karnataka budget 2023 : ಬೆಂಗಳೂರು : ರಾಜ್ಯ ಅಭಿವೃದ್ಧಿಯ ಮುನ್ನೋಟಕ್ಕೆ ಕನ್ನಡಿ ಹಿಡಿಯುವ ಮಹತ್ವದ ಬಜೆಟ್ ಅನ್ನು ಫೆ. 17ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದರು . ಚುನಾವಣಾ ವರ್ಷದಲ್ಲಿ ಮಂಡಿಸುತ್ತಿರುವ ಈ ಬಜೆಟ್ ನಲ್ಲಿ ರೈತರಿಗೆ ಹಾಗೂ ಮಹಿಳೆಯರಿಗೆ ಹಲವು ಮಹತ್ವದ ಯೋಜನೆಗಳನ್ನು ಘೋಷಿಸಲಾಗಿದೆ.
ರೈತರಿಗೆ ದೊರಕುತ್ತಿದ್ದ ಶೂನ್ಯ ಬಡ್ಡಿ ದರದ ಬೆಳೆ ಸಾಲದ ಗರಿಷ್ಟ ಮಿತಿಯನ್ನು ಈ ಬಜೆಟ್ ನಲ್ಲಿ ಹೆಚ್ಚಿಸಲಾಗಿದೆ. ಇವರೆಗೆ ಇದ್ದ 3 ಲ.ರೂ ಗರಿಷ್ಟ ಮಿತಿಯನ್ನು ರೂ 5 ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದು ಬೊಮ್ಮಾಯಿ ಘೋಷಿಸಿದ್ದು , ಇದನ್ನು ಅಡಳಿತ ಪಕ್ಷದ ಸದಸ್ಯರು ಮೇಜು ಕುಟ್ಟಿ ಸ್ವಾಗತಿಸಿದರು. ಪಿಎಂ ಕಿಸಾನ್ ಯೋಜನೆಯಡಿ ಕೇಂದ್ರ 10,930 ಕೋಟಿ ರೂ. ನೀಡಿದೆ. ಬಿತ್ತನೆಬೀಜ, ರಸಗೊಬ್ಬರ ಇತ್ಯಾದಿಗಳಿಗಾಗಿ 962 ಕೋಟಿ ರೂ. ವ್ಯಯಿಸಲಾಗಿದೆ. ರಾಜ್ಯದ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಬೆಳೆ ಹಾನಿ ಪರಿಹಾರ ಹೆಚ್ಚಿಸಿ ದಾಖಲೆ ಅವಧಿಯಲ್ಲಿ ರೈತರ ಖಾತೆಗಳಿಗೆ ನೇರವಾಗಿ ಪರಿಹಾರ ಜಮೆ ಮಾಡಲಾಗಿದೆ. 14 ಲಕ್ಷಕ್ಕೂ ಹೆಚ್ಚು ರೈತರ ಖಾತೆಗಳಿಗೆ ಪರಿಹಾರದ ಹಣ ವರ್ಗಾಯಿಸಲಾಗಿದೆ.ಎಂದು ಅವರು ಹೇಳಿದರು
ಇದರ ಜತೆಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವ ರೈತರಿಗೆ ಭೂ ಸಿರಿ ಯೋಜನೆಯಡಿ 2023-24 ನೇ ಸಾಲಿನಿಂದ 10 ಸಾವಿರ ರೂಪಾಯಿ ಹೆಚ್ಚುವರಿ ಸಹಾಯಧನ ನೀಡಲಾಗುವುದು ಎಂದು ತಿಳಿಸಿದರು. . ರೈತ ಸಿರಿ ಯೋಜನೆಯಡಿಯಲ್ಲಿ ಕಿರುಧಾನ್ಯ ಬೆಳೆಗಾರರಿಗೆ ಪ್ರತಿ ಹೆಕ್ಟರ್ಗೆ 10 ಸಾವಿರ ರೂಪಾಯಿ ಪ್ರೋತ್ಸಾಹಧನ ಘೋಷಿಸಲಾಗಿದೆ. ಸಹ್ಯಾದ್ರಿ ಯೋಜನೆಯಡಿಯಲ್ಲಿ ಕರಾವಳಿ ಮಲೆನಾಡು ಹಾಗೂ ಅರೆಮಲೆನಾಡು ಪ್ರದೇಶಗಳಲ್ಲಿ ಬೇಸಿಗೆಯಲ್ಲಿ ನೀರು ಸಂರಕ್ಷಣೆಗಾಗಿ ಬಾವಿ, ಕಿಂಡಿ ನಾಳ ಅಭಿವೃದ್ಧಿ ಕಾಮಗಾರಿಗೆ 75 ಕೋಟಿ ರೂ. ಅನುದಾನ ಮೀಸಲು ಇಡಲಾಗಿದೆ.
