ಭೂಗತ ಪಾತಕಿಗಳ ಕೃತ್ಯ …! ಮಾಜಿ ಸ್ನೇಹಿತನಿಂದಲೇ ಸುಪಾರಿ ?
ಉಡುಪಿ: ಕಾಪು ತಾಲ್ಲೂಕಿನ ಪಾಂಗಳದ ಹೆದ್ದಾರಿ ಬಳಿ ಈಚೆಗೆ ನಡೆದ ಶರತ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಯಲ್ಲಿ ಭೂಗತ ಪಾತಕಿಗಳ ಕೈವಾಡವಿರುವುದು ತನಿಖೆಯಲ್ಲಿ ದೃಢಪಟ್ಟಿದೆ.
ಸುರತ್ಕಲ್ ಕುಳಾಯಿ ನಿವಾಸಿಗಳಾದ 20ವರ್ಷದ ದಿವೇಶ್ ಶೆಟ್ಟಿ ಮತ್ತು 21ವರ್ಷದ ಲಿಖಿತ್ ಕುಲಾಲ್, ಮಂಗಳೂರು ನಿವಾಸಿ 24ವರ್ಷದ ಆಕಾಶ್ ಕರ್ಕೇರ ಹಾಗೂ ಪಾಂಗಳ ನಿವಾಸಿ 40ವರ್ಷದ ಪ್ರಸನ್ನ ಶೆಟ್ಟಿ ಬಂಧಿತ ಆರೋಪಿಗಳು.
ದಿವೇಶ್ ಮತ್ತು ಲಿಖಿತ್ ನನ್ನು ಫೆ 14 ರಂದು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಒಂದು ವಾರಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಆಕಾಶ್ ಮತ್ತು ಪ್ರಸನ್ನ ಶೆಟ್ಟಿಯನ್ನು ಇಂದು ( ಫೆ 15 ರಂದು) ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಮಚ್ಚೀಂದ್ರ ಹಾಕೆ ತಿಳಿಸಿದರು.
ಕಟಪಾಡಿ ನಿವಾಸಿ ಯೋಗೀಶ್ ಆಚಾರ್ಯ, ನಾಗರಾಜ್, ಭೂಗತ ಪಾತಕಿ ಕಲಿ ಯೋಗೀಶ್ ಮತ್ತು ಕೃತ್ಯಕ್ಕೆ ಸಹಕರಿಸಿದ ಮುಕೇಶ್ ಹಾಗೂ ಇತರ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ ಎಂದರು.
ಇಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ 1 ವಾರ ಪೊಲೀಸ್ ವಶಕ್ಕೆ ಪಡೆಯಲಾಗಿದೆ. ಇಬ್ಬರನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ. ಯೋಗೀಶ್ ಆಚಾರ್ಯ, ನಾಗರಾಜ್ ಸೇರಿದಂತೆ ಹಲವರು ಕೃತ್ಯದಲ್ಲಿ ಭಾಗಿಯಾಗಿದ್ದು ಪ್ರಮುಖ ಆರೋಪಿಯ ಬಂಧನಕ್ಕೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಹೊರ ಜಿಲ್ಲೆಗಳಲ್ಲಿ ಬಂಧನ:
ಕೊಲೆಯಾದ ಸ್ಥಳದಲ್ಲಿ ಪತ್ತೆಯಾಗಿದ್ದ ಮೊಬೈಲ್, ಸ್ಕೂಟಿ ಹಾಗೂ ಇತರ ಸಾಕ್ಷ್ಯಗಳನ್ನು ಆಧಾರವಾಗಿಟ್ಟುಕೊಂಡು ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಯ ನೆರವಿನಿಂದ ಮಂಗಳೂರು ಹಾಗೂ ಹೊರ ಜಿಲ್ಲೆಗಳಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್‌ಪಿಯವರು ಮಂಗಳವಾರ ಮಾಹಿತಿ ನೀಡಿದರು.
