ಪುತ್ತೂರು: ಪುತ್ತೂರು ಸಮೀಪದ ಕೌಡಿಚ್ಚಾರ್ ಅಸುಪಾಸಿನ ಆರು ಮಂದಿ ಹದಿ ಹರೆಯದ ಯುವಕರು ಫೆ 11 ರಂದು ಸುಳ್ಯದ ಪಯಸ್ವಿನಿ ನದಿಗೆ ತೆರಳಿದ್ದು, ಅದರಲ್ಲಿ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಪುತ್ತೂರು ತಾಲೂಕಿನ ದೇರ್ಲದ ಜಿತೇಶ್ ಪಾಟಾಳಿ (19) ಮತ್ತು ಅಂಬಟೆಮೂಲೆ ನಿವಾಸಿ ಪ್ರವೀಣ್ (19) ಮೃತಪಟ್ಟವರು
ಪ್ರವೀಣ್ ಪಡುವನ್ನೂರು ಗ್ರಾಮದ ಅಂಬಟೆಮೂಲೆ ಕೃಷ್ಣ ನಾಯ್ಕ-ದೇವಕಿ ದಂಪತಿಯ ಏಕೈಕ ಮಗ . ನೀರಿನಲ್ಲಿ ಮುಳುಗುತ್ತಿದ್ದ ಈತನನ್ನು ರಕ್ಷಿಸಲು ಹೋಗಿ ಮೃತಪಟ್ಟ ಜಿತೇಶ್ ಕೆಯ್ಯೂರು ಗ್ರಾಮದ ದೇರ್ಲ ನಾರಾಯಣ ಪಾಟಾಳಿ ಮತ್ತು ಗೀತಾ ದ೦ಪತಿಯ ಕಿರಿಯ ಪುತ್ರ
ತಂಡವಾಗಿ ಯಂತ್ರದ ಮೂಲಕ ಹುಲ್ಲು ಕತ್ತರಿಸುವ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಕೌಡಿಚ್ಚರಿನ ಯುವಕರಾದ ಸ೦ತೋಷ್ ಅಂಬಟೆಮೂಲೆ, ಸತ್ಯಾನಂದ ಚಂದುಕೊಡು, ಯುವರಾಜ ಅಂಬಟೆಮೂಲೆ, ನಿತೀಶ್ ಬಳ್ಳಿಕಾನ, ಜಿತೇಶ್ ದೇರ್ಲ ಮತ್ತು ಪ್ರವೀಣ್ ಅಂಬಟೆಮೂಲೆಯವರು ಕೆಲಸಕ್ಕೆ ರಜೆಯಿದ್ದ ಹಿನ್ನಲೆಯಲ್ಲಿ ಮಧ್ಯಾಹ್ನ ಸುಳ್ಯದ ಪಯಸ್ವಿನಿ ನದಿ ಬಳಿ ತೆರಳಿದ್ದರು.
ಪ್ರವೀಣ್ ಮತ್ತು ಜಿತೇಶ್ ನದಿಯ ಮಧ್ಯ ಭಾಗದಲ್ಲಿ ತೆರಳಿದ್ದು, ಉಳಿದ ಯುವಕರು ನದಿಯ ಬದಿಯಿಂದ ತೆರಳಿದ್ದರು ಎನ್ನಲಾಗಿದೆ. ನದಿಯಲ್ಲಿ ಅಲ್ಲಲ್ಲಿ ದೊಡ್ಡ ಗುಂಡಿಗಳಿದ್ದು, ಈ ಗುಂಡಿಯ ಬಗ್ಗೆ ಗೊತ್ತಿಲ್ಲದ ಪ್ರವೀಣ್ ಅವರು ಅದರಲ್ಲಿ ಕಾಲಿಟ್ಟು ಮುಳುಗಿದ್ದಾರೆ. ಇವರನ್ನು ರಕ್ಷಿಸಲು ಹೋದ ಪಕ್ಕದಲ್ಲಿದ್ದ ಜಿತೇಶ್ ಕೂಡ ಮುಳುಗಿದ್ದಾರೆ. ಆಗ ಉಳಿದ ನಾಲ್ವರು ಅವರನ್ನು ರಕ್ಷಿಸಲು ಯತ್ನಿಸಿದರಾದರೂ, ವಿಫಲರಾದಾಗ ಜೋರಾಗಿ ಬೊಬ್ಬೆ ಹೊಡೆದಿದ್ದಾರೆ ಎನ್ನಲಾಗಿದೆ.
ಈ ವೇಳೆ ಸ್ಥಳೀಯ ನಿವಾಸಿ ಜಯ ಪ್ರಕಾಶ್ ಅವರು ಮನೆಯಿಂದ ಓಡಿ ಬಂದು ನದಿಗೆ ಇಳಿದು. ನೀರಿನಲ್ಲಿ ಪೂರ್ಣವಾಗಿ ಮುಳುಗಿದ್ದ ಇಬ್ಬರು ಯುವಕರನ್ನು ಮೇಲಕ್ಕೆತ್ತಿದ್ದರು. ಆದರೇ ಇಬ್ಬರನ್ನು ರಕ್ಷಿಸುವ ಯತ್ನ ವಿಫಲವಾಗಿದ್ದು, ಅಷ್ಟರಲ್ಲಿ ಅವರ ಉಸಿರು ನಿಂತು ಹೋಗಿತ್ತು. ಸ್ನೇಹಿತರಿಬ್ಬರು ಪರಸ್ಪರ ಹಿಡಿದುಕೊಂಡ ಭಂಗಿಯಲ್ಲೆ ಮೃತಪಟ್ಟಿದ್ದರು.