ಯಕ್ಷ ರಂಗದ ಭೀಷ್ಮ, ಭಾಗವತಿಕೆಯಲ್ಲಿ ತನ್ನದೇ ಮೇರು ಶೈಲಿಯಾದ ‘ಬಲಿಪ ಹಾಡುಗಾರಿಕೆ’ಯನ್ನು ಆರು ದಶಕಗಳಿಂದ ಉಣ ಬಡಿಸಿದ ಯಕ್ಷಗಾನದ ಸರ್ವಶ್ರೇಷ್ಟ ಭಾಗವತರಲ್ಲಿ ಒಬ್ಬರಾದ ಬಲಿಪ ನಾರಾಯಣ ಭಾಗವತರು ( 84) ಇಂದು ಇಹಲೋಕ ತ್ಯಜಿಸಿದ್ದಾರೆ. ಈ ಮೂಲಕ ಯಕ್ಷ ಪ್ರಿಯರನ್ನು ತನ್ನ ಭಾಗವತಿಕೆಯ ಮೂಲಕ ಸೆಳೆಯುತ್ತಿದ್ದ ಕಂಚಿನ ಕಂಠ ಮೌನವಾಗಿದೆ. ಭಾಗವತಿಕೆಯ ರಂಗದಲ್ಲಿ ಅಗ್ರಜರೆನಿಸಿದ ಬಲಿಪ ನಾರಾಯಣ ಭಾಗವತರು ಬಲಿಪ ಪರಂಪರೆಯ ಕೊಂಡಿ. ತನ್ನ ಕೊನೆಯ ದಿನಗಳಲ್ಲಿ ಅವರು ಮೂಡುಬಿದಿರೆ ನೂಯಿಯಲ್ಲಿ ವಾಸಿಸುತ್ತಿದ್ದರು.
ತೆಂಕುತಿಟ್ಟು ಯಕ್ಷಗಾನದ ಪ್ರಾತಿನಿಧಿಕ ಶೈಲಿಯ ಮೇರು ಭಾಗವತರಾದ ಬಲಿಪ ಭಾಗವತರ ಅಜ್ಜನ ಹೆಸರು ಕೂಡಾ ಬಲಿಪ ನಾರಾಯಣ ಭಾಗವತರೆಂದೇ. ಅವರು ಸ್ವಾತಂತ್ರ್ಯ ಪೂರ್ವದಲ್ಲೇ ಯಕ್ಷಗಾನದ ತಾರಾ ವರ್ಚಸ್ಸಿನ ಸುವಿಖ್ಯಾತ ಭಾಗವತರು. ರಂಗದ ಒಳ ಹೊರಗಿನ ವ್ಯವಹಾರ ಮತ್ತು ಜನ್ಮದಾತ ಸಿದ್ಧಿಯಿಂದ ಅಕ್ಷರಶಃ ‘ಹುಲಿ’ಯಂತೆ ಮೆರೆದು ಆ ಕಾಲದ ಕೀರ್ತಿ ಪಡೆದವರು.
ಅಂತಹಾ ಅಜ್ಜನ ಹಿನ್ನೆಲೆಯಲ್ಲಿ ಅದೇ ಶೈಲಿಯನ್ನು ಅನುಸರಿಸಿ, ಕೈದಾಟಿಸಿದ ಈಗಿನ ಬಲಿಪ ನಾರಾಯಣ ಭಾಗವತರು ಸುಮಾರು 63ವರ್ಷಗಳಷ್ಟು ಕಾಲ ಸಕ್ರಿಯವಾಗಿ ಹಾಡಿ ಯಕ್ಷರಾತ್ರಿಗಳನ್ನು ಬೆಳಗಿಸಿದವರು.ಅನೇಕ ಕಲಾವಿದರನ್ನು ರೂಪಿಸಿದ್ದಾರೆ. ಸುಮಾರು 70ರಷ್ಟು ಪ್ರಸಂಗಕಾವ್ಯಗಳು ಮತ್ತದರ ಪ್ರಸ್ತುತಿಯ ರಂಗನಡೆ-ಮಾಹಿತಿ ಅವರಿಗೆ ಕಂಠಸ್ಥ.
