ಹೊಸದಿಲ್ಲಿ: ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಾಧೀಶ ಜಸ್ಟಿಸ್ ಎಸ್. ಅಬ್ದುಲ್ ನಝೀರ್ (Justice S Abdul Nazeer)ಅವರನ್ನು ಆಂಧ್ರಪ್ರದೇಶದ ರಾಜ್ಯಪಾಲರನ್ನಾಗಿ ರಾಷ್ರಪತಿ ದ್ರೌಪದಿ ಮುರ್ಮು ನೇಮಿಸಿದ್ದಾರೆ.
ಐತಿಹಾಸಿಕ ಅಯೋಧ್ಯೆ ರಾಮಜನ್ಮ ಭೂಮಿ ತೀರ್ಪು ನೀಡಿದ ಬೆಂಚ್ ಸದಸ್ಯರಾಗಿದ್ದ ಎಸ್.ಅಬ್ದುಲ್ ನಜೀರ್ ಅವರು ಜನವರಿ 14ರಂದು ನಿವೃತ್ತರಾಗಿದ್ದರು. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ನ್ಯಾಯಾಲಯ ಸಂಕೀರ್ಣ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಜಸ್ಟಿಸ್ ನಜೀರ್ ಅವರು 1958ರ ಜನವರಿ 5ರಂದು ಜನಿಸಿದರು. ಫೆಬ್ರವರಿ 18, 1983 ರಂದು ವಕೀಲರಾಗಿ ನೋಂದಾಯಿಸಿಕೊಂಡರು. ಕರ್ನಾಟಕ ಹೈಕೋರ್ಟ್‌ನಲ್ಲಿ ಅಭ್ಯಾಸ ಮಾಡಿದ ಅವರು 2003ರ ಮೇ 12 ರಂದು ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು.
ಸುಪ್ರೀಂ ಕೋರ್ಟ್‌ನಿಂದ ಬೀಳ್ಕೊಡುವ ಸಂದರ್ಭದಲ್ಲಿ, ಸಿಜೆಐ ಡಿವೈ ಚಂದ್ರಚೂಡ್ ಅವರು ನ್ಯಾಯಮೂರ್ತಿ ನಜೀರ್ ಅವರ ಸರಳತೆಯ ಬಗ್ಗೆ ಪ್ರಸ್ತಾಪಿಸಿ, ಜಸ್ಟಿಸ್ ನಜೀರ್ 2019 ರವರೆಗೆ ಪಾಸ್‌ಪೋರ್ಟ್ ಸಹ ಹೊಂದಿರಲಿಲ್ಲ ಮತ್ತು ಕೆಲವು ವಾರಗಳ ಹಿಂದೆಯಷ್ಟೇ ಮೊದಲ ಬಾರಿಗೆ ದೇಶದಿಂದ ಹೊರಗೆ ಪ್ರಯಾಣಿಸಿದರು ಎಂದು ಹೇಳಿದ್ದರು.
ಆಂಧ್ರಪ್ರದೇಶದ ಹಾಲಿ ರಾಜ್ಯಪಾಲ ಬಿಸ್ವ ಭೂಷಣ ಹರಿಚಂದನ್ ಅವರನ್ನು ಛತ್ತೀಸ್‌ಗಢದ ರಾಜ್ಯಪಾಲರನ್ನಾಗಿ ವರ್ಗಾಯಿಸಲಾಗಿದೆ.
ನ್ಯಾಯಮೂರ್ತಿ ನಝೀರ್ ಜನವರಿ 4, 2023 ರಂದು ನಿವೃತ್ತರಾದರು. ನಝೀರ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯವರು.