ಪುತ್ತೂರು ಫೆಬ್ರವರಿ, 14: ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಎಸ್‌ಡಿಪಿಐ ಅಭ್ಯರ್ಥಿಯಾಗಿ ಪ್ರವೀಣ್ ನೆಟ್ಟಾರು ಕೊಲೆ ಆರೋಪಿಯನ್ನು ಕಣಕ್ಕಿಳಿಸುವುದಾಗಿ ಎಸ್ಡಿಪಿಐ ಘೋಷಿಸಿದ್ದು, ಇದಕ್ಕೆ ಹಿಂದೂ ಮುಖಂಡರು ಹಾಗೂ ನೆಟ್ಟಾರ್ ಕುಟುಂಬಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಹಾಗೂ ಸಂಘ ಪರಿವಾರದ ಕಾರ್ಯಕರ್ತರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಪಿಎಫೈ ನಿಷೇಧಿಸಿದಂತೆ ಎಸ್ಡಿಪಿಐ ಪಕ್ಷವನ್ನು ಕೂಡ ನಿಷೇಧಿಸುವಂತೆ ಸರಕಾರವನ್ನು ಒತ್ತಾಯಿಸಿದ್ದಾರೆ. ಪುತ್ತೂರು ಶಾಸಕ ಸಂಜೀವ ಮಠಂದೂರುರವರು ಕೂಡ ಎಸ್ಡಿಪಿಐ ನಡೆಯನ್ನು ಆಕ್ಷೇಪಿಸಿದ್ದು, NIA ಬಂಧಿಸಿರುವ ಕೊಲೆ ಆರೋಪಿಗೆ ಚುನಾವಣೆಗೆ ನಿಲ್ಲಲು ಚುನಾವಣಾ ಆಯೋಗ ಅವಕಾಶ ನೀಡಬಾರದೆಂದು ಆಗ್ರಹಿಸಿದ್ದಾರೆ
ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ, ನೆಟ್ಟಾರು ಕೊಲೆ ಆರೋಪಿ ಶಾಫಿ ಬೆಳ್ಳಾರೆಗೆ ಟಿಕೆಟ್ ನೀಡುವುದಾಗಿ ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಕೊಡ್ಲಿಪೇಟೆ ಫೆಬ್ರವರಿ 10ರಂದು ಪುತ್ತೂರಿನಲ್ಲಿ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಘೋಷಣೆ ಮಾಡಿದ್ದಾರೆ. ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಎನ್ ಐಎ ಬಂಧಿಸಿರುವ 10 ಆರೋಪಿಗಳ ಪೈಕಿ ಶಾಫಿ ಬೆಳ್ಳಾರೆಯೂ ಒಬ್ಬ. ಈತನ ವಿರುದ್ದ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೂ ಜೈಲಿನಿಂದಲೇ ಚುನಾವಣೆಗೆ ಸ್ಪರ್ಧಿಸಲು ಶಾಫಿ ಬೆಳ್ಳಾರೆ ಒಪ್ಪಿಗೆ ಸೂಚಿಸಿರುವುದಾಗಿ ತಿಳಿದು ಬಂದಿದ್ದು, ಇದು ಚುನಾವಣಾ ಕಣದಲ್ಲಿ ಸಂಚಲನ ಮೂಡಿಸಿದೆ. ಶಾಫಿ ಚುನಾವಣೆಗೆ ಸ್ಪರ್ಧಿಸಿದರೇ ಕೊಲೆ ಆರೋಪಿಯೊಬ್ಬ ಚುನಾವಣೆಗೆ ಸ್ಪರ್ಧಿಸಿದ ಮೊದಲ ದೃಷ್ಟಾಂತ ಪುತ್ತೂರಿನಲ್ಲಿ ಸಿಗಲಿದೆ. ಈತನ ಸಹೋದರ ಕೂಡ ಇದೆ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದಾನೆ. ಪ್ರವೀನ್ ಹತ್ಯೆಯ ಬಳಿಕ ಹಲವು ತಿಂಗಳುಗಳ ಕಾಲ ಭೂಗತರಾಗಿದ್ದ ಸಹೋದರರಿಬ್ಬರನ್ನು NIA ಹೊಂಚು ಹಾಕಿ ಬಂಧಿಸಿತ್ತು.
