Amaragiri ಪುತ್ತೂರು : ಅಮರಗಿರಿಯಲ್ಲಿ ನಿರ್ಮಾಣಗೊಂಡಿರುವ ಭಾರತ ಮಾತಾ ಮಂದಿರದಲ್ಲಿ ತಾತ್ಯಾಟೋಪೆ, ಸಾವರ್ಕರ್‌ರಿಂದ ಆರಂಭಿಸಿ ಪರಮವೀರ ಚಕ್ರ ಪುರಸ್ಕೃತ ಯೋಧರವರೆಗಿನ ಭಾವಚಿತ್ರಗಳಿವೆ. ಅಲ್ಲಿ ಮಂದಿರ ನಿರ್ಮಿಸಿರುವುದು ಅತ್ಯಂತ ಸುಂದರ ವಿಚಾರ ಎಂದು ಕೇಂದ್ರ ಗೃಹ ಮತ್ತು ಸಹಕಾರ ಖಾತೆ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ಶ್ರೀಕ್ಷೇತ್ರ ಹನುಮಗಿರಿಯಲ್ಲಿ ಧರ್ಮಶ್ರೀ ಪ್ರತಿಷ್ಠಾನ ನಿರ್ಮಿಸಿರುವ ರೈತ ಮತ್ತು ಸೈನಿಕನಿಗೆ ಗೌರವ ಆರ್ಪಿಸುವ ಅಮರಗಿರಿಯನ್ನು ಫೆ.11ರಂದು ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಖಾತೆ ಸಚಿವರಾಗಿರುವ ಅಮಿತ್ ಶಾ ಅವರು ವಿದ್ಯುಕ್ತವಾಗಿ ಲೋಕಾರ್ಪಣೆ ಮಾಡಿದ್ದರು. ಆ ಬಳಿಕ ಅಮಿತ್ ಶಾ ಅವರು ನವದೆಹಲಿಯಲ್ಲಿ `ಎಎನ್‌ಐ ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅಮರಗಿರಿಯ ಕುರಿತಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಫೆ.14ರಂದು ಪ್ರಸಾರಗೊಂಡ ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ನಿರೂಪಕಿಯು ಅಮಿತ್ ಶಾ ಅವರ ಪುತ್ತೂರು ಭೇಟಿಯ ಬಗ್ಗೆ ಪ್ರಶ್ನಿಸಿದ್ದು “ಇತ್ತೀಚೆಗೆ ತಾವು ಪುತ್ತೂರಿಗೆ ತೆರಳಿದ್ದಿರಿ, ಅಲ್ಲಿ ಭಾರತಮಾತೆಯ ಮಂದಿರವನ್ನು ಉದ್ಘಾಟಿಸಿದ್ದೀರಿ. ಇದು ದೇಶದಲ್ಲೇ ಎರಡನೇ ಮಂದಿರ. ಅಲ್ಲಿಂದ ಅಮಿತ್ ಶಾ ಅವರು ಚುನಾವಣಾ ಪ್ರಚಾರ ಆರಂಭಿಸಿದ್ದಾರೆಂಬ ಚರ್ಚೆ ಶುರುವಾಗಿದೆ. ಹಿಂದುತ್ವ, ದೇಶಭಕ್ತಿಯನ್ನು ಸೇರಿಸಿಕೊಂಡು ಕಾಕ್‌ಟೇಲ್ ಮಾಡುತ್ತಿದ್ದೀರಿ ಎನ್ನುವ ಮಾತು ಕೇಳಿಬರ್ತಿದೆ ಎಂದಿದ್ದರು.
ಅದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅಮಿತ್ ಶಾ “ಇಂತಹ ಮಾತುಗಳು ಕೇಳಿಬರುತ್ತಿರುವುದು ದುರದೃಷ್ಟಕರ.. ನಾನು ನಿಮಗೂ ಹೇಳುತ್ತೇನೆ, ನಿಮಗೆ ಸಮಯ ಸಿಕ್ಕಿದರೆ ನೀವು ಕೂಡ ಒಂದು ಬಾರಿ ಅಲ್ಲಿಗೆ ಭೇಟಿ ನೀಡಿ. ಅತ್ಯಂತ ಪ್ರಶಾಂತ ವಾತಾವರಣದಲ್ಲಿ ವ್ಯವಸ್ಥಿತವಾಗಿ ಸ್ವಚ್ಛ, ಸುಂದರವಾದ ಮಂದಿರ ನಿರ್ಮಾಣಗೊಂಡಿದೆ. ಯಾವ ಟ್ರಸ್ಟ್ ಇದನ್ನು ನಿರ್ಮಾಣ ಮಾಡಿದೆಯೋ ಆ ಟ್ರಸ್ಟ್‌ಗೆ ಬಹಳ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಅಂತಹ ಮಂದಿರಕ್ಕೆ ಹೋಗೋದ್ರಿಂದ ನನ್ನ ಮೇಲೆ ಯಾವುದೇ ಆರೋಪಗಳು ಬರುವುದಿದ್ದರೆ ಅಂತಹ ಆರೋಪಗಳನ್ನು ನಾನು ಸ್ವಾಗತಿಸುತ್ತೇನೆ ಮತ್ತು ಖುಷಿಯಿಂದ ಸ್ವೀಕರಿಸುತ್ತೇನೆ ಎಂದು ಹೇಳಿದರು