ಫೆ 11 ರಂದು ಪುತ್ತೂರಿಗೆ ಪ್ರಪ್ರಥಮ ಬಾರಿಗೆ ಆಗಮಿಸಿದ ಕೇಂದ್ರ ಗೃಹ ಹಾಗೂ ಸಹಕಾರಿ ಸಚಿವ ಅಮಿತ್ ಶಾ ತುಳುನಾಡಿನ ಸಂಸ್ಕೃತಿ ಮತ್ತು ಇಲ್ಲಿ ಬೆಳೆಯುವ ಅಡಿಕೆ ಮತ್ತು ಗುಜರಾತಿನ ನಂಟಿನ ಬಗ್ಗೆ ಮಾತನಾಡಿದರು. ಅಲ್ಲದೇ ಇತ್ತೀಚೆಗೆ ಬಿಡುಗಡೆಯಾಗಿ ಬ್ಲಾಕ್ ಬ್ಲಸ್ಟರ್ ಎನಿಸಿದ ಕನ್ನಡ ಸಿನಿಮಾ ಕಾಂತಾರವನ್ನು ತನ್ನ ಭಾಷಣದಲ್ಲಿ ಉಲ್ಲೇಖಿಸಿದರು.
ಭಾಷಣದ ಆರಂಭದಲ್ಲಿ ಭಾರತ್ ಮಾತಕೀ ಜೈ ಉದ್ಘೋಷವನ್ನು ಸಭಿಕರಲ್ಲಿ ಹಾಕಿಸಿದ ಅವರು ಇಲ್ಲಿ ನೀವು( ಪುತ್ತೂರಿನ ಜನತೆ) ಹಾಕುವ ಭಾರತ್ ಮಾತಕೀ ಜೈ ಘೋಷಣೆಯೂ ತ್ರಿಪುರದಲ್ಲಿ ಚುನಾವಣಾ ಭಾಷಣದಲ್ಲಿ ನಿರತರಾಗಿರುವ ಪ್ರಧಾನಿ ಮೋದಿ ಕಿವಿಗೂ ಕೇಳುವಂತಿರಬೇಕು ಎಂದು ಹೇಳುವ ಮೂಲಕ ಸಭೆಯಲ್ಲಿ ಆರಂಭದಲ್ಲೆ ವಿದ್ಯುತ್ ಸಂಚಾರ ಮೂಡಿಸಿದರು.
ನಾನಿವತ್ತು ಪುತ್ತೂರಿನ ಮಣ್ಣಿಗೆ ಕಾಲಿಟ್ಟಿದ್ದೇನೆ. ಪಶ್ಚಿಮ ಘಟ್ಟ ಹಾಗೂ ಅರಬ್ಬಿ ಸಮುದ್ರದ ಮಧ್ಯೆಯಿರುವ ಈ ಪುಣ್ಯ ಪಾವನ ಭೂಮಿಯು ಪರುಶುರಾಮ ಸೃಷ್ಟಿಯೆಂದು ವಿಶ್ವದಾದ್ಯಂತ ಪ್ರಖ್ಯಾತಿಯನ್ನು ಪಡೆದಿದೆ.ವಿಶಿಷ್ಟವಾದ ಧಾರ್ಮಿಕ ಹಾಗು ಸಾಂಸ್ಕೃತಿಕ ಪರಂಪರೆಯನ್ನು ಅವಿಭಜಿತ ದಕ್ಷಿಣ ಕನ್ನಡದಲ್ಲಿ ಕಾಣಬಹುದಾಗಿದೆ. ಇತ್ತೀಚೆಗಷ್ಟೆ ನಾನು ಕಾಂತಾರ ನೋಡಿದೆ. ನೋಡಿದ ಬಳಿಕ ಗೊತ್ತಾಯಿತ್ತು ಈ ಪ್ರದೇಶ ಎಷ್ಟೊಂದು ಸಾಂಸ್ಕೃತಿಕ ವಾಗಿ ಶ್ರೀಮಂತವಾಗಿದೆಯೆಂದು ಎಂದು ಹೇಳಿದಾಗ ಜನರ ಕರತಾಡನ ಮುಗಿಲು ಮುಟ್ಟಿತ್ತು.