ಶರತ್ ಶೆಟ್ಟಿ ಕೊಲೆಗೆ ಕಾರಣ:
ಕೊಲೆಯಾದ ಶರತ್ ಶೆಟ್ಟಿ ಹಾಗೂ ಕೊಲೆ ಮಾಡಿದ ಪ್ರಮುಖ ಆರೋಪಿ ಯೋಗೀಶ್ ಆಚಾರ್ಯ ಮಧ್ಯೆ ವೃತ್ತಿ ವೈಷಮ್ಯ ಬೆಳೆದಿತ್ತು. ಒಬ್ಬರ ಏಳ್ಗೆಯನ್ನು ಮತ್ತೊಬ್ಬರು ಸಹಿಸುತ್ತಿರಲಿಲ್ಲ. ಡಿಸೆಂಬರ್‌ನಲ್ಲಿ ಕಾಪುವಿನ ರಿಯಲ್ ಎಸ್ಟೇಟ್ ಕಚೇರಿಯಲ್ಲಿ ನಡೆದ ಗಲಾಟೆ ಶರತ್ ಶೆಟ್ಟಿ ಕೊಲೆಗೆ ಕಾರಣ ಎಂಬುದು ಮೇಲ್ನೋಟಕ್ಕೆ ತಿಳಿದು ಬಂದಿದೆ ಎಂದು ಎಸ್‌ಪಿ ತಿಳಿಸಿದರು.
ಮೂಲಗಳ ಪ್ರಕಾರ “ಕಳೆದ ಡಿಸೆಂಬರ್ ನಲ್ಲಿ ಶರತ್ ಶೆಟ್ಟಿ ಹಾಗೂ ಯೋಗೀಶ್ ಆಚಾರ್ಯ ಜಾಗವೊಂದರ ತಕರಾರಿಗೆ ಸಂಬಂಧಿಸಿದ ಮಾತುಕತೆಗೆ ಹೋಗಿದ್ದರು. ಈ ವೇಳೆ ಅಲ್ಲಿ ಗಲಾಟೆ ನಡೆದಿದ್ದು, ಯೋಗೀಶ್ ಮೇಲೆ ಕೆಲವು ವ್ಯಕ್ತಿಗಳು ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಆದರೆ ಈ ವೇಳೆ ಶರತ್ ಶೆಟ್ಟಿ, ಯೋಗೀಶ್ ಸಹಾಯಕ್ಕೆ ಬಾರದೆ ಅಲ್ಲಿಂದ ಪರಾರಿಯಾಗಿದ್ದ. ಅದರೇ ಹಲ್ಲೆಗೊಳಗಾದ ಯೋಗೀಶ್ ಆಚಾರ್ಯ ವಿರುದ್ಧವೇ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಹೇಳಲಾಗಿತ್ತು. ಇದೇ ವಿಚಾರವಾಗಿ ಉಂಟಾದ ಮನಸ್ತಾಪ ಕೊಲೆಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.
ಕೊಲೆಯಲ್ಲಿ ಐದಾರು ಮಂದಿ ನೇರವಾಗಿ ಭಾಗಿಯಾಗಿದ್ದರೆ ಹಲವರು ಪರೋಕ್ಷವಾಗಿ ಸಹಕಾರ ನೀಡಿದ್ದಾರೆ. ಶರತ್ ಶೆಟ್ಟಿ ಕೊಲೆ ಪೂರ್ವ ನಿಯೋಜಿತವಾಗಿದ್ದು ಆರೋಪಿಗಳು ಒಂದೂವರೆ ತಿಂಗಳಿನಿಂದಲೂ ಕೊಲೆಗೆ ಸ್ಕೆಚ್ ಹಾಕಿದ್ದರು. ಕೊಲೆ ಮಾಡಲು ಹೊರ ಜಿಲ್ಲೆಗಳಿಂದ ಹಂತಕರನ್ನು ಕರೆಸಿಕೊಂಡು ವಾಹನ, ಹಣ, ಶಸ್ತ್ರಾಸ್ತ್ರ ವ್ಯವಸ್ಥೆ ಮಾಡಲಾಗಿತ್ತು. ಭೂಗತ ಪಾತಕಿಗಳು ಕೊಲೆಯಲ್ಲಿ ನೇರವಾಗಿ ಭಾಗಿಯಾಗಿರುವುದು ತನಿಖೆಯಲ್ಲಿ ತಿಳಿದು ಬಂದಿದೆ.
