ಕಡಬ, ಫೆ.13: ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮರ್ಧಾಳ ಎಂಬಲ್ಲಿ ಕೆಎಸ್ಸಾರ್ಟಿಸಿ ಬಸ್ ಹಾಗೂ ಕಾರು ನಡುವೆ ಸಂಭವಿಸಿದ್ದ ಭೀಕರ ಅಪಘಾತದಲ್ಲಿ ಬಾಲಕನೊರ್ವ ಮೃತಪಟ್ಟು ಐವರು ಗಂಭೀರ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಫೆ 13 ರಂದು ಮಧ್ಯಾಹ್ನ ಅಪಘಾತ ಸಂಭವಿಸಿದೆ.
ಮರ್ಧಾಳದಿಂದ ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದ ಕಿಯಾ ಕಾರು ಇನ್ನೊಂದು ಕಾರನ್ನು ಒವರ್ ಟೆಕ್ ಮಾಡಲು ಯತ್ನಿಸಿದಾಗ ಎದುರಿನಿಂದ ಬರುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸಿಗೆ ಮುಖಾಮುಖಿ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಮರ್ಧಾಳ ಸಮೀಪದ ಐತ್ತೂರು ಗ್ರಾಮ ಪಂಚಾಯತ್ ಎದುರು ಬ್ರಾಂತಿಕಟ್ಟೆ ಎಂಬಲ್ಲಿ ಅಪಘಾತ ನಡೆದಿದೆ.
ಕಾರಿನಲ್ಲಿ ಮೃತ ಬಾಲಕನ ಸಹಿತ ಒಟ್ಟು 6 ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಮಹಿಳೆಯೊಬ್ಬರಿಗೆ ಗಂಭೀರ ಗಾಯವಾಗಿದ್ದು, ಕಾಲು ಜಖಂಗೊಂಡಿದೆ .ಗಾಯಾಳುಗಳಿಗೆ ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಎರಡು ಅಂಬ್ಯುಲೆನ್ಸ್ ಗಳಲ್ಲಿ ಪುತ್ತೂರು ಹಾಗೂ ಮಂಗಳೂರಿನ ಆಸ್ಫತ್ರೆಗೆ ಕರೆದೊಯ್ಯಲಾಗಿದೆ. ಕಾರಿನಲ್ಲಿದ್ದವರು ಬೆಂಗಳೂರು ಮೂಲದವರೆಂದು ಹೇಳಲಾಗುತ್ತಿದೆ.