“ನೋಡಿ ನಿರ್ಮಲ ಜಲ ಸಮೀಪದಿ…”, “ಜಗವು ನಿನ್ನಾಧೀನ ಖಗಪತಿ ವಾಹನ…”, “ರಾಮಕೃಷ್ಣರು ಮನೆಗೆ ಬಂದರು ಬಾಗಿಲು ತೆರೆಯಿರೊ”, “ಎಲವೋ ಕುಂತೀ ಸುತನೇ” ಎಂಬಿತ್ಯಾದಿ ವಿವಿಧ ಸ್ವರ ಏರಿಳಿತದ ಸಮ್ಮಿಲನ-ಸಮತೋಲನ ಹೊಂದಿದ್ದ ‘ಬಲಿಪ’ ಶೈಲಿಗೆ ಅದರದ್ದೇ ಆದ ತೂಕ-ಸ್ಥರ…
ಬಲಿಪ ನಾರಾಯಣ ಭಾಗವತರು ಮೂಲತಃ ಕಾಸರಗೋಡು ಜಿಲ್ಲೆಯ ಪಡ್ರೆ ಗ್ರಾಮದವರು. ಇವರು ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಸಮೀಪದ ನೂಯಿ ಎಂಬಲ್ಲಿ ವಾಸವಾಗಿದ್ದಾರೆ. ಇವರು ತೆಂಕುತಿಟ್ಟಿನ ಪ್ರಸಿದ್ಧ ಮತ್ತು ಹಿರಿಯ ಭಾಗವತರು. ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಮೇಳದಲ್ಲಿ ಹಲವಾರು ವರ್ಷ ಭಾಗವತರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಯಕ್ಷಗಾನದ ಹಲವಾರು ಪ್ರಸಂಗಗಳನ್ನು ರಚಿಸಿದ್ದಾರೆ. ಯಕ್ಷಗಾನ ಹಾಡುಗಳ ಅನೇಕ ಕೃತಿಗಳನ್ನೂ ರಚಿಸಿದ್ದಾರೆ
ವೈಯಕ್ತಿಕ ಜೀವನ
ಬಲಿಪರು ಕಾಸರಗೋಡಿನ ಪಡ್ರೆ ಗ್ರಾಮದಲ್ಲಿ ಮಾರ್ಚ್ 13, 1938 ರಂದು ಜನಿಸಿದರು. ಇವರ ತಂದೆ ಬಲಿಪ ಮಾಧವ ಭಟ್ ಮತ್ತು ತಾಯಿ ಸರಸ್ವತಿ. ಇವರು 7ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ. ತಮ್ಮ ಅಜ್ಜ ದಿ.ಬಲಿಪ ನಾರಾಯಣ ಭಾಗವತರಿಂದ ಭಾಗವತಿಕೆ ಕಲಿತು 13ನೇ ವರ್ಷದಲ್ಲಿ ರಂಗ ಪ್ರವೇಶಗೈದರು. ಇವರ ಪತ್ನಿ ಶ್ರೀಮತಿ ಜಯಲಕ್ಷ್ಮಿ. ಇವರ ನಾಲ್ವರು ಪುತ್ರರ ಪೈಕಿ, ಮಾಧವ ಬಲಿಪರಿಗೆ ಹಿಮ್ಮೇಳವಾದನ ತಿಳಿದಿದ್ದು, ಶಿವಶಂಕರ ಬಲಿಪ ಮತ್ತು ಪ್ರಸಾದ ಬಲಿಪರು ಉತ್ತಮ ಭಾಗವತರು, ಪ್ರಸಾದ ಬಲಿಪರು ಕಟೀಲು ಮೇಳದಲ್ಲಿ ಮುಖ್ಯ ಭಾಗವತರಾಗಿ ಸೇವೆ ಸಲ್ಲಿಸುತ್ತಿದ್ದು ಕಳೆದ ವರ್ಷ ನಿಧನ ಹೊಂದಿದ್ದರು. ಇನ್ನೋರ್ವ ಪುತ್ರ ಶಶಿಧರ್ ಬಲಿಪ ಕೃಷಿಕರು.
ಯಕ್ಷಗಾನ ಕ್ಷೇತ್ರಕ್ಕೆ ಕೊಡುಗೆ
ಬಲಿಪ ನಾರಾಯಣ ಭಾಗವತರು 60 ವರ್ಷಗಳ ಕಾಲ ಯಕ್ಷಗಾನ ಕಲಾ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪಡ್ರೆ ಜಠಾಧಾರಿ ಮೇಳವನ್ನು ಇವರು ಮೊದಲಿಗೆ ಆರಂಭಿಸಿದರು. ಯಕ್ಷಗಾನದ 50ಕ್ಕೂ ಹೆಚ್ಚು ಪ್ರಸಂಗಗಳ ಕಂಠಪಾಠ ಬಲಿಪರಿಗಿದೆ. 30 ಪ್ರಕಟಿತ ಮತ್ತು 15 ಅಪ್ರಕಟಿತ ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದಾರೆ. ಕಪ್ಪು ಮೂರು, ಬಿಳಿ ಐದರ ಸ್ವರದಲ್ಲಿ ಬಲಿಪರು ಹಾಡುತ್ತಾರೆ. ಇವರನ್ನು ತೆಂಕು ತಿಟ್ಟು ಯಕ್ಷ ರಂಗದ ಭೀಷ್ಮ ಎಂದು ಕರೆಯುತ್ತಾರೆ. ಇವರ ಯಕ್ಷಗಾನದ ಸುದೀರ್ಘ ಸೇವೆಗಾಗಿ ಯಕ್ಷಾಭಿಮಾನಿಗಳು ಬಲಿಪ ಅಮೃತ ಭವನವನ್ನು ಕಟ್ಟಿಸಿಕೊಟ್ಟಿದ್ದಾರೆ.ಬಲಿಪ ನಾರಾಯಣ ಭಾಗವತರು ಐದು ದಿನದ ದೇವೀ ಮಹಾತ್ಮೆ ಎಂಬ ಮಹಾಪ್ರಸಂಗವನ್ನು ರಚಿಸಿದ್ದು ವೇಣೂರಿನ ಕಜೆ ಸುಬ್ರಹ್ಮಣ್ಯ ಭಟ್ ಮತ್ತು ಅವರ ಸ್ನೇಹಿತರು ಇದನ್ನು ಪ್ರಕಟಿಸಿದ್ದು ಯಕ್ಷಗಾನದ ಇತಿಹಾಸದಲ್ಲೇ ಇದೊಂದು ಮಹತ್ವದ ಕೃತಿಯಾಗಿದೆ.
ಪ್ರಶಸ್ತಿಗಳು
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ 2010
ಸಾಮಗ ಪ್ರಶಸ್ತಿ 2012
ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ `ಜ್ಞಾನ ಪ್ರಶಸ್ತಿ’ 2003
ಕರ್ನಾಟಕ ಜಾನಪದ ಪರಿಷತ್ತು ದೊಡ್ಡಮನೆ ಲಿಂಗೇಗೌಡ ಪ್ರಶಸ್ತಿ 2002
71ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ `ಕರ್ನಾಟಕ ಶ್ರೀ ‘ಪ್ರಶಸ್ತಿ, 2003
ಪದವೀಧರ ಯಕ್ಷಗಾನ ಮಂಡಳಿ ಮುಂಬಯಿ `ಅಗರಿ ಪ್ರಶಸ್ತಿ’ 2002
ಶೇಣಿ ಪ್ರಶಸ್ತಿ, 2002
ಕವಿ ಮುದ್ದಣ ಪುರಸ್ಕಾರ, 2003
ಕೂಡ್ಲು ಸುಬ್ರಾಯ ಶ್ಯಾನುಭೋಗ ಪ್ರಶಸ್ತಿ, 2003
ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ವತಿಯಿಂದ ಬೆಂಗಳೂರಿನ ರಾಜ್ಯಮಟ್ಟದ ಸನ್ಮಾನ,2003
ಕರ್ನಾಟಕ ಸಂಘ ದುಬೈಯಲ್ಲಿ ಸನ್ಮಾನ, 2003
ಪಾರ್ತಿಸುಬ್ಬ ಪ್ರಶಸ್ತಿ
ಆಳ್ವಾಸ್ ನುಡಿಸಿರಿ ಪ್ರಶಸ್ತಿ