ಪುತ್ತೂರು: ದೇಶದ ಸಹಕಾರಿ ಕ್ಷೇತ್ರದ ಚಿತ್ರಣವನ್ನು ಬದಲಾಯಿಸಲು ಮೋದಿ ಸರಕಾರ ಕಟಿ ಬದ್ದವಾಗಿದ್ದು, ಸಹಕಾರಿ ಸಚಿವಲಾಯದ ಮೂಲಕ ಬಹು ಆಯಾಮದ ಸಹಕಾರಿ ಪ್ಯಾಕ್ಸ್ ಗಳನ್ನು ಆರಂಭಿಸುವುದಾಗಿ ಬಜೆಟ್ ನಲ್ಲಿ ಈಗಾಗಲೇ ಸರಕಾರ ಘೋಷಿಸಿದೆ. ಮುಂದಿನ ಮೂರು ವರ್ಷಗಳಲ್ಲಿ 2 ಲಕ್ಷ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳನ್ನು (PACKS ) ಸ್ಥಾಪಿಸಲಾಗುವುದು. ಬಳಿಕ ಪ್ರತಿ ಪಂಚಾಯತ್ ನಲ್ಲೂ ಒಂದು ಪ್ಯಾಕ್ಸ್ ಇರಲಿದೆ. ಇದರ ಮೂಲಕ ಗ್ರಾಮೀಣರ ಬದುಕನ್ನು ಬದಲಿಸುವ ಪಣ ತೊಡಲಾಗಿದೆ ಎಂದು ತಿಳಿಸಿದರು. ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಷಾ ಹೇಳಿದರು.

ಅವರು ಪುತ್ತೂರು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಕ್ಯಾಂಪ್ಕೊ ಸುವರ್ಣ ಮಹೋತ್ಸವದ ಸಂಭ್ರಮಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಂತರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ 50 ವರ್ಷಗಳನ್ನು ಪೂರೈಸಿದೆ ಎನ್ನುವುದು ಅದು ತನ್ನ ಸದಸ್ಯರಿಗೆ ಹಾಗು ರೈತರಿಗೆ ಪ್ರಾಮಣಿಕವಾಗಿ ಸೇವೆ ಸಲ್ಲಿಸಿದೆ ಎನ್ನುವುದಕ್ಕೆ ಸರ್ಟಿಫಿಕೇಟ್. 3 ಸಾವಿರ ಸದಸ್ಯರಿಂದ ಆರಂಭಗೊಂಡ ಕ್ಯಾಂಪ್ಕೋ 1.38 ಲಕ್ಷ ಸದಸ್ಯರ ಸಹಕಾರಿ ಸಂಸ್ಥೆಯಾಗಿದೆ. ಇಲ್ಲಿ ರೈತ ನಾಯಕ ದಿ. ವಾರಣಾಸಿ ಸುಬ್ರಾಯ ಭಟ್ ಅವರ ಮೂಲಕ ಮೊಳಕೆಯೊಡೆದ ಈ ಸಂಸ್ಥೆಯಿಂದು ಹೆಮ್ಮರವಾಗಿದೆ. ಈ ಸಾಧನೆಗೆ ಇಡೀ ತಂಡಕ್ಕೆ ಅಭಿನಂದನೆಗಳು. ಕ್ಯಾಂಪ್ಕೋ ಪವನ ಶಕ್ತಿ ಹಾಗೂ ಸೋಲಾರ್ ಪ್ಯಾನಲ್ ಮೂಲಕ ವಿದ್ಯುತ್ ಉತ್ಪಾದಿಸುವ ಕಾರ್ಯ ಮಾಡುವ ಮೂಲಕ ಪರಿಸರ ಸ್ನೇಹಿ ಸಂಸ್ಥೆಯಾಗಿಯೂ ಬೆಳೆದು ನಿಂತಿದೆ ಎಂದರು.