ಎಸ್‌ಡಿಪಿಐ ರಾಜ್ಯಾಧ್ಯಕ್ಷ ಮಜೀದ್ ಪುತ್ತೂರಿನಲ್ಲಿ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಮಾತಾನಾಡುತ್ತ , ಶಾಫಿ ಬೆಳ್ಳಾರೆ ನಮ್ಮ ಪುತ್ತೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ. ಅವರನ್ನು ಕರೆ ನೀಡಿದ್ದಾರೆ. ಎಸ್‌ಡಿಪಿಐನ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿಯನ್ನು ಈಗಾಗಲೇ ಘೋಷಿಸಿದ್ದು, ಎರಡನೇ ಅಭ್ಯರ್ಥಿ ಪಟ್ಟಿಯಲ್ಲಿ ಶಾಫಿ ಬೆಳ್ಳಾರೆ ಹೆಸರು ಇರಲಿದ್ದು, ಅವರು ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆಂದು ಅಬ್ದುಲ್ ಮಜೀದ್ ಘೋಷಿಸಿದ್ದರು
ನೆಟ್ಟಾರು ಕೊಲೆ ಆರೋಪಿಗೆ ಟಿಕೆಟ್
ಈ ಹಠಾತ್ ಬೆಳವಣಿಗೆಗೆ ಪ್ರವೀಣ್ ನೆಟ್ಟಾರ್ ಪೋಷಕರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಶಾಫಿಯನ್ನು ಅಭ್ಯರ್ಥಿಯನ್ನಾಗಿಸುವುದಕ್ಕೆ ಆಕ್ಷೇಪಿಸಿದ್ದಾರೆ. “ಶಾಫಿ ಬೆಳ್ಳಾರೆಗೆ ಯಾವುದೇ ಕಾರಣಕ್ಕೂ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು. ಅನ್ಯಾಯವಾಗಿ ನಮ್ಮ ಮಗನನ್ನು ಕೊಂದ ಪಾಪಿ ಅವನು. ಅಧಿಕಾರವಿಲ್ಲದೇ ಆತ ನಮ್ಮ ಮಗನನ್ನು ಕೊಂದಿದ್ದಾನೆ. ನಾಳೆ ಅಧಿಕಾರ ಪಡೆದ ಬಳಿಕ ಎಲ್ಲರನ್ನೂ ಕೊಲ್ಲುತ್ತಾನೆ. ನಮಗೆ ಮನೆಯಿಂದ ಹೊರಗೆ ಹೋಗಲಾರದಂತಹ ಸ್ಥಿತಿ ನಿರ್ಮಿಸಬಹುದು. ನಮಗೆ ಇದ್ದ ಒಬ್ಬನೇ ಮಗನನ್ನು ಮುಗಿಸಿದ್ದಾನೆ. ನಮಗೆ ಇಬ್ಬರಿಗೂ ಆರೋಗ್ಯ ಚೆನ್ನಾಗಿಲ್ಲ. ನಮ್ಮನ್ನು ಈ ಸ್ಥಿತಿಗೆ ತಂದ ಆರೋಪಿಗೆ ಚುನಾವಣೆಯಲ್ಲಿ ಸ್ಪರ್ಥಿಸಲು ಅವಕಾಶ ನೀಡಲೇಬಾರದು,” ಎಂದು ಅವರು ಸರಕಾರವನ್ನು ಆಗ್ರಹಿಸಿದ್ದಾರೆ .
ಶಾಫಿ ಬೆಳ್ಳಾರೆ ಓರ್ವ ಕೊಲೆಗಡುಕ : ಮುತಾಲಿಕ್
ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮೊತಾಲಿಕ್ ತೀವ್ರ ವಿರೋಧ ವ್ಯಕ್ತ ಪಡಿಸಿದ್ದು, “ಕೊಲೆಗಡುಕರನ್ನು ಅಭ್ಯರ್ಥಿಯನ್ನಾಗಿ ಮಾಡಲು ಧೈರ್ಯ ತೋರಿದ ಎಸ್‌ಡಿಪಿಐಗೆ ಧಿಕ್ಕಾರ ಹೇಳುತ್ತೇನೆ. ಇವರ ಅಭ್ಯರ್ಥಿ ಶಾಫಿ ಬೆಳ್ಳಾರೆ ಓರ್ವ ಕೊಲೆಗಡುಕ, ಸಂಚುಕೋರನಾಗಿದ್ದಾನೆ. ಇವರ ಉದ್ದೇಶವೇ ಹಿಂದೂಗಳನ್ನು ಕೊಲೆ ಮಾಡುವುದಾಗಿದೆ. ರಾಜಕೀಯ ಶಕ್ತಿಯನ್ನು ಬಳಸಿ ಕೊಲೆ ಮಾಡುವ ಉದ್ದೇಶ ಇವರದ್ದಾಗಿದೆ. ಚುನಾವಣಾ ಆಯೋಗ ಇದನ್ನು ಗಂಭೀರವಾಗಿ ಪರಿಗಣಿಸಿ ಅವಕಾಶ ನೀಡಬಾರದು. ಅವಕಾಶ ನೀಡಿದರೆ ಶ್ರೀರಾಮ ಸೇನೆ ಉಗ್ರ ಹೋರಾಟ ಮಾಡಲಿದೆ ಎಂದು ಪ್ರಮೋದ್ ಮುತಾಲಿಕ್ ಎಚ್ಚರಿಸಿದರು.
ಚುನಾವಣಾ ಆಯೋಗ ಅವಕಾಶ ನೀಡಬಾರದು
ಸೂಕ್ತ ಸಾಕ್ಷ್ಯ ಆಧಾರಗಳೊಂದಿಗೆ ದೂರ್ತ ಶಾಫಿ ಬೆಳ್ಳಾರೆಯನ್ನು ಬಂಧಿಸಿ NIAಯು ಜೈಲಿಗಟ್ಟಿದೆ. ಈತನನ್ನು ಅಭ್ಯರ್ಥಿಯಾಗಿ ಘೋಷಿಸುವ ಮೂಲಕ ರಾಜಕೀಯ ಪಕ್ಷ ಎಂದು ಹೇಳಿಕೊಳ್ಳುತ್ತಿದ್ದ ಎಸ್ಡಿಪಿಐಯ ಮುಖವಾಡ ಕಳಚಿ ಬಿದ್ದಿದ್ದು, ಅದೊಂದು ಭಯೋತ್ಪಾದಕ ಸಂಘಟನೆಯಾಗಿದೆ. ಈ ಮೂಲಕ ಅದು ತನ್ನ ಪಕ್ಷದಲ್ಲಿ ಜಿಹಾದಿಗಳಿಗೆ, ಕೊಲೆಗಡುಕರಿಗೆ ಮಾತ್ರ ಅವಕಾಶ ಎಂದು ಸಾಬೀತು ಮಾಡಿದೆ. ಗಂಭೀರ ಕೊಲೆ ಪ್ರಕರಣದ ಶಾಫಿ ಮೇಲಿದ್ದು ಆತನಿಗೆ ಚುನಾವಣೆ ನಿಲ್ಲಲು ಯಾವುದೇ ಕಾರಣಕ್ಕೂ ಚುನಾವಣಾ ಆಯೋಗ ಅವಕಾಶ ನೀಡಬಾರದೆಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಆಗ್ರಹಿಸಿದ್ದಾರೆ.