ಇದಲ್ಲದೆ, ಎಲೆ ಚುಕ್ಕಿ ಹಾಗೂ ಹಳದಿ ರೋಗದಿಂದ ಬಳಲುತ್ತಿರುವ ಅಡಿಕೆ ಬೆಳೆಯ ರೋಗ ನಿರ್ವಹಣೆಗೆ ನೂತನ ತಂತ್ರಜ್ಞಾನ ಅಭಿವೃದ್ಧಿಗೆ 10 ಕೋಟಿ ರೂ ಅನುದಾನ ವನ್ನು ಬಜೆಟ್ ನಲ್ಲಿ ಮೀಸಲಿಡಲಾಗಿದೆ
ರಾಜ್ಯದಲ್ಲಿ ಗೃಹಿಣಿ ಶಕ್ತಿ ಯೋಜನೆ ಜಾರಿಗೆ ತರುವುದಾಗಿ ಬಜೆಟ್ ಭಾಷಣದ ವೇಳೆ ಘೋಷಿಸಿದ ಸಿಎಂ ಗೃಹಿಣಿಯರಿಗೆ ತಿಂಗಳಿಗೆ 500 ರೂಗಳ ಸಹಾಯಧನ ನೀಡುವುದಾಗಿ ತಿಳಿಸಿದ್ದಾರೆ. 350 ಕೋಟಿ ರೂಪಾಯಿ ವೆಚ್ಚದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿನಿಯರಿಗೆ ಬಸ್ ಪಾಸ್ ಉಚಿತ ವಾಗಿ ನೀಡುವುದಾಗಿ ಘೋಷಿಸಿದ್ದಾರೆ.
ಇತರ ಪ್ರಮುಖ ಘೋಷಣೆಗಳು
ಸಹಸ್ರ ಸರೋವರ’ ಯೋಜನೆ ಅಡಿ ರಾಜ್ಯದ 1,000 ಸಣ್ಣ ಸರೋವರಗಳ ಅಭಿವೃದ್ದಿ
‘ಸಹ್ಯಾದ್ರಿ ಸಿರಿ’ ಯೋಜನೆ ಅಡಿ ಕರಾವಳಿ, ಮಲೆನಾಡು ಹಾಗೂ ಅರೆ ಮಲೆನಾಡಿನಲ್ಲಿ ಬೇಸಿಗೆಯಲ್ಲಿ ನೀರು ಸಂರಕ್ಷಣೆಗೆ ಯೋಜನೆ
ತೋಟಗಾರಿಕೆ ಉತ್ಪಾದಕತೆ ಹೆಚ್ಚಿಸಲು ‘ಒಂದು ತೋಟ ಒಂದು ಬೆಳೆ’ ಯೋಜನೆಗೆ 10 ಕೋಟಿ ರೂ.
ಆಳ ಸಮುದ್ರ ಮೀನುಗಾರಿಕೆ ಉತ್ತೇಜನಕ್ಕೆ ‘ಮತ್ಸ್ಯ ಸಿರಿ’ ಯೋಜನೆ
‘ಮುಖ್ಯಮಂತ್ರಿ ವಿದ್ಯಾ ಶಕ್ತಿ’ ಯೋಜನೆಯಡಿ ಪದವಿವರೆಗೂ ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ಶಿಕ್ಷಣ