ದೀನದಯಾಲ್ ಉಪಾಧ್ಯಾಯರು ನೀಡಿದ ಮಾರ್ಗದರ್ಶನದಂತೆ ಬಿಜೆಪಿಯು ಗರೀಬಿ ಕಲ್ಯಾಣ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುತ್ತಿದೆ. ಅದರಂತೆ ಪ್ರತಿಯೊಬ್ಬ ಬಡವನಿಗೂ ಮನೆ, ಮನೆಯೊಳಗಡೆ, ವಿದ್ಯುತ್ , ನೀರು, ಗ್ಯಾಸ್ ಸಿಲಿಂಡರ್, ಶೌಚಾಲಯ, 5 ಲಕ್ಷದ ಆರೋಗ್ಯ ವಿಮೆ , ಉಚಿತ ಅಕ್ಕಿ ಹಾಗೂ ರೈತರಿಗೆ ಪ್ರತಿವರ್ಷ 6 ೦೦೦ ರೂ ನೀಡಲು ಸರಕಾರ ಕಟಿಬದ್ದವಾಗಿದ್ದು ಅದನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಲು ಶ್ರಮಿಸುತ್ತಿದೆ. ಸಮಗ್ರ ದೇಶದಲ್ಲಿ ಬಿಜೆಪಿಯ ಸರಕಾರವು ರಾಷ್ಟ್ರೀಯ ಸುರಕ್ಷತೆ, ರಾಷ್ಟ್ರದ ಸಮೃದ್ದಿ ಹಾಗೂ ಗರೀಬ್ ಕಲ್ಯಾಣ್ ವನ್ನು ಎಂಬ ಪ್ರಮುಖ ವಿಚಾರವನ್ನು ಗಮನದಲ್ಲಿರಿಸಿ ಕಾರ್ಯ ನಿರ್ವಹಿಸುತ್ತಿದೆ.

ಕ್ಯಾಂಪ್ಕೊದಲ್ಲಿ ಇಂದು ಶಿಲನ್ಯಾಸ ಮಾಡಿದ ಅಗ್ರಿ ಮಾಲ್ ಭಾರತದಲ್ಲಿ ಅತಿ ವಿಶಿಷ್ಟ ಎನಿಸಿದೆ. ಒಂದೂವರೆ ಲಕ್ಷ ಚದರ ಅಡಿಯ ಈ ಮಾಲ್ ನಲ್ಲಿ ಕೃಷಿ ಸಲಕರಣೆಗಳು, ಕೃಷಿ ಯಂತ್ರ, ಕೀಟನಾಶಕ, ರಸಗೊಬ್ಬರ, ಇಂಧನ ಹಾಗೂ ಸಂಗ್ರಹಕಾರ ಹೊಂದಿರುವ ದೇಶದ ಏಕೈಕ ಸಹಕಾರಿ ಮಾಲ್ ಆಗಿದೆ. ಕೃಷಿಗೆ ಸಂಬಂಧಿಸಿದ ಎಲ್ಲ ಸಾಮಗ್ರಿಗಳು ಒಂದೇ ಸೂರಿನಡಿ ಸಿಗುವ ಪರಿಕಲ್ಪನೆ ದೇಶಕ್ಕೆ ಹೊಸತು ಎಂದರು. ಕ್ಯಾಂಪ್ಕೂ ಉತ್ಪನಗಳ ಸೂಚಿಯಲ್ಲಿ ನೂತನವಾಗಿ ಸೇರಿಸಿರುವ ತೆಂಗಿನ ಎಣ್ಣೆ ಹಾಗೂ ಭದ್ರಾವತಿಯಲ್ಲಿ ನಿರ್ಮಿಸಿರುವ 13000 ಚದರ ಅಡಿ ವಿಸ್ತೀರ್ಣದ ಗೋದಾಮ ಕೂಡ ಇಂದು ಲೋಕಾರ್ಪಣೆಯಾಗಿರುತ್ತದೆ ಎಂದರು.