ತನಿಖಾ ತಂಡ:
ಕಾರ್ಕಳ ಡಿವೈಎಸ್‌ಪಿ ನೇತೃತ್ವದಲ್ಲಿ ಕಾಪು, ಹೆಬ್ರಿ, ಕಾರ್ಕಳ, ಕಾಪು, ಶಿರ್ವ ಠಾಣೆ ಪಿಎಸ್‌ಐಗಳನ್ನೊಳಗೊಂಡ ತಂಡವನ್ನು ತನಿಖೆಗೆ ನಿಯೋಜಿಸಲಾಗಿತ್ತು.
‘ಎರಡು ಬಾರಿ ವಿಫಲ ಯತ್ನ’
ಶರತ್ ಶೆಟ್ಟಿ ಕೊಲೆಗೆ ಎರಡು ಬಾರಿ ವಿಫಲ ಯತ್ನಗಳು ನಡೆದಿವೆ. ಅಂತಿಮವಾಗಿ ಜ.5ರಂದು ಪಾಂಗಳದಲ್ಲಿ ನಡೆಯಬೇಕಿದ್ದ ದೈವ ಕೋಲಕ್ಕೆ ಶರತ್ ಶೆಟ್ಟಿ ಖಚಿತವಾಗಿ ಬರುವ ಮಾಹಿತಿ ಕಲೆಹಾಕಿದ ಆರೋಪಿಗಳು ಹೆದ್ದಾರಿ ಬಳಿ ಹೊಂಚು ಹಾಕಿ ಲಾಂಗ್, ಚೂರಿಯಿಂದ ಹಲ್ಲೆ ನಡೆಸಿ ಕೊಂದಿದ್ದಾರೆ. ಸ್ಥಳೀಯರು ಕೂಡ ಕೊಲೆಯಲ್ಲಿ ಭಾಗಿಯಾಗಿದ್ದಾರೆ. ಬಂಧಿತರಲ್ಲಿ ಹೆಚ್ಚಿನವರು 20 ರಿಂದ 25 ವರ್ಷದ ಯುವಕರು.
ಕೊಲೆಯ ಹಿಂದೆ ಭೂಗತ ಲೋಕ
ಶರತ್ ಶೆಟ್ಟಿ ಕೊಲೆಯ ಹಿಂದೆ ಭೂಗತ ಲೋಕದ ಕೈವಾಡವಿರುವುದು ತನಿಖೆಯಲ್ಲಿ ದೃಢಪಟ್ಟಿದೆ. ಅಜ್ಞಾತ ಸ್ಥಳದಲ್ಲಿ ಕುಳಿತು ಇಂಟರ್‌ನೆಟ್ ಕರೆ ಮಾಡಿ ಸ್ಥಳೀಯರನ್ನು ಕೊಲೆಗೆ ಬಳಸಿಕೊಳ್ಳಲಾಗಿದೆ. ಕೊಲೆಗೆ ಹಣಕಾಸು ನೆರವು ನೀಡಿದ, ವಾಹನ, ಶಸ್ತ್ರಾಸ್ತ್ರ ಪೂರೈಕೆ ಮಾಡಿದವನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೂಲಗಳ ಪ್ರಕಾರ ಯೋಗಿಶ್ ಆಚಾರ್ಯ ಭೂಗತ ಪಾತಕಿ ಕಲಿ ಯೋಗೀಶನಿಗೆ ಸುಫಾರಿ ನೀಡಿ ಈ ಕೊಲೆ ನಡೆಸಿದ್ದಾನೆಂದು ಹೇಳಲಾಗುತ್ತಿದೆ.
ಹತ್ಯೆ:
ಪಾಂಗಾಳ ಪರಿಸರದಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಸದಾ ಕ್ರಿಯಾಶೀಲನಾಗಿರುತ್ತಿದ್ದ ಶರತ್ ಶೆಟ್ಟಿ ರವಿವಾರ ಪಾಂಗಾಳ ಪಡು³ವಿನ ಬಬ್ಬುಸ್ವಾಮಿ ದೈವಸ್ಥಾನ ದಲ್ಲಿ ನಡೆಯುತ್ತಿದ್ದ ನೇಮದಲ್ಲಿ ಪಾಲ್ಗೊಂಡಿದ್ದು, ಆ ವೇಳೆ ಮಾತುಕತೆ ಗೆಂದು ಕರೆದ ದುಷ್ಕರ್ಮಿಗಳು ಬಳಿಕ ಮಾರಕಾಸ್ತ್ರದಿಂದ ಇರಿದು ಕೊಲೆಗೈದು ಪರಾರಿಯಾಗಿದ್ದರು.
