ಪುತ್ತೂರು: ಪುತ್ತೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಬೂತ್ ಅಧ್ಯಕ್ಷರ ಹಾಗೂ ಬಿಎಲ್ಎಗಳ ತರಬೇತಿ ಸಮಾರಂಭವು ಮತ್ತೊಮ್ಮೆಪುತ್ತೂರು ಕಾಂಗ್ರೆಸ್ ನ ಒಗ್ಗಟ್ಟಿನ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿತ್ತು. ಕಳೆದ ವಿಧಾನ ಸಭಾ ಚುನಾವಣೆಗೂ ತುಸು ಮುಂಚೆ ಪಕ್ಷದಲ್ಲಿನ ಭಿನಮತ ಬಹಿರಂಗಗೊಂಡು ಪಕ್ಷ ಹಿನ್ನಡೆ ಅನುಭವಿಸಿತ್ತು. ಈ ಬಾರಿಯೂ 14 ಆಕಾಂಕ್ಷಿಗಳು ಟಿಕೆಟ್ ಗಾಗಿ ರೂ. 2 ಲಕ್ಷ ಪಾವತಿಸಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಮತ್ತೆ ಈ ಬಾರಿಯೂ ಪಕ್ಷದಲ್ಲಿ ಭಿನ್ನಮತ ತಾರಕಕ್ಕೆರಬಹುದು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದರು.
ಆದರೇ ರಾಜಕೀಯ ಪಂಡಿತರ ಅನುಮಾನಗಳು ತಲೆ ಕೆಳಗಾಗುವಂತೆ ಕಳೆದೆರಡು ವಾರಗಳಿಂದ ಪುತ್ತೂರು ಕಾಂಗ್ರೆಸ್ ನಲ್ಲಿ ಒಗ್ಗಟ್ಟಿನ ವಾತಾವರಣ ಸೃಷ್ಟಿಯಾಗಿದೆ. ಫೆ.14ರಂದು ಆಯೋಜಿಸಲಾಗಿದ್ದ ಕಾಂಗ್ರೆಸ್ ಬೂತ್ ಅಧ್ಯಕ್ಷರ ಹಾಗೂ ಬಿಎಲ್ಎಗಳ ತರಬೇತಿ ಕಾರ್ಯಗಾರಕ್ಕೆ ಪೂರ್ವಭಾವಿಯಾಗಿ ನಡೆದ ಬೂತ್ ಭೇಟಿಯ ವೇಳೆಯೂ ಬಹುತೇಕ ಟಿಕೆಟ್ ಆಕಾಂಕ್ಷಿಗಳು ಜತೆ ಜತೆಯಾಗಿಯೇ ಪ್ರವಾಸ ಕೈಗೊಂಡಿದ್ದರು . ಇದಾದ ಬಳಿಕ ಫೆ.14ರಂದು ನಡೆದ ತರಭೇತಿ ಕಾರ್ಯಗಾರದಲ್ಲೂ 14 ಟಿಕೆಟ್ ಆಕಾಂಕ್ಷಿಗಳ ಪೈಕಿ 12 ಆಕಾಂಕ್ಷಿಗಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ಇನ್ನಿಬ್ಬರು ಆಕಾಂಕ್ಷಿಗಳು ವೈಯುಕ್ತಿಕ ಕಾರಣಗಳಿಂದ ಸಭೆಗೆ ಬರಲು ಅನಾನುಕೂಲತೆ ಉಂಟಾದ ಹಿನ್ನಲೆಯಲ್ಲಿ ಕಾರ್ಯಗಾರಕ್ಕೆ ಗೈರು ಹಾಜರಾಗಿದ್ದಾರೆ.
ಅದರಲ್ಲೂ ರಾಜಕೀಯವಾಗಿ ಹಾವು – ಮುಂಗುಸಿಯಂತಾಡುತ್ತಿದ್ದ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಹಾಗೂ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿಯವರು ಕಾರ್ಯಾಗಾರದ ಉದ್ಘಾಟನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು . ಜತೆಗೆ ಪುತ್ತೂರು ಕೈ ಟಿಕೆಟಿನ ಪ್ರಭಲ ಆಕಾಂಕ್ಷಿಗಳಾದ ಇತ್ತೀಚೆಗಷ್ಟೆ ಪಕ್ಷಕ್ಕೆ ಸೇರ್ಪಡೆಗೊಂಡ ಉದ್ಯಮಿ ಅಶೋಕ್ ಕುಮಾರ್ರೈ ಕೋಡಿಂಬಾಡಿ, ರಾಜ್ಯಸಮಾಜ ಕಲ್ಯಾಣ ಮಂಡಳಿಯ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ ಕೂಡ ಕಾರ್ಯಾಗಾರದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಸ್ವತ: ಟಿಕೆಟ್ ಆಕಾಂಕ್ಷಿಗಳಾಗಿರುವ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ಬಿ. ವಿಶ್ವನಾಥ ರೈ , ಉಪ್ಪಿನಂಗಡಿ – ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಾ.ರಾಜಾರಾಮ್ ಕೆ.ಬಿ. ಎಲ್ಲ ಆಕಾಂಕ್ಷಿಗಳನ್ನು ಒಂದೇ ವೇದಿಕೆಯಲ್ಲಿ ತರಲು ಶ್ರಮಿಸಿರುವುದು ವಿಶೇಷವಾಗಿದೆ. ಇವರೆಲ್ಲರೂ ಜತೆಯಾಗಿ ಕಾಣಿಸಿಕೊಂಡು ‘ನಮ್ಮಲ್ಲಿ ಯಾವುದೇ ಬಣವಿಲ್ಲ ನಾವೆಲ್ಲರೂ ಕಾಂಗ್ರೆಸ್’ ಎಂದು ಬಿಂಬಿಸುವ ಪ್ರಯತ್ನ ನಡೆಸಿಸಿದ್ದಾರೆ.