ಭಾರತ ಮಾತೆ ಮತ್ತು ಸಂಸ್ಥಾಪಕ ಅಧ್ಯಕ್ಷರಾದ ವಿ. ಸುಬ್ರಾಯ ಭಟ್ ಅವರಿಗೆ ಪುಷ್ಪಾರ್ಚನೆ ಮಾಡಲಾಯಿತು. ಡಿಜಿಟಲ್ ಲಾಂಚ್ ಮೂಲಕ ಪುತ್ತೂರಿನ ಕ್ಯಾಂಪ್ಕೋ ಅಗ್ರಿ ಮಾಲ್‌ಗೆ ಶಂಕುಸ್ಥಾಪನೆ, ತೆಂಗಿನಕಾಯಿ ಯೋಜನೆ ಕೊಬ್ಬರಿ ಎಣ್ಣೆ ಕಲ್ಪ ಪ್ರಾರಂಭ, ಭದ್ರಾವತಿ ಕ್ಯಾಂಪ್ಕೊ ಉಗ್ರಾಣ ಉದ್ಘಾಟನೆಯನ್ನು ನಡೆಸಲಾಯಿತು.



ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕರ್ನಾಟಕ ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ ಮಾತನಾಡಿ ಐವತ್ತು ವರ್ಷಗಳಿಂದ ಅತ್ಯಂತ ಯಶಸ್ವಿಯಾಗಿ ವ್ಯವಹಾರಿಕ ಆರ್ಥಿಕ ರಂಗದಲ್ಲಿ ಪ್ರಗತಿಯಾಗುತ್ತಿರುವ ಕಾಂಪ್ಕೊ ಮಾದರಿಯ ಸಂಸ್ಥೆಯಾಗಿದೆ. ಕ್ಯಾಪಿಟಲಿಸಂ ಹಾಗೂ ಕಮ್ಯುನಿಟಿಸಂ ಇದೆರಡಕ್ಕೆ ಉತ್ತರ ನೀಡಬೇಕಾದರೆ, ಕೋಆಪರಿಟಿಸಂ ಬರಬೇಕಾಗಿದೆ. ಕೋಆಪರಿಟಿಸಂ ಯಾವ ರೀತಿಯಲ್ಲಿ ಇರಬೇಕೆಂಬುದನ್ನು ಕ್ಯಾಂಪ್ಕೊ ಮಾಡಿ ತೋರಿಸಿದೆ. ಕ್ಯಾಂಪ್ಕೊ ಅಡಿಕೆಗೆ ಮಾರುಕಟ್ಟೆ ರಕ್ಷಣೆಯನ್ನು ನೀಡುವ ಕಾರ್ಯ ಮಾಡಿದೆ. ಕೊಕೋ ಬೆಲೆ ಕುಸಿತದ ಸಂದರ್ಭ ಖರೀದೆಗೆ ಮುಂದಾದ ಕ್ಯಾಂಪ್ಕೊ ಚಾಕಲೇಟು ಕಾರ್ಖಾನೆಯನ್ನು ಸ್ಥಾಪನೆ ಮಾಡಿ, ಇವತ್ತು 29 ಸಾವಿರ ಮೆಟ್ರಿಕ್ ಟನ್ ಚಾಕಲೇಟು ಉತ್ಪಾದನೆ ಮಾಡುವ ಮೂಲಕ ದೇಶದ ಏಕೈಕ ಸಹಕಾರಿಯಾಗಿದೆ. ರೈತರ ಬೆಳೆಗಳ ಆರ್ಥಿಕ ವೃದ್ಧಿ ಮಾಡುವ ಕೆಲಸವನ್ನು ಕ್ಯಾಂಪ್ಕೊ ಮಾಡಿದೆ. ರೈತರಿಗೆ ತಾಯಿಯಾಗಿ ಕ್ಯಾಂಪ್ಕೊ ಮಾರ್ಗದರ್ಶನ ಮಾಡುತ್ತಿದೆ ಎಂದು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮಾತನಾಡಿ ಮೋದಿ ಹಾಗೂ ಅಮಿತ್ ಷಾ ಅವರ ಶಕ್ತಿಯ ಮುಂದೆ ಜಗತ್ತಿನ ಯಾವ ಶಕ್ತಿಯೂ ಸರಿ ಸಾಟಿಯಾಗಿಲ್ಲ. ದೇಶವನ್ನು ಅಭಿವೃದ್ಧಿ ಪಥದಲ್ಲಿ ತೆಗೆದುಕೊಂಡು ಹೋಗುವ ವಿಚಾರದಲ್ಲಿ ಇವರಿಬ್ಬರ ಕೊಡುಗೆ ಅಪಾರವಾದದ್ದು. ಅಡಿಕೆ ಬೆಳೆಗಾರ ಸಂಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲಿ ಆರಂಭವಾದ ಕ್ಯಾಂಪ್ಕೊ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದಿದೆ. ಬಹುರಾಷ್ಟ್ರೀಯ ಸಂಸ್ಥೆಗಳಿಗೆ ಕಡಿಮೆ ಇಲ್ಲದ ರೀತಿಯಲ್ಲಿ ವ್ಯವಹಾರ ನಡೆಸಿದ ಕ್ಯಾಂಪ್ಕೊ ಲಕ್ಷಾಂತರ ರೈತರ ಹಾಗೂ ಸಾವಿರಾರು ಕಾರ್ಮಿಕರಿಗೆ ನೆಲೆಯನ್ನು ಒದಗಿಸಿದೆ ಎಂದು ತಿಳಿಸಿದರು.
ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ, ಇಂಧನ ಸಚಿವ ಸುನಿಲ್ ಕುಮಾರ್, ಗೃಹ ಸಚಿವ ಅರಗ ಜ್ಞಾನೇಂದ್ರ, ಸಹಕಾರ ಸಚಿವ ಎಸ್. ಟಿ. ಸೋಮಶೇಖರ್, ಬಂದರು ಹಾಗೂ ಒಳನಾಡು ಸಾರಿಗೆ ಸಚಿವ ಅಂಗಾರ ಎಸ್., ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಂಗಳೂರು ಸಂಸದ, ಪುತ್ತೂರು ಶಾಸಕ ಸಂಜೀವ ಮಠಂದೂರು, ಬಂಟ್ವಾಳ ಶಾಸಕ ಯು. ರಾಜೇಶ್ ನಾಯ್ಕ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ನಗರಸಭೆ ಅಧ್ಯಕ್ಷ ಕೆ. ಜೀವಂಧರ್ ಜೈನ್, ಕ್ಯಾಂಪ್ಕೊ ನಿರ್ದೇಶಕರಾದ ಎಸ್. ಆರ್. ಸತೀಶ್ಚಂದ್ರ, ದಯಾನಂದ ಹೆಗ್ಡೆ, ಕೃಷ್ಣಪ್ರಸಾದ್ ಮಡ್ತಿಲ, ಶಂಬುಲಿಂಗ ಹೆಗ್ಡೆ ಜಿ. ನಾಡ್ಗೋಡ್, ಕೆ. ಬಾಲಕೃಷ್ಣ ರೈ, ಜಯರಾಂ ಸರಳಾಯ, ಪದ್ಮರಾಜ್ ಪಟ್ಟಾಜೆ, ರಾಘವೇಂದ್ರ ಭಟ್, ರಾಧಾಕೃಷ್ಣ ಕೆ., ಸತ್ಯನಾರಾಯಣ ಪ್ರಸಾದ್, ಸುರೇಶ್ ಕುಮಾರ್ ಶೆಟ್ಟಿ ಪಿ., ರಾಘವೇಂದ್ರ ಎಚ್. ಎಂ. ಉಪಸ್ಥಿತರಿದ್ದರು.
ಪ್ರಿಯಾ ಭಟ್ ವಂದೇಮಾತರ ಹಾಡಿದರು. ಕ್ಯಾಂಪ್ಕೊ ವ್ಯವಸ್ಥಾಪಕ ನಿರ್ದೇಶಕ ಎಚ್. ಎಂ. ಕೃಷ್ಣಕುಮಾರ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಕ್ಯಾಂಪ್ಕೊ ಉಪಾಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗೆ ವಂದಿಸಿದರು.

