ಪುತ್ತೂರು : ಫೆ 17: ಶ್ರೀ ಮಹಾವಿಷ್ಣು ಕೂರ್ಮಾವತಾರ ಎತ್ತಿದ ಪುಣ್ಯಭೂಮಿ, ಅಂಬರಗಾಮಿ ಕಾರಣಿಕ ಶಕ್ತಿಗಳಾದ ಪೂಮಾಣಿ-ಕಿನ್ನಿಮಾಣಿ ದೈವಗಳು ಭೂಸ್ಪರ್ಶ ಮಾಡಿ ಮೊದಲ ಆರಾಧನೆ ಪಡೆದ ಪುಣ್ಯ ನೆಲ ಮತ್ತು ಕಾರಣಿಕ ಪುರುಷರಾದ ಕೋಟಿ-ಚೆನ್ನಯರ ಜನ್ಮಭೂಮಿ ಪಡುಮಲೆಯಲ್ಲಿ ಜೀರ್ಣೋದ್ದಾರಗೊಂಡು ಮೈದಳೆದು ನಿಂತಿರುವ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಸಂಭ್ರಮ. ಅಯ್ಯಪ್ಪ ಸ್ವಾಮಿ ವಿರಜಮಾನನಾಗಿರುವ ಶಬರಿಮಲೆ, ತಿಮ್ಮಪ್ಪ ನೆಲೆಸಿರುವ ತಿರುಮಲೆಯಷ್ಟೆ ಪವಿತ್ರತೆಯನ್ನು ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಪಡುಮಲೆ ಕೂಡ ಹೊಂದಿದೆ ಎಂಬ ಪ್ರತಿತಿಯಿದೆ.
ಕೋಟಿ-ಚೆನ್ನಯರ ತಾಯಿ ಸುವರ್ಣ ಕೇದಗೆ, ಮಾತೆ ರಾಜರಾಜೇಶ್ವರಿಯು ಮೊಟ್ಟೆಯ ರೂಪತಾಳಿ ವಿಪ್ರರಿಗೆ ಸಿಕ್ಕಿದ ಪವಿತ್ರ ಮದಕ (ಕೆರೆ) ಕ್ಕಿಂತ ಸರಿ ಸುಮಾರು ಒಂದು ಕಿ. ಮೀ ದೂರದಲ್ಲಿ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನವಿತ್ತು. ಅಷ್ಟಮಂಗಲ ಪ್ರಶ್ನೆ ಚಿಂತನೆಯಲ್ಲಿ ಕಂಡಬಂದಂತೆ ಇದನ್ನು ಸಂಪೂರ್ಣ ನೆಲ ಸಮ ಮಾಡಿ ಪುನರ್ನಿಮಿಸುವ ಕಾರ್ಯ ಪ್ರಗತಿಯಲ್ಲಿದ್ದು ಅಂತಿಮ ಹಂತ ತಲುಪಿದೆ. ಕ್ಷೇತ್ರದ ಜೀರ್ಣೋದ್ಧಾರ ಕಾರ್ಯವನ್ನು ಕಳೆದ ವರ್ಷದ ಜನವರಿ ತಿಂಗಳಲ್ಲಿ ಆರಂಭಿಸಲಾಗಿದ್ದು, ಅಜುಮಾಸು ಒಂದು ವರ್ಷದೊಳಗಡೆ ಪೂರ್ಣಗೊಂಡಿದೆ. ಇದರ ಸಂಪೂರ್ಣ ವೆಚ್ಚವನ್ನು ಊರ ದಾನಿಗಳೇ ಭರಿಸಿರುವುದು ವಿಶೇಷ ಹಾಗೂ ಕರಸೇವೆಯಲ್ಲೂ ಅವರು ಕೈ ಜೋಡಿಸಿದ್ದಾರೆಂದು ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಭಟ್ ಚಂದುಕೂಡ್ಲು ತಿಳಿಸಿದ್ದಾರೆ
ಗುರುವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ದೇಗುಲದ ಕುರಿತ ಮಾಹಿತಿಯನ್ನು ಹಂಚಿಕೊಂಡರು. ಸುಮಾರು ರೂ.6 ಕೋಟಿ ವೆಚ್ಚದಲ್ಲಿ ದೇಗುಲ ಭವ್ಯವಾಗಿ ತಲೆಯೆತ್ತಿದೆ. ಇದರಲ್ಲಿ 2.5 ಕೋ ರೂಪಾಯಿಯನ್ನು ಮರಕ್ಕೆ ವ್ಯಯಿಸಲಾಗಿದ್ದು, ದಳಿ ಮತ್ತು ಸಾಗುವಾನಿ ಮರಗಳನ್ನು ಯೆಥೇಚ್ಚವಾಗಿ ಬಳಸಲಾಗಿದೆ. ಕಗ್ಗಲ್ಲು, ಕೆಂಪು ಪಾಲಿಶು ಕಲ್ಲುಗಳಿಂದ ನಿರ್ಮಿಸಿರುವ ಗರ್ಭಗುಡಿಗೆ ಕಾಷ್ಠಶಿಲ್ಪ ಕೆತ್ತನೆಗಳಿರುವ, ದಳಿ ಮತ್ತು ಸಾಗುವಾನಿ ಮರದ ಮಾಡು ಮಾಡಿ ತಾಮ್ರದ ಹೊದಿಕೆಯನ್ನು ಹೊದೆಸಲಾಗಿದೆ. ಸಾಗುವಾನಿ ಮರದ ಸುಂದರ ಕಾಷ್ಠ ಕೆತ್ತನೆಗಳುಳ್ಳ ಹಾಗೂ ತಾಮ್ರ ಹೊದಿಕೆಯ ತೀರ್ಥ ಮಂಟಪ, ಸುತ್ತು ಪೌಳಿಯಲ್ಲಿ ಮಹಾಗಣಪತಿ ಗುಡಿ ನಿರ್ಮಾಣಗೊಂಡಿದ್ದು ಸುಂದರವಾಗಿ ಕಂಗೋಳಿಸುತ್ತಿದೆ.

ಎರಡು ಅಂತಸ್ತಿನ ರಾಜಗೋಪುರ, ಒಳಾಂಗಣದ ಸುತ್ತುಗೋಪುರಗಳು, ರಾಜಾಂಗಣದಲ್ಲಿ ಶಾಸ್ತಾರ ಗುಡಿ, ಬೆಡಿಕಟ್ಟೆ, ಗುಳಿಗನ ಕಟ್ಟೆ, ನಾಗದೇವರು ಮತ್ತು ನಾಗ ಯಕ್ಷಿಯ ನಾಗನಕಟ್ಟೆಯನ್ನು ಒಳಗೊಂಡತೆ ದೇಗುಲ ಭವ್ಯವಾಗಿ ಪುನರ್ನಿರ್ಮಾಣಗೊಂಡಿದೆ. ನವಗ್ರಹ, ವಿಷ್ಣುವಿನ ದಶಾವತಾರ ಹಾಗೂ ರಾಶಿಗಳನ್ನು ಒಳಗಡೆ ಕೆತ್ತನೆಗಳಲ್ಲಿ ಕಾಣಬಹುದಾಗಿದ್ದು, ಇದು ದೇಗುಲಕ್ಕೆ ವಿಶೇಷ ಮೆರುಗು ನೀಡಿದೆ. ರಾಜಗೋಪುರ ಹಾಗೂ ಸುತ್ತುಪೌಳಿಗೆ ಪಾರಂಪರಿಕ ರೂಪು ನೀಡಲಾಗಿದ್ದು, ಅಕರ್ಷಕವಾಗಿ ಮೂಡಿ ಬಂದಿದೆ.

ಒಳಾಂಗಣ , ಗೋಪುರದ ಅವರಣಕ್ಕೆ ಹಾಗೂ ತೀರ್ಥ ಬಾವಿಗೆ ಗ್ರಾನೈಟ್ ಹಾಸಲಾಗಿದೆ. ಹೊರಾಂಗಣದ ನೈರುತ್ಯ ದಿಕ್ಕಿನಲ್ಲಿ ವಸಂತ ಮಂಟಪ ನಿರ್ಮಿಸಲಾಗಿದೆ. ದಕ್ಷಿಣ ಭಾಗದಲ್ಲಿ ಕಚೇರಿ ಕೊಠಡಿ, ಉತ್ತರದಲ್ಲಿ ಉಗ್ರಾಣ ಕೊಠಡಿ ಅಲ್ಲದೆ ನೈವೇದ್ಯ ಕೊಠಡಿ,ತಂತ್ರಿಗಳ ಕೊಠಡಿ, ಲಾಕರ್ ವ್ಯವಸ್ಥೆಯನ್ನೊಳಗೊಂಡ ಭದ್ರತಾ ಕೊಠಡಿ , ಶೀಟ್ ಅಳವಡಿಸಿದ ಸಭಾಂಗಣ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.

ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಪಶ್ಚಿಮ ಭಾಗದಲ್ಲಿ 1ಕಿಮೀ ದೂರದಲ್ಲಿರುವ ಒಂದು ಎಕ್ರೆಯಷ್ಟು ವಿಶಾಲದ ಪವಿತ್ರ ಮದಕವೇ ( ಸುವರ್ಣ ಕೇದಗೆ ಮೊಟ್ಟೆ ರೂಪದಲ್ಲಿ ವಿಪ್ರರಿಗೆ ಸಿಕ್ಕಿದ ಕೆರೆ) ಈ ಕ್ಷೇತ್ರದ ಮೂಲಸ್ಥಾನ. ಈ ಕೆರೆಯಲ್ಲಿ ಮಹಿಳೆಯರುಮಿಂದು ಒದ್ದೆ ಬಟ್ಟೆಯಲ್ಲಿ ಬಂದು ಮಹಾವಿಷ್ಣುವಿನ ನಡೆಯಲ್ಲಿ ಪ್ರಾರ್ಥಿಸಿದರೆ ಇಷ್ಟಾರ್ಥ ಸಿದ್ದಿಯಾಗುವುದು. ಅದರಲ್ಲೂ ವಿಶೇಷವಾಗಿ ಸಂತಾನವಿಲ್ಲದ್ದ ದಂಪತಿಗಳಿಗೆ ಮಕ್ಕಳಾಗುವುದು ಎಂಬ ನಂಬುಗೆಯಿದೆ . ಈ ಹಿನ್ನಲೆಯಲ್ಲಿ ಕೆರೆಯ ಬಳಿ ಶಿಲಾಮಯ ರಾಜರಾಜೇಶ್ವರಿಯ ಗುಡಿ ನಿರ್ಮಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ದ್ಯಾನ ಮಂದಿರ ಹಾಗೂ ಸುಂದರವಾದ ಕೆರೆ ನಿರ್ಮಿಸಲಾಗುವುದು ಎಂದು ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಭಟ್ ಚಂದುಕೂಡ್ಲು ಅವರು ತಿಳಿಸಿದ್ದಾರೆ.

ಶಾಸ್ತಾರ ದೇವರ ಹೊಸಬಿಂಬ,ನಾಗ ಬಿಂಬಗಳು, ರಾಜರಾಜೇಶ್ವರಿಯ ದರ್ಪನ ಬಿಂಬಗಳನ್ನು ಜಲಾಧಿವಾಸದಲ್ಲಿಡಲಾಗಿದ್ದು, ಮಾ.2ರಂದು ಪ್ರತಿಷ್ಠಾ ಕಾರ್ಯಗಳು ನಡೆಯಲಿದೆ. ಫೆ 25 ರಂದು ಆರಂಭಗೊಳ್ಳಲಿರುವ ಬ್ರಹ್ಮಕಲಶೋತ್ಸವಕ್ಕೆ ರೂ.1 ಕೋಟಿಯಷ್ಟು ಖರ್ಚಾಗಲಿದೆ. ಸಭಾಂಗಣ, ಸಭಾ ವೇದಿಕೆ, ಅನ್ನಸಂತರ್ಪಣೆ ವ್ಯವಸ್ಥೆ, ವಾಹನ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಯಾವುದೇ ಚ್ಯುತಿ ಬಾರದ ರೀತಿಯಲ್ಲಿ ಮಾಡುವ ನಿಟ್ಟಿನಲ್ಲಿ ಸಕಲ ಸಿದ್ಧತೆಗಳು ನಡೆಯುತ್ತಿದೆ. 1ಲಕ್ಷಕ್ಕೂ ಅಧಿಕ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ
ಶ್ರೀನಿವಾಸ ಭಟ್ ಚಂದುಕೂಡ್ಲು