ರಸ್ತೆ , ವೈಮಾನಿಕ, ಜಲ ಹಾಗೂ ರೈಲ್ವೇ ಹೀಗೆ ನಾಲ್ಕು ಸಾರಿಗೆ ವ್ಯವಸ್ಥೆಯ ಮೂಲಕ ವ್ಯಾಪಾರ ವಹಿವಾಟು ಮಾಡಬಹುದಾದ ಕರ್ನಾಟಕದ ಏಕೈಕ ಸ್ಥಳ ಮಂಗಳೂರು . ಇಂತಹ ಪುಣ್ಯ ಭೂಮಿಗೆ ನನ್ನ ಶತ ಶತ ಪ್ರಣಾಮಗಳು . ಇಲ್ಲಿಗೆ ಆಗಮಿಸಿದ ನಾನು ರಾಣಿ ಅಬ್ಬಕ್ಕ ನಿಗೆ ನಮಸ್ಕರಿಸುತ್ತೇನೆ. ಅಲ್ಲದೇ ಮಂಗಳಾದೇವಿ, ಕದ್ರಿ ಮಂಜುನಾಥ ಹಾಗೂ ಮಹಾಲಿಂಗೇಶ್ವರ ದೇಗುಲಗಳಿಗೆ ಪ್ರಣಾಮಗಳನ್ನು ಸಲ್ಲಿಸುತ್ತೇನೆ.
ದೇಶಾದ್ಯಂತ ಕೆಲವೇ ಕೆಲವು ಪ್ರದೇಶಗಳು ವಿಷಮ ಭೌಗೋಳಿಕ ಪರಿಸ್ಥಿತಿ ಯಲ್ಲೂ ಕೃಷಿ ಮಾಡಿ ದೇಶದ ಸಂಪತ್ತನ್ನು ಸಮೃದಗೊಳಿಸಿವೆ. ಅದರಲ್ಲಿ ದ.ಕ ಜಿಲ್ಲೆಯೂ ಒಂದು. ಅಡಿಕೆ,ತೆಂಗಿನ ಕಾಯಿ, ಕಾಳು ಮೆಣಸು, ಗೇರು ಬೀಜ, ರಬ್ಬರ್ ಹಾಗೂ ಭತ್ತ ಬೆಳೆಯುವ ಮೂಲಕ ಇಲ್ಲಿನ ರೈತರು ಬೆವರು ಹರಿಸಿ ದೇಶದ ಅಭಿವೃದ್ದಿಗೆ ಕೊಡುಗೆ ನೀಡುತ್ತಿದ್ದಾರೆ
ನನ್ನ ಗುಜರಾತಿನ ಜನರು ಇಲ್ಲಿನ ರೈತರು ಬೆಳೆದ ಅಡಿಕೆಯನ್ನು ಸೇವಿಸುತ್ತಿದ್ದು ಅದನ್ನು ಯಾವಾಗಲೂ ಸ್ಮರಿಸುತ್ತಿರುತ್ತಾರೆ. ನಿಮ್ಮ ಪ್ರದೇಶದ ಜತೆಗೆ ನನ್ನ ಪ್ರದೇಶದ ಜನರಿಗೆ ಅವಿನಾಭಾವ ಸಂಬಂಧವಿದೆ. ನೀವು ಬೆವರು ಹರಿಸಿ ಅಡಿಕೆ ಬೆಳೆಯುತ್ತಿರಿ ಮತ್ತು ನಾವು ನೀವು ಬೆಳೆದ ಅಡಿಕೆ ತಿಂದ ದಣಿವು ಆರಿಸಿಕೊಳ್ಳುತ್ತೇವೆ
ಕ್ಯಾಂಪ್ಕೂ ಸುವರ್ಣ ಮಹೋತ್ಸವದ ಆಮಂತ್ರಣ ಬಂದಾಗ ಇದಕ್ಕೆ ಹೋಗಬೇಕು ಬೇಡವೇ ಎಂಬ ದ್ವಂದ್ವ ದಲ್ಲಿದ್ದ ನಾನು ಈ ಅಂತರಾಜ್ಯ ಸಹಕಾರಿ ಸಂಸ್ಥೆಯ ಸಾಧನೆ, ಪ್ರಗತಿ ಹಾಗೂ ಕಾರ್ಯ ಶೈಲಿಯನ್ನು ಸೂಕ್ಷ್ಮವಾಗಿ ಗಮನಿಸಿದ್ದು , ಇದಕ್ಕೆ ಬೆಂಬಲಿಸಲು ಇದರ ಕಾರ್ಯಚಟುವಟಿಕೆಯನ್ನು ಸಮರ್ಥಿಸಲು ಸಹಕಾರಿ ಸಚಿವನಾಗಿ ನಾನು ಹೋಗಲೆ ಬೇಕೆಂದು ನಿರ್ಧರಿಸಿದೆ ಎಂದು ಪುತ್ತೂರಿಗೆ ಆಗಮಿಸಿದ ಕಾರಣವನ್ನು ಶಾ ಬಿಚ್ಚಿಟ್ಟರು