ಮಂಗಳೂರು: ಕಾರ್ಕಳದಲ್ಲಿ ಸ್ಪರ್ಧಿಸಲು ಬಿಜೆಪಿ ಸಚಿವರು, ಶಾಸಕರು ತನು ಮನ ಧನದ ಸಹಕಾರ ನೀಡುವ ಭರವಸೆ ನೀಡಿದ್ದಾರೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ (Muthalik vs Sunil ) ಸ್ಪೋಟಕ ಹೇಳಿಕೆ ನೀಡಿದ್ದಾರೆ. ಚುನಾವಣೆಯ ಹೊಸ್ತಿಲಲ್ಲೇ ಈ ಹೇಳಿಕೆ ರಾಜ್ಯ ಬಿಜೆಪಿಯಲ್ಲಿ ಇರುವ ಭಿನ್ನಮತ ಬಹಿರಂಗವಾಗಿದೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುನಿಲ್ ಕುಮಾರ್ ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸಲ್ಪಡುತ್ತಿದ್ದು, ಮುಖ್ಯಮಂತ್ರಿ ರೇಸ್ ನಲ್ಲಿರುವ ಇತರ ಕೆಲವು ಬಿಜೆಪಿ ಮುಖಂಡರು ನನಗೆ ಸಹಕಾರದ ಭರವಸೆ ನೀಡಿದ್ದಾರೆ. ಕಾರ್ಕಳದಲ್ಲಿ ನನ್ನ ಗೆಲುವು ಖಚಿತ. ನಕಲಿ ಹಿಂದುತ್ವ ಮತ್ತು ಭ್ರಷ್ಟಾಚಾರದ ವಿರುದ್ದ ನನ್ನ ಸ್ಪರ್ಧೆ ಎಂದರು.
ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಕಾರ್ಕಳ ವಿಧಾನಸಭೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಈಗಾಗಲೇ ಘೋಷಣೆ ಮಾಡಿದ್ದಾರೆ.
ಮುತಾಲಿಕ್ ಹೇಳಿಕೆ ಬೆನ್ನಲ್ಲೇ ಕಾರ್ಕಳದ ಹತ್ತಿರದ ಕ್ಷೇತ್ರದಲ್ಲೇ ಈ ಬಗ್ಗೆ ಮಾತುಕತೆ ನಡೆದಿದ್ದು ಎನ್ನಲಾದ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಕ್ಷೇತ್ರದಲ್ಲಿ ಸಚಿವ ಆಕಾಂಕ್ಷಿ ಬಿಜೆಪಿ ನಾಯಕರೊಬ್ಬರು ಹಲವು ಕಾರ್ಯಕ್ರಮಗಳಿಗೆ ಮುತಾಲಿಕ್ ರನ್ನು ಕರೆತರುತಿದ್ದು, ಅಲ್ಲಿನ ಪ್ರತಿಷ್ಠಿತ 5 ಸ್ಟಾರ್ ಹೊಟೇಲ್ ನಲ್ಲಿ ವಾಸಕ್ಕೆ ವ್ಯವಸ್ಥೆ ಮಾಡಿಕೊಡುತಿದ್ದು, ಅಲ್ಲೇ ಈ ಬಗ್ಗೆ ಮಾತುಕತೆ ನಡೆದಿದೆ ಎನ್ನಲಾದ ಸಂದೇಶ ವೈರಲ್ ಆಗುತ್ತಿದೆ.
ಪ್ರೇಮಿಗಳ ದಿನಾಚರಣೆಗೆ ಈ ಬಾರಿಯೂ ವಿರೋಧವಿದೆ. ಪೊಲೀಸರ ಜತೆ ಸೇರಿ ಕಾನೂನು ಬದ್ದವಾಗಿ ತಡಯುತ್ತೇವೆ. ಪ್ರೇಮಿಗಳ ದಿನ ಆಚರಣೆ ನೆಪದಲ್ಲಿ ಅನೈತಿಕತೆ, ಡ್ರಗ್ಸ್ ಮಾಫಿಯಾ ಸೆಕ್ಸ್ ಮಾಫಿಯಾಕ್ಕೆ ಅವಕಾಶ ನೀಡುವುದಿಲ್ಲ ಎಂದು ಮುತಾಲಿಕ್ ಹೇಳಿದರು.