ಬೆಂಗಳೂರು: ‘ನಿಮ್ಮ ಪ್ರದೇಶದ ಜತೆಗೆ ನನ್ನ ಪ್ರದೇಶದ ಜನರಿಗೆ ಅವಿನಾಭಾವ ಸಂಬಂಧವಿದೆ. ದಕ್ಷಿಣಕನ್ನಡದವರು ಬೆವರು ಹರಿಸಿ ಅಡಿಕೆ ಬೆಳೆಯುತ್ತಿರಿ ಮತ್ತು ನಾವು ನೀವು ಬೆಳೆದ ಅಡಿಕೆ ತಿಂದ ದಣಿವು ಆರಿಸಿಕೊಳ್ಳುತ್ತೇವೆ’ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದು, “ದಕ್ಷಿಣ ಕನ್ನಡದವರು ಬೆಳೆಸಿದ ಬ್ಯಾಂಕುಗಳನ್ನು ಗುಜರಾತಿಗರು ನುಂಗಿ ನೀರು ಕುಡಿದರು” ಎಂದು ಹೇಳಿದ್ದಾರೆ.
“ದಕ್ಷಿಣ ಕನ್ನಡದವರು ವಿಜಯಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್‌ಗಳನ್ನು ಕಟ್ಟಿ ಬೆಳೆಸಿದರು. ಗುಜರಾತಿನವರು ಈ ಬ್ಯಾಂಕುಗಳನ್ನು ನುಂಗಿ ನೀರು ಕುಡಿದರು. ನಮ್ಮವರಿಗೆ ಕಟ್ಟುವುದು, ಬೆಳೆಸುವುದು ಗೊತ್ತು, ನಿಮಗೆ ಮಾರುವುದು, ಮುಳುಗಿಸುವುದು ಮಾತ್ರ ಗೊತ್ತು.” ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಶನಿವಾರ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ತೆಂಕಿಲದಲ್ಲಿರುವ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಕ್ಯಾಂಪ್ಕೋದ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ್ದ ಅಮಿತ್ ಶಾ ಅವರು, “ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಿಕೆ, ತೆಂಗು, ರಬ್ಬರ್, ಭತ್ತ ಸೇರಿದಂತೆ ಹಲವು ಬೆಳೆಗಳನ್ನು ಬೆಳೆಯಲಾಗುತ್ತದೆ. ನಾವು ಗುಜರಾತಿ ಜನರು ಅಡಿಕೆ ತಿನ್ನುವಾಗ ಯಾವಾಗಲೂ ಮಂಗಳೂರಿನ ಜನರನ್ನು ನೆನೆಪಿಸಿಕೊಳ್ಳುತ್ತೇವೆ. ಗುಜರಾತ್ ಜನರು ಅಡಿಕೆ ತಿಂದರೆ, ದಕ್ಷಿಣ ಕನ್ನಡದ ಜನರು ಅಡಿಕೆ ಬೆಳೆಯುತ್ತಾರೆ’ ಎಂದು ಹೇಳಿದ್ದರು.