ಪುತ್ತೂರು, ಫೆ14 : ಪಾರ್ಕ್ ವೊಂದರಲ್ಲಿ ಬೆಂಕಿ ಆಕಸ್ಮಿಕ ಗೊಂಡು ಗಿಡಗಳೆಲ್ಲಾ ಸುಟ್ಟು ಭಸ್ಮವಾದ ಘಟನೆ ಪುತ್ತೂರು ನಗರ ಖಾಸಗಿ ಬಸ್ ಸ್ಟಾಂಡ್ ಸಮೀಪದಲ್ಲಿ ನಡೆದಿದೆ. ಈ ಬೆಂಕಿ ಆಕಸ್ಮಿಕಕ್ಕೆ ಪಕ್ಕದಲ್ಲೇ ಹಾದುಹೋದ ವಿದ್ಯುತ್ ತಂತಿಗಳ ಶಾರ್ಟ್ ಸರ್ಕ್ಯೂಟ್ ಕಾರಣವೆಂದು ಪ್ರತ್ಯಕ್ಷ ದರ್ಶಿಗಳು ಮಾಹಿತಿ ನೀಡಿದ್ದಾರೆ.
ಇಂದು ಸಂಜೆಯ ಸುಮಾರಿಗೆ ನಗರಸಭೆಗೆ ಸೇರಿದ್ದ ಪಾರ್ಕ್ ನಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿತ್ತು. ಪಕ್ಕದಲ್ಲೇ ಹಾದುಹೋದ ವಿದ್ಯುತ್ ತಂತಿಗಳಲ್ಲಿ ಶಾಟ್ ಸರ್ಕ್ಯೂಟ್ ಉಂಟಾಗಿತ್ತು. ತಂತಿ ಕಟಿದು ಕೆಳಗೆ ಪಾರ್ಕ್ ನಲ್ಲಿದ್ದ ಗಿಡ ಹಾಗೂ ಒಣಹುಲ್ಲುಗಳ ಮೇಲೆ ಬಿದ್ದಿತ್ತು. ಇದರ ಬೆಂಕಿಯ ಕಿಡಿಗಳಿಂದ ಮೊದಲು ಒಣಹುಲ್ಲು ಗಳಿಗೆ ಬೆಂಕಿ ತಗುಲಿತ್ತು. ಬಳಿಕ ಪಾರ್ಕ್ ನ ಗಿಡಗಳಿಗೂ ತಗುಲಿತ್ತು. ನೋಡನೋಡುತ್ತಲೇ ಇಡೀ ಪಾರ್ಕ್ ಗೂ ಬೆಂಕಿ ಆವರಿಸಿತ್ತು. ಸ್ಥಳೀಯರು ಮೊದಲು ನೀರನ್ನು ಹಾಕಿ ಬೆಂಕಿ ನಂದಿಸುವ ಪ್ರಯತ್ನ ಮಾಡಿದ್ದರು. ಆದರೆ ಜೋರಾಗಿ ಬೀಸುತ್ತಿದ್ದ ಗಾಳಿಗೆ ಬೆಂಕಿ ಮತ್ತಷ್ಟು ವ್ಯಾಪಿಸಿತ್ತು. ಸ್ಥಳೀಯರ ಪ್ರಯತ್ನವೆಲ್ಲ ವಿಫಲಗೊಂಡಿತ್ತು. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳವು ಆಗಮಿಸಿ ಸಿಬ್ಬಂದಿಗಳ ಸಹಾಯದಿಂದ ಬೆಂಕಿ ಯನ್ನು ನಂದಿಸಲಾಯಿತು.
ಸ್ಥಳಕ್ಕೆ ಆಗಮಿಸಿದ ಮೆಸ್ಕಾಂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಶಾರ್ಟ್ ಸರ್ಕ್ಯೂಟ್ ನಿಂದ ತುಂಡರಿಸಿದ್ದ ತಂತಿಗಳನ್ನು ಜೋಡಿಸಿ ದುರಸ್ತಿಪಡಿಸಿದರು.
ಪೊದೆಗಳೇ ಬೆಳೆದಿದ್ದ ಹಾಗೂ ಕಸದ ರಾಶಿಯೇ ತುಂಬಿದ್ದ ಈ ಪ್ರದೇಶವು ಇತ್ತೀಗಷ್ಟೇ ಸುಣ್ಣ ಬಣ್ಣ ಬಳಿದು ನಗರಸಭೆಯಿಂದ ಪಾರ್ಕ್ ಆಗಿ ಅಭಿವೃದ್ಧಿ ಗೊಂಡಿದ್ದು, ಸ್ಥಳೀಯರಿಗೆ ಬೆಳಗ್ಗಿನ ಹಾಗೂ ಸಂಜೆಯ ವಾಯುವಿಹಾರಕ್ಕೆ ಸಹಕಾರಿಯಾಗಿತ್ತು.