ಆಧುನಿಕ ಪಟೇಲ್ ಆಧುನಿಕ ಸರ್ಧಾರ್ ವಲ್ಲಭಾಯಿ ಪಟೇಲ್ ಎಂದೇ ಕರೆಸಿಕೊಳ್ಳುವ ಅಮಿತ್ ಷಾ ಎಂದು ಮಾತು ಆರಂಭಿಸಿದ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ದೇಶದ ಅನೇಕ ಜ್ವಲಂತ ಸಮಸ್ಯೆಗೆ ಪರಿಹಾರ ಹುಡುಕಿ ಜಗತ್ತು ಮೆಚ್ಚುವ ರೀತಿಯಲ್ಲಿ ಆಡಳಿತ ನಡೆಸುವ ಕಾರ್ಯವನ್ನು ಮಾನ್ಯ ಪ್ರಧಾನಿಗಳಾದ ಮೋದಿಜಿ ಹಾಗೂ ಅಮಿತ್ ಷಾ ಅವರು ಮಾಡಿದ್ದಾರೆ ಎಂದು ಯಡಿಯೂರಪ್ಪ ಸಿಎಂ ಬೊಮ್ಮಾಯಿ ತಮ್ಮ ರಾಷ್ಟ್ರೀಯ ನಾಯಕನ ಗುಣಗಾನ ಮಾಡಿದರು.
ಬೆಲ್ಲ - ನೀರು: ವಾಹನ ನಿಲುಗಡೆ ಸ್ಥಳದಿಂದ ತೆಂಕಿಲ ಮೈದಾನಕ್ಕೆ ನಡೆದು ಭರುವ ಹಾದಿಯ ದಣಿವು ನಿವಾರಿಸಿಕೊಳ್ಳುವ ನಿಟ್ಟಿನಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಬೆಲ್ಲ - ನೀರು ನೀಡುವ ಕಾರ್ಯವನ್ನು ಸ್ವಯಂ ಸೇವಕರು ಮಾಡುತ್ತಿದ್ದರು.


ಹರಿದು ಬಂದ ಜನ ಸಾಗರ: ಕಾಸರಗೋಡು ಜಿಲ್ಲೆ, ಸುಳ್ಯ, ಬೆಳ್ತಂಗಡಿ, ಕಡಬ, ಬಂಟ್ವಾಳ, ಪುತ್ತೂರು ತಾಲೂಕು ಸೇರಿ ಜಿಲ್ಲೆಯ ವಿವಿಧ ಭಾಗಗಳಿಂದ ಜನರು ಆಗಮಿಸಿದ್ದರು. 17ಸಾವಿರ ಆಸನದ ವ್ಯವಸ್ಥೆ ಭರ್ತಿಯಾಗಿತ್ತು.

ಧ್ವಜ ಹಿಡಿದು ಬಂದರು.. ವಿವಿಧ ಭಾಗದಿಂದ ಸಮಾವೇಶಕ್ಕೆ ಬರುವ ಬಸ್ ಗಳಲ್ಲಿ ಬಿಜೆಪಿಯ ಧ್ವಜವನ್ನು ಹಾಕಲಾಗಿದೆ. ಬಸ್ ನಿಂದ ಸಭಾಂಗಣಕ್ಕೆ ಬರುವ ದಾರಿಯುದ್ದಕ್ಕೂ ಆಲಂಕಾರು ಉದಯ ಕುಮಾರ್ ಚಂದ್ರಶೇಖರ ಬಿಜೆಪಿ ಧ್ವಜ ಹಿಡಿದು ಬಂದರು.

ಜೈಕಾರ! ಅಮಿತ್ ಷಾ ವಾಹನ ಮುಖ್ಯ ರಸ್ತೆಯಿಂದ ಒಳಗೆ ಬರುತ್ತಿದ್ದಂತೆ, ಜನರ ಜೈಕಾರ ಮುಗಿಲು ಮುಟ್ಟಿತ್ತು. ಯಡಿಯೂರಪ್ಪ ಅವರು ಮಾತನಾಡಲು ಆಗಮಿಸುವ ಸಂದರ್ಭದಲ್ಲಿ ಜನರು ಜೈಕಾರ ಹಾಕಿದರು. ಶಾಸಕ, ಸಂಜೀವ ಮಠಂದೂರು ಅವರಿಗೂ ಜೈಕಾರ ಮೊಳಗಿತು.


