ದಾರೆನ್ನಲಾಗಿದೆ. ಅವರು ಕಣ್ಣೂರು ಮತ್ತು ಕ್ಯಾಲಿಕಟ್ ಮಧ್ಯೆ ಬಿದ್ದಿರಬಹುದೆಂದು ಶಂಕಿಸಲಾಗಿದೆ.
ಫೆ 15 ರಂದು ಮಧ್ಯರಾತ್ರಿ ಶೌಚಲಾಯಕ್ಕೆ ತೆರಳಿದ ಜೇಮ್ಸ್ ತುಂಬಾ ಹೊತ್ತಾದರೂ ವಾಪಸ್ ಬಾರದ ಕಾರಣ ಅವರ ಪತ್ನಿ ಹುಡುಕಾಡಿದ್ದಾರೆ. ಎಲ್ಲೂ ಕಾಣದಿದ್ದಾಗ ಕಿರುಚಾಡಿದ್ದಾರೆ. ವ್ಯಕ್ತಿಯೊಬ್ಬರು ರೈಲಿನಿಂದ ಕೆಳಗೆ ಬಿದ್ದಿರುವ ವಿಚಾರವನ್ನು ರೈಲಿನಲ್ಲಿದ್ದ ಪ್ರಯಾಣಿಕರು ಅವರ ಗಮನಕ್ಕೆ ತಂದರು.
ಈ ಮಧ್ಯೆ ತಲ್ವೇರಿ ಬಳಿಯ ಧರ್ಮಡಮ್ ಎಂಬಲ್ಲಿ ರೈಲ್ವೆ ಹಳಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ತನ್ನೇರಿಯ ಆಸ್ಫತ್ರೆಯ ಶವಾಗರದಲ್ಲಿರಿಸಿದ್ದರು. ಇತ್ತ ಜೇಮ್ಸ್ ಪತ್ನಿ ತಲ್ವೇರಿಯಲ್ಲಿ ಪತಿ ರೈಲಿನಲ್ಲಿ ನಾಪತ್ತೆಯಾಗಿರುವ ಕುರಿತು ರೈಲ್ವೇ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ರೈಲ್ವೇ ಪೊಲೀಸರು ಧರ್ಮಡಮ್ ಬಳಿ ಪತ್ತೆಯಾದ ಮೃತದೇಹದ ಜೇಬಿನಲ್ಲಿದ್ದ ಗುರುತುಚೀಟಿ ಮತ್ತು ಭಾವಚಿತ್ರ ಆಧರಿಸಿ ಅದು ಕೆ.ಪಿ. ಜೇಮ್ಸ್ ಅವರದ್ದು ಎಂದು ಖಚಿತಪಡಿಸಿದ್ದಾರೆ.. ಬಳಿಕ ಸಂಬಂಧಿಕರು ಸ್ಥಳಕ್ಕೆ ತೆರಳಿ ದೃಢಪಡಿಸಿದ್ದಾರೆ.
ಕೆ.ಪಿ. ಜೇಮ್ಸ್ ದಂಪತಿ ಪ್ರಯಾಣಿಸುತ್ತಿದ್ದ ರೈಲಿನಲ್ಲಿ ಚೆಂಗಣ್ಣೂರಿಗೆ ತೆರಳುತ್ತಿದ್ದ ಲಾವತ್ತಡ್ಕದ ಅಬ್ರಾಹಂ ತೋಮಸ್ ಎಂಬುವರು ಇದ್ದರು. ರಾತ್ರಿ ವೇಳೆ ಮಹಿಳೆ ಕಿರುಚಾಡಿದ್ದನ್ನು ಗಮನಿಸಿದ ಅವರು ವಿಚಾರಿಸಿದ ವೇಳೆ ಪುತ್ತೂರಿನವರೆಂದು ಗೊತ್ತಾಗಿದೆ. ಬಳಿಕ ಅವರು ಕೊಝಿಕ್ಕೊಡ್ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿ, ಜೇಮ್ಸ್ ಅವರ ಪತ್ನಿಯನ್ನು ರೈಲಿನಿಂದ ಇಳಿಸಿ ಅವರ ಸಂಬಂಧಿಕರ ಮನೆಗೆ ಕಳುಹಿಸಿದ್ದರು ಹಾಗೂ ಮೃತ ದೇಹ ಪತ್ತೆಗೂ ಸಹಕರಿಸಿದ್ದಾರೆ.
ಕೆ.ಪಿ.ಜೇಮ್ಸ್ ಅವರು ಆರಂಭದಲ್ಲಿ ಪುತ್ತೂರಿನ ವಕೀಲರಾದ ದಿವಂಗತ ಯು.ಪಿ.ಶಿವರಾಮ ಅವರ ಕಚೇರಿಯಲ್ಲಿದ್ದರು. ಬಳಿಕ ಪುತ್ತೂರು ಕೋರ್ಟ್ ರಸ್ತೆಯ ಅಕ್ಷಯ ಕಾಂಪ್ಲೆಕ್ಸ್‌ನಲ್ಲಿ ಸ್ವಂತ ಕಚೇರಿ ಹೊಂದಿದ್ದರು. ವಕೀಲ ಕೆ.ಪಿ. ಜೇಮ್ಸ್ ಅವರು ನಿಧನದ ಪ್ರಯುಕ್ತ ಪುತ್ತೂರು ವಕೀಲರ ಸಂಘದಲ್ಲಿ ಗುರುವಾರ ಸಭೆ ನಡೆಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.