ಹೊಸದಿಲ್ಲಿ: ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಅದಾನಿ ಗ್ರೂಪ್ ಮುಖ್ಯಸ್ಥ ಗೌತಮ್ ಅದಾನಿ (Adani) 24ನೇ ಸ್ಥಾನಕ್ಕೆ ಕುಸಿದಿದ್ದಾರೆ. ಅಮೆರಿಕದ ಹಿಂಡನ್‌ಬರ್ಗ್ ರೀಸರ್ಚ್ ವರದಿ ಬಿಡುಗಡೆಯಾಗುವುದಕ್ಕೂ ಮೊದಲು (ಜ. 24) ಅವರು ವಿಶ್ವದ 3ನೇ ದೊಡ್ಡ ಶ್ರೀಮಂತರಾಗಿದ್ದರು. ಕೇವಲ 21 ದಿನದಲ್ಲಿ 3ನೇ ಸ್ಥಾನದಿಂದ 24 ನೇ ಸ್ಥಾನಕ್ಕೆ ಇಳಿದಿದ್ದಾರೆ.
ಫೋರ್ಬ್ಸ್ ರಿಯಲ್ ಟೈಮ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ ಫೆಬ್ರವರಿ 14ಕ್ಕೆ ಅದಾನಿ ಸಂಪತ್ತಿನ ನಿವ್ವಳ ಮೌಲ್ಯವು 4.31 ಲಕ್ಷ ಕೋಟಿಗೆ ರೂ.ಗೆ (52.2 ಶತಕೋಟಿ ಡಾಲರ್) ಕುಸಿದಿದೆ. ಫೆ. 13ರಂದು ಅವರ ನಿವ್ವಳ ಮೌಲ್ಯವು 4.49 ಲಕ್ಷ ಕೋಟಿ ರೂ. (54.4 ಶತಕೋಟಿ ಡಾಲರ್) ಇತ್ತು. ಅವರು 23ನೇ ಸ್ಥಾನದಲ್ಲಿದ್ದರು. ಅದಾನಿ ನವೆಂಬರ್ 2022ರಲ್ಲಿ ಅಂಬುಜಾ ಸಿಮೆಂಟ್ ಖರೀದಿಸುವಾಗ 150 ಶತಕೋಟಿ ಡಾಲರ್ ಮೌಲ್ಯದ ಸಂಸ್ಥೆ ಎಂದು ಘೋಷಿಸಿದ್ದರು.
ಮಂಗಳವಾರವೂ ಅದಾನಿ ಗ್ರೂಪ್ ಕಂಪನಿಗಳ ಷೇರುಗಳು ಕುಸಿದಿದ್ದು, ಗ್ರೂಪ್‌ನ 10ರಲ್ಲಿ 6 ಷೇರುಗಳು ಶೇ. 5ಕ್ಕೂ ಹೆಚ್ಚು ನಷ್ಟ ಕಂಡಿವೆ. ಇವುಗಳಲ್ಲಿ ಅದಾನಿ ಗ್ರೀನ್ ಎನರ್ಜಿ, ಅದಾನಿ ಪವರ್, ಅದಾನಿ ಟೋಟಲ್ ಗ್ಯಾಸ್, ಅದಾನಿ ಟ್ರಾನ್ಸ್‌ಮಿಷನ್, ಅದಾನಿ ವಿಲ್ಮಾರ್ ಮತ್ತು ಎನ್‌ಡಿಟಿವಿ ಸೇರಿವೆ.
ಏತನ್ಮಧ್ಯೆ, ಅದಾನಿ ಗ್ರೂಪ್ ತನ್ನ ಕೆಲವು ಕಂಪನಿಗಳ ಸ್ವತಂತ್ರ ಲೆಕ್ಕಪರಿಶೋಧನೆಗಾಗಿ ಅಕೌಂಟೆನ್ಸಿ ಫರ್ಮ್ ಗ್ರ್ಯಾಂಟ್ ಥಾರ್ನ್‌ಟನ್ ಅನ್ನು ನೇಮಕ ಮಾಡಿದೆ.
ಅದಾನಿ ಎಂಟರ್‌ಪ್ರೈಸಸ್ ಲಿ. ಡಿಸೆಂಬರ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ 820 ಕೋಟಿ ರೂ. ನಿವ್ವಳ ಲಾಭ ದಾಖಲಿಸಿದೆ. ವರ್ಷದ ಹಿಂದಿನ ಇದೇ ಅವಧಿಯಲ್ಲಿ ಕಂಪನಿ 11.63 ಕೋಟಿ ರೂ. ನಿವ್ವಳ ನಷ್ಟವನ್ನು ಅನುಭವಿಸಿತ್ತು.
ಕಾರ್ಯಾಚರಣೆಗಳ ಆದಾಯವು ಕಳೆದ ವರ್ಷದ ಡಿಸೆಂಬರ್‌ಗೆ ಹೋಲಿಸಿದರೆ ಶೇ. 42ರಷ್ಟು ಹೆಚ್ಚಳವಾಗಿದ್ದು 26,612.23 ಕೋಟಿ ರೂ.ಗೆ ತಲುಪಿದೆ. ತೆರಿಗೆಗೂ ಮೊದಲಿನ ಆದಾಯ ಅಂದರೆ ಏಕೀಕೃತ ಕಾರ್ಯಾಚರಣೆ ಲಾಭವು ದುಪ್ಪಟ್ಟಾಗಿದ್ದು 1,968 ಕೋಟಿ ರೂ.ಗೆ ಮುಟ್ಟಿದೆ ಎಂದು ಕಂಪನಿ ತಿಳಿಸಿದೆ
“ಪ್ರಸ್ತುತ ಮಾರುಕಟ್ಟೆಯಲ್ಲಿನ ಅಸ್ಥಿರತೆಯು ತಾತ್ಕಾಲಿಕವಾಗಿದೆ. ದೀರ್ಘಾವಧಿಯ ಮೌಲ್ಯ ಸೃಷ್ಟಿಯ ದೃಷ್ಟಿಕೋನದೊಂದಿಗೆ ಅದಾನಿ ಎಂಟರ್‌ಪ್ರೈಸಸ್ ಸಾಧಾರಣ ಸಾಲದೊಂದಿಗೆ ಕಾರ್ಯಾಚರಣೆಯನ್ನು ಮುಂದುವರಿಸುತ್ತದೆ ಮತ್ತು ವಿಸ್ತರಣೆಗೆ ಮುಂದಾಗಲಿದೆ,” ಎಂದು ಕಂಪನಿ ಅಧ್ಯಕ್ಷ ಗೌತಮ್ ಅದಾನಿ ಹೇಳಿದ್ದಾರೆ.