ಕುಟುಂಬಸ್ಥರಿಂದ ದೈವಕ್ಕೆ ಮೊರೆ
ಮೃತ ಶರತ್ ಶೆಟ್ಟಿ ಅವರ ಕುಟುಂಬಿಕರ ಮನೆಯಲ್ಲಿ ಶುಕ್ರವಾರ ರಾತ್ರಿ ಶ್ರೀ ಧೂಮಾವತಿ ಮತ್ತು ಪರಿವಾರ ದೈವಗಳ ನೇಮ ನಡೆದಿತ್ತು. ಅಲ್ಲಿ ಶರತ್ ಹತ್ಯೆಯಾಗಿ ಎರಡು ವಾರ ಕಳೆದರೂ ದುಷ್ಕರ್ಮಿಗಳು ಪತ್ತೆಯಾಗದ ಹಿನ್ನಲೆಯಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ನಡೆಸುತ್ತಿರುವ ಪ್ರಯತ್ನಕ್ಕೆ ದೈವ ಬಲವನ್ನು ಒದಗಿಸಿಕೊಡಬೇಕೆಂದು ದೈವದ ಬಳಿ ಕೇಳಿಕೊಂಡಿದ್ದರು. ಆರೋಪಿಗಳ ಬಂಧನವಾಗಿ ಕಠಿನ ಶಿಕ್ಷೆ ದೊರಕುವಂತೆ ಅನುಗ್ರಹಿಸುವಂತೆ ಸಂಬಂಧಿಕರು ದೈವದ ಮೊರೆ ಹೋಗಿದ್ದರು.
ದೈವದ ಅಭಯ
ಪಾಂಗಾಳದಲ್ಲಿ ಕಾರಣಿಕ ಮೆರೆಯುತ್ತಿರುವ ಪಾಂಗಾಳ ಪಡ್ಪು ಬಬ್ಬುಸ್ವಾಮಿಯ ನೇಮದ ದಿನದಂದೇ ಎಲ್ಲರಿಗೆ ಬೇಕಾದ ವ್ಯಕ್ತಿಯನ್ನು ಕೊಲೆಗೈದು, ಊರಿಗೆ ಕಳಂಕ ತಂದಿರುವ ಆರೋಪಿಗಳು ಯಾರೇ ಆಗಿರಲಿ, ಎಲ್ಲೇ ಅಡಗಿರಲಿ, ಅವರನ್ನು ಶೀಘ್ರ ಕಾನೂನಿನ ಬಲೆಗೆ ಸಿಲುಕಿಸುತ್ತೇನೆ. ಅವರು ಮಾಡಿದ ತಪ್ಪಿಗೆ ಸೂಕ್ತ ಶಿಕ್ಷೆ ಅನುಭವಿಸುತ್ತಾರೆ. ಕಾನೂನಿನ ಶಿಕ್ಷೆಯೊಂದಿಗೆ ದೈವಗಳ ಶಿಕ್ಷೆಯೂ ಅವರಿಗೆ ಕಾದಿದೆ. ಹತ್ತು ದಿನದೊಳಗೆ ಎಲ್ಲ ಆರೋಪಿಗಳೂ ಪೊಲೀಸರ ವಶದಲ್ಲಿರುವಂತೆ ನೋಡಿಕೊಳ್ಳುತ್ತೇವೆ ಎಂದು ಧೂಮಾವತಿ ದೈವವು ಕುಟುಂಬದವರಿಗೆ ಅಭಯ ನೀಡಿತ್ತು.
ಇದೀಗ ದೈವ ಅಭಯ ನುಡಿ ನೀಡಿದ ಎರಡು ದಿನದೊಳಗೆ ಹತ್ಯೆಯಲ್ಲಿ ನೇರ ಭಾಗಿಯಾದ ನಾಲ್ವರು ಬಂಧಿತರಾಗಿದ್ದಾರೆ.