ತರಬೇತಿ ಕಾರ್ಯಗಾರವನ್ನು ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಕಾಂಗ್ರೆಸ್ ವಕ್ತಾರ ಎಂ.ಜಿ.ಹೆಗ್ಡೆ, ಕೊಪ್ಪಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಜ್ಯ ಮಟ್ಟದ ತರಬೇತುದಾರ ಸುಧೀರ್ ಕುಮಾರ್ ಮರೋಳಿ ಹಾಗೂ ಮುಹಮ್ಮದ್ ಬಡಗನ್ನೂರುರವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು.

ಎಂ.ಜಿ.ಹೆಗ್ಡೆಯವರು ಕಾಂಗ್ರೆಸ್ ಕಾರ್ಯಕರ್ತರು ಸೈದ್ದಾಂತಿಕಾವಗಿ ಯಾವ ರೀತಿ ಬಿಜೆಪಿಯನ್ನು ಎದುರಿಸಬೇಕು ಎನ್ನುವ ಬಗ್ಗೆ ಬೂತ್ ಅಧ್ಯಕ್ಷರು ಹಾಗೂ ಬಿಎಲ್ ಎ ಗಳಿಗೆ ಮಾಹಿತಿ ನೀಡಿದ್ದರು. ಕಾಂಗ್ರೆಸ್ ಸೋಲಿಗೆ ಬಿಜೆಪಿಯ ಹಿಂದುತ್ವ ಮಾತ್ರ ಕಾರಣವಲ್ಲ..ಪಕ್ಷದಲ್ಲಿ ಕಾರ್ಯಕರ್ತರು, ಮುಖ೦ಡರು ಇದ್ದರೂ ಜನರೊಂದಿಗೆ ನಿರಂತರ ಸಂಪರ್ಕ ಸಾಧಿಸದಿರುವುದು , ಬಿಜೆಪಿಯ ಅಪಪ್ರಚಾರ ಹಾಗೂ ಆರೋಪಗಳಿಗೆ ಸಮರ್ಪಕ ಉತ್ತರ ನೀಡದಿರುವುದು ಸೋಲಿಗೆ ಪ್ರಮುಖ ಕಾರಣ ಎಂದರು. ಕೊಪ್ಪಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಜ್ಯ ಮಟ್ಟದ ತರಬೇತುದಾರ ಸುಧೀರ್ ಕುಮಾರ್ ಮರೋಳಿ ಹಾಗೂ ಮುಹಮ್ಮದ್ ಬಡಗನ್ನೂರುರವರು ಪಕ್ಷ ಸಂಘಟನೆ, ಬಲಪಡಿಸುವ ಬಗ್ಗೆ ಮಾಹಿತಿ ನೀಡಿದರು.

ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ, ರಾಜ್ಯಸಮಾಜ ಕಲ್ಯಾಣ ಮಂಡಳಿಯ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ, ಉದ್ಯಮಿ ಅಶೋಕ್ ಕುಮಾರ್ ರೈ ಕೋಡಿಂಬಾಡಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುರಳೀಧರ ರೈ ಮಠಂತಬೆಟ್ಟು, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷೆ ಕೃಪಾ ಅಮರ್ ಆಳ್ವ, ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ಭಟ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷಕಾವು ಹೇಮನಾಥ ಶೆಟ್ಟಿ, ಜಿ.ಪಂ.ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಅಲಿ, ಪುತ್ತೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಫಾರೂಕ್ ಪೆರ್ನೆ, ಮಹಿಳಾ ಘಟಕ ರಾಜ್ಯ ನಾಯಕಿ ಶಾಹಿರಾ ಝುಬೈರ್, ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಶಾರದಾ ಅರಸ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ವಿ.ಎಚ್.ಎ ಶಕೂರ್ ಹಾಜಿ, ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪುತ್ತೂರು ಹಾಗೂ ವಿಟ್ಲ-ಉಪ್ಪಿನಂಗಡಿ ಬ್ಲಾಕ್‌ನ ಘಟಕಗಳ ವಿವಿಧ ಪದಾಧಿಕಾರಿಗಳು, ವಿವಿಧ ಬೂತ್ ಅಧ್ಯಕ್ಷರು, ಬಿ.ಎಲ್.ಎಗಳು ತರಬೇತಿಯಲ್ಲಿ ಭಾಗವಹಿಸಿದ್ದರು. ಕಾಂಗ್ರೆಸ್ ಸೇವಾ ದಳದ ಜಿಲ್ಲಾಧ್ಯಕ್ಷ ಜೋಕಿಂ ಡಿ’ಸೋಜ ಹಾಗೂ ನಗರ ಸಭಾಸದಸ್ಯ ರಿಯಾಝ್ ವಂದೇ ಮಾತರಂ ಹಾಡಿದರು.ವಿ ಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ. ಸ್ವಾಗತಿಸಿದರು.ಜಿಲ್ಲಾ ಕಾಂಗ್ರೆಸ್ ವಕ್ತಾರ ಮಹಮ್ಮದ್ ಬಡಗನ್ನೂರು ಕಾರ್ಯಕ್ರಮ ನಿರೂಪಿಸಿದರು.